Breaking News

ನಾಲ್ಕುಜನ ಸಚಿವರಿದ್ದರೂ ಬೆಳಗಾವಿ ಅನಾಥ….!!!

ಬೆಳಗಾವಿ-ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಅಸ್ತಿತ್ವದಲ್ಲಿ ಬರಲು ಬೆಳಗಾವಿ ರಾಜಕಾರಣ ಪ್ರಮುಖ ಪಾತ್ರವಹಿಸಿರುವ ಸಂದರ್ಭ ಪ್ರಸ್ತುತ ಒಂದಿಷ್ಟು ಮಾಸಿರಬಹುದು. ಇದೇ ಕಾರಣಕ್ಕಾಗಿಯೇನೋ ಬೆಳಗಾವಿ ಜಿಲ್ಲೆಗೆ ಈ ಸರ್ಕಾರದಲ್ಲಿ ಒಂದಲ್ಲ ಎರಡಲ್ಲ ನಾಲ್ಕು ಸಚಿವ ಸ್ಥಾನ ಲಭಿಸಿವೆ. ಯಡಿಯೂರಪ್ಪ ಸರ್ಕಾರದಲ್ಲಿನ ಉಪ ಮುಖ್ಯಮಂತ್ರಿಗಳಲ್ಲಿ ಓರ್ವರು ಬೆಳಗಾವಿ ಜಿಲ್ಲೆಯವರೇ ಆಗಿದ್ದು, ಅದು ಪ್ರಭಾವಿ ರಾಜಕಾರಣಿ ಲಕ್ಷ್ಮಣ ಸವದಿ ಎಂಬುದು ಗೊತ್ತಿರುವ ಸಂಗತಿ. ಸರ್ಕಾರದ ಬೀಳಿಸುವಲ್ಲಿ ಮತ್ತು ರಚಿಸುವಲ್ಲಿ ತುಂಬಾ ಸುದ್ಧಿಯಲ್ಲಿದ್ದ ಇನ್ನೋರ್ವ ಪ್ರಭಾವಿ ರಾಜಕಾರಣಿ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯವರು. ಬಿಜೆಪಿಗೆ ನಿಷ್ಟಾವಂತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೊಂದಿರುವ ಶಶಿಕಲಾ ಜೊಲ್ಲೆ ಬೆಳಗಾವಿಯವರೆ. ಶ್ರೀಮಂತ ಪಾಟೀಲ ಎಂಬವರೂ ಬೆಳಗಾವಿ ಜಿಲ್ಲೆಯವರೇ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರು ಹೊರತುಪಡಿಸಿದರೆ ಹೆಚ್ಚು ಸಚಿವ ಸ್ಥಾನ ಬಹುಷಃ ಬೆಳಗಾವಿ ಪಡೆದುಕೊಂಡಿದೆ. ಇವರೆಲ್ಲ ಮನಸ್ಸು ಮಾಡಿದರೆ ಬೆಂಗಳೂರಿನ ಸರ್ಕಾರವನ್ನು ಬೆಳಗಾವಿಯಲ್ಲಿಯೇ ತರಬಹುದು. ಆದರೂ ಬೆಳಗಾವಿ ಪ್ರಸ್ತುತ ಸಂದರ್ಭದಲ್ಲಿ ಅನಾಥ ಭಾವ ಅನುಭವಿಸುತ್ತಿದೆ.

ಹಾಗೆ ನೋಡಿದರೆ ಬೆಳಗಾವಿ ಜಿಲ್ಲೆಗೆ ರಾಜಕೀಯ ಅನ್ನುವುದು ಮೊದಲಿನಿಂದಲೂ ಸಾರ್ವಜನಕರಿಂದ ಒಂದು ಅಂತರ ಕಾಯುದುಕೊಳ್ಳುತ್ತಲೇ ಬಂದಿರುವುದರಿಂದ ಇಲ್ಲಿಯ ಜನತೆಗೆ ತಕ್ಷಣ ಸಮಸ್ಯೆಗಳ ಪರಿಹಾರ ಹಾಗೂ ಗುರುತರವಾದ ಅಭಿವೃದ್ಧಿಯ ದೃಷ್ಟಿಯಿಂದ ರಾಜಕಾರಣದ ಅನುಭವ ಲಭಿಸಿಲ್ಲ. ಸಧ್ಯ ಲಭಿಸುವ ಲಕ್ಷಣಗಳೂ ಕಾಣುತ್ತಿಲ್ಲ.

