ಬೆಳಗಾವಿ-ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನೀಲ ಬೆನಕೆ ಅವರನ್ನು ಕೈಬಿಟ್ಟು,ಬೆಳಗಾವಿ ಉತ್ತರ,ಬೆಳಗಾವಿ ಗ್ರಾಮೀಣ ಮತ್ತು ದಕ್ಷಿಣದಲ್ಲಿ ಮರಾಠಿ ಸಮುದಾಯದ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಬರುವ ಲೋಕಸಭೆ ಚುನಾವಣೆಯಲ್ಲಿ ಲೆಕ್ಕಾಚಾರದ ನಡೆ ಅನುಸರಿಸಲು ತೀರ್ಮಾಣಿಸಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗಾವಿ ಉತ್ತರ,ದಕ್ಷಿಣ,ಗ್ರಾಮೀಣ,ಬೈಲಹೊಂಗಲ,ಗೋಕಾಕ್ ಅರಭಾವಿ,ರಾಮದುರ್ಗ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.ಈ ಕ್ಷೇತ್ರದಲ್ಲಿ ಮರಾಠಾ ಹಾಗೂ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಎರಡೂ ಸಮುದಾಯಗಳ ಬಿಜೆಪಿ ನಾಯಕರು ಈಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಶಾಸಕರಾಗಿದ್ದರೂ ಬಿಜೆಪಿ ಟಿಕೆಟ್ ಪಡೆಯುವಲ್ಲಿ ವಿಫಲರಾದ ಅನೀಲ ಬೆನಕೆ ಅವರಿಗೆ ಈಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಮರಾಠಾ ಸಮುದಾಯವನ್ನು ಓಲೈಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.ಬೆಳಗಾವಿಯಿಂದ ಮರಾಠಾ ಸಮುದಾಯದ ನಾಯಕ ಅನೀಲ ಬೆನಕೆ ಅವರಿಗೆ ಟಿಕೆಟ್ ನೀಡಿ ಮರಾಠಾ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಬಿಜೆಪಿ ನಾಯಕರು ತಂತ್ರ ರೂಪಿಸಿದ್ದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪ್ರಬಲ ಲಿಂಗಾಯತ ಸಮುದಾಯದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಮತ್ತೆ ಕಣಕ್ಕಿಳಿಸಿ ಬೆಳಗಾವಿ ಜಿಲ್ಲೆಯಲ್ಲಿ ಮರಾಠಾ+ ಲಿಂಗಾಯತ ಫಾರ್ಮೋಲಾ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಮಾಜಿ ಶಾಸಕ ಅನೀಲ ಬೆನಕೆ,ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಎಂ.ಬಿ ಝಿರಲಿ, ಮುರುಘೇಂದ್ರಗೌಡ ಪಾಟೀಲ,ಮಾಜಿ ಶಾಸಕ ಸಂಜಯ ಪಾಟೀಲ ಅವರು ಕಸರತ್ತು ನಡೆಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರದ ಬಿಜೆಪಿ ಟಿಕೆಟ್ ವಂಚಿತ ಆಕಾಂಕ್ಷಿಗಳು ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಲಾಭಿ ನಡೆಸಿರುವುದು ವಿಶೇಷವಾಗಿದೆ.ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರಿಗೆ ಈ ಬಾರಿ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುವ ಲಕ್ಷಣಗಳು ಕಾಣುತ್ತಿಲ್ಲ ದಿವಂಗತ ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ಧಾ ಅಂಗಡಿ, (ಜಗದೀಶ್ ಶೆಟ್ಟರ್ ಅವರ ಸೊಸೆ) ಅವರು ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನ ಮಾಡಬಹುದು ಎಂದು ಹೇಳಲಾಗುತ್ತಿದೆ.ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ಈ ವಿಚಾರ ಮಂಗಲಾ ಅಂಗಡಿ ಅವರಿಗೆ ಬಿಜೆಪಿಯಲ್ಲಿ ಹಿನ್ನಡೆಗೆ ಕಾರಣವಾಗಿದ್ದು ಸತ್ಯ.
ಒಟ್ಟಾರೆ ಈ ಬಾರಿಯ ಲೋಕಸಭೆ ಚುನಾವಣೆಗೆ ಬೆಳಗಾವಿಯಲ್ಲಿ ಅಖಾಡಾ ರೆಡಿಯಾಗುತ್ತಿದೆ.ಟಿಕೆಟ್ ಯಾರಿಗೆ ಸಿಗಬಹುದು ಎಂದು ಸ್ಪಷ್ಟವಾಗಿ ಹೇಳುವದು ಕಷ್ಟವಾಗಿದ್ದರೂ ಸಹ ಮಾಜಿ ಶಾಸಕ ಅನೀಲ ಬೆನಕೆ ಟಿಕೆಟ್ ಲಾಟರಿ ಹೊಡೆಯುವ ಚಿತ್ರಣ ಗೋಚರಿಸುತ್ತಿದೆ.