ಬೆಳಗಾವಿ-ಇವತ್ತು ಆಷಾಢ ಏಕಾದಶಿ, ಮಹಾರಾಷ್ಟ್ರದ ಪಾಲಿಗೆ ಅದೊಂದು ನಾಡಹಬ್ಬವೇ ಇದ್ದಂತೆ. ಅದಕ್ಕಾಗಿಯೇ ಪ್ರತಿ ವರ್ಷ ಅಲ್ಲಿನ ಸಿಎಂ ಸ್ವಪತ್ನಿ ಸಮೇತರಾಗಿ ಆಗಮಿಸಿ ವಿಠ್ಠಲ-ರುಕ್ಮೀಣಿಗೆ ಪಂಢರಪುರಕ್ಕೆ ಆಗಮಿಸಿ ವಿಠ್ಠಲ-ರುಕ್ಮೀಣಿಗೆ ಸರ್ಕಾರಿ ಪೂಜೆ ಸಲ್ಲಿಸುವ ಸಂಪ್ರದಾಯ.
ಪ್ರತಿ ವರ್ಷ ಆಷಾಢ ಏಕಾದಶಿಗೆ ನಮ್ಮ ರಾಜ್ಯದಿಂದಲೂ ಸಹಸ್ರಾರು ವಾರಕರಿ ಸಂತರು ಕಾಲ್ನಡಿಗೆಯಲ್ಲಿ ತೆರಳಿ ವಿಠ್ಠಲ-ರುಕ್ಮೀಣಿ ದರ್ಶನ ಪಡೆದು ಪುನೀತರಾಗುತ್ತಾರೆ.
ಪ್ರತಿ ಆಷಾಢ ಏಕಾದಶಿಯ ಸರ್ಕಾರಿ ಪೂಜೆಯ ವೇಳೆ ಸಿಎಂ ದಂಪತಿ ಜೊತೆಗೆ ವಾರಿ (ಪಾದಯಾತ್ರೆ) ಮೂಲಕ ಬಂದ ಓರ್ವ ವಾರಕರಿ ದಂಪತಿಯು ಪೂಜೆ ಮಾಡುವ ಸಂಪ್ರದಾಯವಿದೆ. ಅದು ಕೂಡ ಸಿಎಂಗೆ ಸಮನಾಗಿ…
ಈ ಸಲ ಸಿಎಂ ಏಕನಾಥ ಶಿಂಧೆ ಮತ್ತು ಲತಾ ಶಿಂಧೆ ದಂಪತಿ ಜೊತೆಗೆ ಇವರಿಗೆ ಸಮಾನವಾದ ಸ್ಥಾನ ಪಡೆದು ವಿಠ್ಠಲನ ಪೂಜೆ ಸಲ್ಲಿಸುವ ಭಾಗ್ಯ ಪಡೆದಿದ್ದು ಅಹಮದನಗರ ಜಿಲ್ಲೆಯ ವಾಕಡಿ ಗ್ರಾಮದ ಭಾವುಸಾಹೇಬ ಕಾಳೆ ಮತ್ತು ಮಂಗಳ ಕಾಳೆ ದಂಪತಿ.
ವಿಠ್ಠಲನ ಬಲಬದಿಗೆ ಸಿಎಂ ದಂಪತಿ ಇದ್ರೆ, ಎಡ ಬದಿಯಲ್ಲಿ ಕಾಮನ್ ಮ್ಯಾನ್ ಕಾಳೆ ದಂಪತಿ ಇದ್ದರು.
ಹೀಗೆ ಓರ್ವ ವಾರಕರಿ ದಂಪತಿಯನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಾರೆ.
ಆಷಾಢ ಏಕಾದಶಿಗೂ ಮುಂಚೆಯೇ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ ಸಮೇತದ ವಾರಿ ಹೊರಡುತ್ತದೆ. ಇದು ಸುಮಾರು 21 ದಿನಗಳ ಪಾದಯಾತ್ರೆ. ಈ ಪಾದಯಾತ್ರೆ ಮೂಲಕ ವಾರಿಯೂ ಆಷಾಢ ಏಕಾದಶಿಗೂ ಮುಂಚೆ ಪಂಢರಪುರಕ್ಕೆ ಬಂದು ತಲುಪುತ್ತದೆ. ಹೀಗೆ ವಾರಿಯಲ್ಲಿ ಬರುವ ವಾರಕರಿ ದಂಪತಿಯ ಹೆಸರು ನೋಂದಣಿ ಮಾಡಬೇಕಾಗಿರುತ್ತದೆ. ಸಾವಿರಾರೂ ವಾರಕರಿ ದಂಪತಿಯ ಹೆಸರಿನ ಚೀಟಿಯನ್ನು ಹಾಕಿ, ಒಂದು ಚೀಟಿಯನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಾರೆ. ಆಗ ಯಾರ ಹೆಸರು ಬರುತ್ತದೆಯೋ ಅದೇ ದಂಪತಿಗೆ ಸಿಎಂಗೆ ಸಮಾನವಾದ ಸ್ಥಾನಮಾನ, ಗೌರವ ಲಭಿಸುತ್ತದೆ.
ಈ ರೀತಿಯ ಆಯ್ಕೆಯಲ್ಲಿ ಈ ಸಲ ಆಯ್ಕೆಯಾದ
ಕಾಳೆ ದಂಪತಿ ಕಳೆದ 25 ವರ್ಷದಿಂದ ಪ್ರತಿ ವರ್ಷ ವಾರಿಯಲ್ಲಿ ಬರುತ್ತಿದ್ದಾರೆ.
25 ವರ್ಷಗಳ ನಿರಂತರ ಸೇವೆಗೆ ಈಗ ಪಾಂಡುರಂಗ ಅವರಿಗೆ ಒಲಿದಿದ್ದಾನೆ.
ಪೂಜೆ ಮುಗಿದ ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿಯೂ ಈ ದಂಪತಿ ವೇದಿಕೆಯ ಮೇಲೆಯೂ ಸಿಎಂಗೆ ಸಮಾನವಾದ ಸ್ಥಾನದಲ್ಲಿಯೇ ಕುಳಿತುಕೊಳ್ಳುತ್ತಾರೆ.
ಇನ್ನು ಹೀಗೆ ಗೌರವ ಪಡೆದ ದಂಪತಿಗೆ ಒಂದಷ್ಟು ಸರ್ಕಾರಿ ಸೌಲಭ್ಯಗಳು ಸಿಗುತ್ತವೆ. ಈ ದಂಪತಿ ಒಂದು ವರ್ಷದವರೆಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.