ಇಡೀ ಜಗತ್ತನ್ನೇ ತಲ್ಲಣಗೊಳಿಸಿ, ಸಾವಿನ ದವಡೆಗೆ ನೂಕಿರುವ ಕೋವಿಡ್ -19 ಸಾಂಕ್ರಾಮಿಕ ರೋಗ ಭಾರತವನ್ನೂ ಅಲುಗಾಡಿಸಿದೆ. ಕರ್ನಾಟದಕಲ್ಲಿ ವೈರಾಣು ಸೋಂಕಿತರ ಸಂಖ್ಯೆ ನಿತ್ಯ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವಿದೆ. ಆರಂಭದಲ್ಲಿ ಕೊರೊನಾದಿಂದ ದೂರವಿದ್ದ ಬೆಳಗಾವಿ ಇಂದು ಸೋಂಕಿತರ ಸಂಖ್ಯೆಯನ್ನು ಹತ್ತಕ್ಕೆ ಏರಿದೆ. ಇದರಿಂದ ಜನರಲ್ಲಿ ನಿತ್ಯ ಆತಂಕ ಹೆಚ್ಚಾಗುತ್ತಲೇ ಇದೆ. ದುಡಿಯುವ ಕೈಗಳು ಮುಂದೆನು ಎಂದು ಮುಗಿಲಿನತ್ತ ನೋಡುತ್ತಿವೆ. ಇಂಥದ ಮಧ್ಯ ಜಿಲ್ಲಾ ಆಡಳಿತ, ಪೊಲೀಸ್ ವ್ಯವಸ್ಥೆ, ವೈದ್ಯರು, ದಾದಿಯರು ತಮ್ಮ ಕರ್ತವ್ಯವನ್ನು ಪಾಲಿಸುವಲ್ಲಿ ಕಾರ್ಯತತ್ಪರವಾಗಿದ್ದು, ಮಾನವೀಯ ಮೆರೆದಿರುವುದು ಮೆಚ್ಚಬೇಕಾದ ಸಂಗತಿ. ಆದರೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಕೊರೊನಾ ವೈರಸ್ ನಿಯಂತ್ರದಲ್ಲಿ ಜಿಲ್ಲಾ ಆಡಳಿತದ ಸಮರ್ಥ ನಿರ್ವಹಣೆಯಲ್ಲಿ ಸಚಿವರ ಹಾಗೂ ಇನ್ನುವಳಿದ ಜನಪ್ರತಿನಿಧಿಗಳ ಪಾತ್ರ ಇರುವುದು ತಳ್ಳಿಹಾಕುವಂತಿಲ್ಲ. ಆದರೆ, ನಾಲ್ವರು ಸಚಿವರ ವಿಶೇಷತೆ ಅನುಭವಕ್ಕೆ ಬರುತ್ತಿಲ್ಲ. ರಾಜಕಾರಣದಿಂದ ಒಂದು ರೀತಿ ಅನಾಥ ಭಾವದಲ್ಲಿ ಬೆಳಗಾವಿ ಜಿಲ್ಲೆ ಇರುವುದನ್ನು ತಳ್ಳಿಹಾಕುವಂತಿಲ್ಲ. ಇನ್ನುಳಿದ ಇಲಾಖೆಗಳ ಅಭಿವೃದ್ಧಿ ಕಾರ್ಯಗಳು ನಿಂತಿರುವುದರಿಂದ ಜಿಲ್ಲೆಯ ಮಂತ್ರಿಗಳಿಂದ ಜಿಲ್ಲೆಯ ಜನತೆ ಹೆಚ್ಚಿನ ನಿರೀಕ್ಷೆಸುವುದು ಸಹಜ. ಆದರೆ, ಪ್ರಭಾವಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಗೋಕಾಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡಿದ್ದರೆ, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ದೂರದ ಅಥಣಿಯ ತಮ್ಮ ನಿವಾಸದಲ್ಲಿ ಉಳಿದುಕೊಂಡಿದ್ದಾರೆ. ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ಕ್ಷೇತ್ರದಲ್ಲಿ ಉಳದುಕೊಂಡಿದ್ದರೆ, ಶ್ರೀಮಂತ ಪಾಟೀಲ ಎಂಬವರೊಬ್ಬರು ಬೆಳಗಾವಿ ಜಿಲ್ಲೆಯ ಮಂತ್ರಿಯೊಬ್ಬರಿದ್ದಾರೆ ಎಂಬುದೇ ಬಹುತೇಕ ಜಿಲ್ಲೆಯ ಜನತೆ ಮರೆತಿದ್ದಾರೆ.

