Breaking News

ಹಳ್ಳ ಹಿಡಿದ ಯೋಜನೆಗಳು, ಗಟ್ಟಿಯಾಗದ ಗಡಿ…!

ಬೆಳಗಾವಿ:ರಾಜ್ಯದ ಗಡಿ ಪ್ರದೇಶವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಸರಕಾರಗಳು ಘೋಷಣೆ ಮಾಡಿರುವ ಅನೇಕ ಅಭಿವೃದ್ಧಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಳಗಾವಿ ಮಹಾನಗರದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ.
ನಗರದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬೆಳಗಾವಿ ನಗರದಲ್ಲಿ ರಿಂಗ್ ರಸ್ತೆಯ ಪ್ರಸ್ತಾವಣೆಯನ್ನು ಸಿದ್ದಪಡಿಸಿ ಹಲವಾರು ವರ್ಷಗಳೇ ಗತಿಸಿವೆ. ಆದರೆ ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದುರಿಂದ ರಿಂಗ್ ರಸ್ತೆಯ ಪ್ರಸ್ತಾವಣೆ ವಿಧಾನಸೌಧದಲ್ಲಿಯೇ ಧೂಳು ತಿನ್ನುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ಬಳಿ ಮೈಸೂರು ಕೃಷ್ಣರಾಜ್ ಬೃಂದಾವನ ಮಾದರಿಯಲ್ಲಿ ಬೃಹತ್ ಉದ್ಯಾನವನ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಈ ಯೋಜನೆ ರೂಪಗೊಳ್ಳುವ ಮೊದಲೆ ಕಮರಿ ಹೋಗಿದೆ.
ಗಡಿ ಗಟ್ಟಿಯಾಗಬೇಕಾದರೆ ಇಲ್ಲಿ ಅನೇಕ ಅಭಿವೃದ್ದಿ ಯೋಜನೆಗಳು ಜಾರಿಗೆ ಬರುವುದು ಅತ್ಯಗತ್ಯವಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ವಾತಾವರಣವಿದೆ. ರಾಜ್ಯ ಸರಕಾರ ಗಡಿ ಭಾಗದ ಬೆಳಗಾವಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಜನ ಉದ್ಯೋಗ ಹುಡುಕಿಕೊಂಡು ನೆರೆಯ ಗೋವಾ ರಾಜ್ಯಕ್ಕೆ ಗುಳೆ ಹೊರಟಿದ್ದಾರೆ.
ಗಡಿನಾಡ ಗುಡಿಯ ರಿಂಗ್ ರಸ್ತೆ, ಬೃಂದಾವನ ಮಾದರಿಯ ಉದ್ಯಾನವನ, ಐಟಿ ಪಾರ್ಕ್, ಅಮ್ಯೂಸ್‍ಮೆಂಟ್ ಪಾರ್ಕ್, ಹಲಗಾ ಮಚ್ಚೇ ಬೈಪಾಸ್ ರಸ್ತೆ ನಿರ್ಮಾಣದ ಯೋಜನೆಗಳು ಸೇರಿದಂತೆ ಹತ್ತು ಹಲವು ಯೋಜನೆಗಳು ಘೋಷಣೆಗೊಂಡರೂ ಅಧಿಕಾರಿಗಳ ನಿರ್ಲಕ್ಷ್ಯ ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿ ರಾಜ್ಯ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆಗಳು ಸಂಪೂರ್ಣವಾಗಿ ಹಳ್ಳ ಹಿಡಿದಂತಾಗಿವೆ.
ರಾಜ್ಯ ಸರಕಾರ ಬೆಳಗಾವಿ ಮಹಾನಗರದ ಅಭಿವೃದ್ಧಿಗಾಗಿ 100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿ ಎರಡು ವರ್ಷಗಳೇ ಗತಿಸಿವೆ. ಈ ಅನುದಾನದಲ್ಲಿ ನಗರದಲ್ಲಿ ಫ್ಲೈಓವರ್ ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಈ ಕಾಮಗಾರಿಯ ಜವಾಬ್ದಾರಿ ಹೊತ್ತ ಲೊಕೋಪಯೋಗಿ ಇಲಾಖೆ ಇನ್ನೂವರೆಗೆ ಯೋಜನೆಯ ನೀಲನಕ್ಷೆಯನ್ನೇ ಸಿದ್ದಪಡಿಸಿಲ್ಲ. ಅಧಿಕಾರಿಗಳು ಈ ರೀತಿ ಆಮೆ ನಡಿಗೆಯಿಂದ ಸಾಗಿದರೆ ರಾಜ್ಯದ ಗಡಿ ಗಟ್ಟಿಯಾಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ರಾಜ್ಯ ಸರಕಾರ ಪ್ರಥಮ ಬಜೆಟ್‍ನಲ್ಲಿಯೇ ಬೆಳಗಾವಿ ಮಹಾನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ನಿರ್ಧಾರವೂ ಸಾಕಾರಗೊಳ್ಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಬೆಳಗಾವಿ ನಗರದಲ್ಲಿ ಸಂಚಾರ ವ್ಯೆವಸ್ಥೆ ಸುಗಮಗೊಳಿಸಲು ಪೊಲೀಸ್ ಆಯುಕ್ತಾಲಯದ ಮೂಲಕ ಬೆಲ್ ಟ್ರ್ಯಾಕ್ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸದರೂ ಈ ಯೋಜನೆಯೂ ಎರಡು ವರ್ಷದಿಂದ ಕುಂಟುತ್ತಾ ಸಾಗಿದೆ
ರಾಜ್ಯ ಸರಕಾರ ಬೆಳಗಾವಿ ಮಹಾನಗರದ ಐತಿಹಾಸಿಕ ಕೋಟೆಯ ಸಂರಕ್ಷಣೆ ಹಾಗೂ ಅಭಿವೃದ್ದೀಗೆ 25 ಲಕ್ಷ ಮಂಜೂರು ಮಾಡಿದೆ. ಆದರೆ ಈ ಕುರಿತು ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಇಷ್ಟೇಲ್ಲ ಯೋಜನೆಗಳನ್ನು ಸರಕಾರ ಘೋಷಣೆ ಮಾಡಿದೆಯಾದರೂ ಈ ಯೋಜನೆಗಳು ಅನುಷ್ಠಾನಕ್ಕೆ ಬಾರದಿರುವುದು ಜಿಲ್ಲೆಯ ದೊಡ್ಡ ದುರಂತವೇ ಸರಿ.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.