ಬೆಳಗಾವಿ: ಕೃಷಿ ಹೊಂಡ ಹಾಗೂ ಕೊಳವೆ ಬಾವಿ ನಿರ್ಮಾಣ ಸೇರಿದಂತೆ ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ನಿಗದಿತ ಗುರಿಯನ್ನು ಶೇ.100ರಷ್ಟು ಸಾಧಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳು ಎಸ್‍ಸಿಪಿ/ಟಿಎಸ್‍ಪಿ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೇಷ್ಮೆ ಇಲಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಕೆಲ ಅಧಿಕಾರಿಗಳು ಸಮರ್ಪಕ ಮಾಹಿತಿ ಇಲ್ಲದೇ ಸಭೆಗೆ ಹಾಜರಾಗಿರುವುದಕ್ಕೆ ಸಿ.ಎಸ್.ಶಿವಳ್ಳಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಗಳು ನೀಡಿದ ಮಾಹಿತಿ ಹಾಗೂ ಅಧಿಕಾರಿಗಳು ನೀಡುವ ವಿವರಣೆ ತಾಳೆಯಾಗದಿರುವುದನ್ನು ಗಮನಿಸಿದ ಅವರು, ಸಭೆಗೆ ಸರಿಯಾಗಿ ಮಾಹಿತಿ ನೀಡದಿದ್ದರೆ ಸಭೆ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಎನ್.ಜಯರಾಮ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಗಾದಿ ಗೌತಮ್ ಅವರು, ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಮುಂಬರುವ ದಿನಗಳಲ್ಲಿ ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಸೂಚನೆ ನೀಡಿದರು.
ಬೇಸಿಗೆ ಸಮೀಪಿಸುತ್ತಿರುವುದರಿಂದ ಪ್ರತಿಯೊಂದು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕೊಳವೆಬಾವಿ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಸೂಚನೆ ನೀಡಿದರು.