ಇಷ್ಟೆಲ್ಲ ಮಂತ್ರಿಗಳಿರುವ ಬೆಳಗಾವಿ ಜಿಲ್ಲೆಗೆ ಬೆಳಗಾವಿ ಮಂತ್ರಿಗಳಿಂದ ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನ ಇದುವರೆಗೆ ಲಭಿಸಿಲ್ಲ. ನಿನ್ನೆ ಮುಖ್ಯಮಂತ್ರಿಗಳು ಪ್ರಕಟಿಸಿದ ನೂತನ ಉಸ್ತುವಾರಿಗಳ ಮಂತ್ರಿಗಳ ಪಟ್ಟಿಯಲ್ಲಿ ಬೆಳಗಾವಿ ಮಂತ್ರಿಗಳ ಉಡಿಯಲ್ಲಿ ಬೆಳಗಾವಿ ಉಸ್ತುವಾರಿ ಲಭಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ಜನತೆಗೆ ರಾಜಕೀಯ ಅನಾಥಭಾವಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. ಹುಬ್ಬಳ್ಳಿ – ಧಾರವಾಡದ ಬಗ್ಗೆ ವಿಶೇಷ ಮಮಕಾರ ಹೊಂದಿರುವ ಸಚಿವ ಜಗದೀಶ ಶೆಟ್ಟರ ಅವರೇ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಕೊರೊನಾ ಸೋಂಕಿ ಪ್ರಭಾವದ ಮಧ್ಯ ಕಾಟಾಚಾರಕ್ಕೆ ಒಂದೆರಡು ಸಲ ಅಧಿಕಾರಿಗಳ ಸಭೆ ನಡೆಸಿದ ಉಸ್ತುವಾರಿ ಸಚಿವ ಜಗದೀಶ ಶಟ್ಟರ ಅವರು ಬೆಳಗಾವಿ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತ ಬಂದಿದ್ದಾರೆ. ಉದ್ಯಮದಾರರ ಸಮಾವೇಶ ಹುಬ್ಬಳ್ಳಿಯಲ್ಲಿಯೇ ಆಯೋಜಿಸುವಲ್ಲಿ ಯಶಸ್ವಿಯಾದ ಶೆಟ್ಟರ ಅವರು ಕೊರೊನಾ ಪ್ರಯೋಗಾಯ ಬೆಳಗಾವಿಯಲ್ಲಿ ಸಿದ್ಧಗೊಳ್ಳುವುದೆಂದು ಬಹುನಿರೀಕ್ಷಿತ ಸುಳ್ಳಾಗಿಸಿ, ಹುಬ್ಬಳ್ಳಿಯಲ್ಲಿಯೇ ಶೆಟ್ಟರ ಅವರು ಪಡೆದುಕೊಂಡಿರುವುದು ಅವರ ಮಲತಾಯಿ ಧೋರಣೆಗೆ ಪುಷ್ಠಿ ನೀಡುತ್ತದೆ.

ಹೀಗೆ, ಬೆಳಗಾವಿ ಜಿಲ್ಲೆ ಐದಾರು ಮಂತ್ರಿಗಳನ್ನು ಹೊಂದಿದ್ದರೂ ಅನಾಥ ಭಾವದಲ್ಲಿ ಉಳಿದುಕೊಂಡು ಮುಗಿಲತ್ತ ನೋಡುವಂತದ್ದಾಗಿದೆ. ಬೆಳಗಾವಿ ಜಿಲ್ಲಾ ಆಡಳಿತ ಮಾತ್ರ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡತ್ತಾಗಿದೆ. ಬಿ.ಎಸ್. ಯಡಿಯೂರಪ್ಪನವರ ಪ್ರೀತಿಯ ಜಿಲ್ಲೆ ಬೆಳಗಾವಿಗೆ ಮುಂದೇನು ಕಾಯ್ದಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.
*****

Check Also

ಶಿಕ್ಷಣ ಕ್ಷೇತ್ರಕ್ಕೆ 1500 ಕೋಟಿ ದೇಣಿಗೆ ನೀಡಿದ ಅಜೀಂ ಪ್ರೇಮಜೀ….

“ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ” ಲೋಗೋ ಅನಾವರಣ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ: ಸಚಿವ ಮಧು ಬಂಗಾರಪ್ಪ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.