Breaking News
Home / Breaking News / ಜಿಲ್ಲೆಯಲ್ಲಿ ವ್ಯಾಪಕ ಮಳೆ: ನದಿಪಾತ್ರ ಪರಿಶೀಲಿಸಿದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ

ಜಿಲ್ಲೆಯಲ್ಲಿ ವ್ಯಾಪಕ ಮಳೆ: ನದಿಪಾತ್ರ ಪರಿಶೀಲಿಸಿದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ

ನದಿಗಳ ಒಳಹರಿವು ಹೆಚ್ಚಳ; ಪ್ರವಾಹ ಭೀತಿ ಇಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, ): ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜತೆಗೆ ನದಿಪಾತ್ರದ ಸ್ಥಳಗಳೂ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭಾನುವಾರ(ಜು.23) ಭೇಟಿ ನೀಡಿದ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ ನದಿಯಲ್ಲಿ 1.07 ಲಕ್ಷ ಕ್ಯೂಸೆಕ್, ಘಟಪ್ರಭಾ ನದಿಯಲ್ಲಿ 30 ಸಾವಿರ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಯಲ್ಲಿ 13.50 ಸಾವಿರ ಕ್ಯೂಸೆಕ್ ಒಳಹರಿವು ಇರುತ್ತದೆ.
ಇದರಿಂದಾಗಿ ಆಲಮಟ್ಟಿ, ಹಿಡಕಲ್ ಮತ್ತು ನವಿಲುತೀರ್ಥ ಜಲಾಶಯಗಳಲ್ಲಿ ಕ್ರಮೇಣವಾಗಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಕುಡಿಯಲು ಹಾಗೂ ಬೆಳೆಗಳಿಗೆ ಅನುಕೂಲವಾಗಲಿದೆ.

ರೈತರು-ಸಾರ್ವಜನಿಕರು ಎಚ್ಚರ ವಹಿಸಬೇಕು:

ಜಿಲ್ಲೆಯಾದ್ಯಂತ ಇರುವ ಕೆಲವು ಸಣ್ಣ ಸೇತುವೆಗಳು ಮುಳುಗಡೆಯಾಗಿದ್ದು, ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆ ವಹಿಸಬೇಕು. ಜಲಾವೃತವಾಗಿರುವ ಈ ಮಾರ್ಗಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸಂಭವನೀಯ ಪ್ರವಾಹ ನಿರ್ವಹಣೆಗೆ ಸಿದ್ಧತೆ:

ಜಿಲ್ಲೆಯಲ್ಲಿ ಇದುವರೆಗೆ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಸೇರಿದಂತೆ ವಿವಿಧಇಲಾಖೆಗಳಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ಕೂಡ ಗುರುತಿಸಲಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಜನರು ಹಾಗೂ ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ತುರ್ತು ಕಾರ್ಯಾಚರಣೆಗೆ ಅಗತ್ಯವಿರುವ ಬೋಟ್ ಮತ್ತಿತರ ಸಲಕರಣೆಗಳು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಇದಲ್ಲದೇ ಔಷಧವಸ್ತುಗಳು, ಜಾನುವಾರುಗಳಿಗೆ ಮೇವು ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಸಂಬಂಧಿಸಿದ ಇಲಾಖೆಗಳು ಮಾಡಿಕೊಂಡಿವೆ ಎಂದು ಜಿಲ್ಲಾಧಿಕಾರಿ ಪಾಟೀಲ ಹೇಳಿದರು.

ಅರಣ್ಯ ಪ್ರದೇಶದ ಫಾಲ್ಸ್ ಭೇಟಿಗೆ ನಿರ್ಬಂಧ:

ಮಳೆಯ ಹಿನ್ನೆಲೆಯಲ್ಲಿ ವಾಟರ್ ಫಾಲ್ಸ್ ಗಳಿಗೆ ಜನರ ಭೇಟಿಯ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಪ್ರದೇಶದೊಳಗಿರುವ ಫಾಲ್ಸ್ ಗಳಿಗೆ ಸಾರ್ವಜನಿಕರ ಭೇಟಿಯನ್ನು ನುರಗಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಿಗಾ ವಹಿಸಲು ಅರಣ್ಯ ಇಲಾಖೆಯ ಗಾರ್ಡ್ ಗಳು, ಪ್ರವಾಸಿಮಿತ್ರರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ.
ಇತರೆ ಫಾಲ್ಸ್ ಗಳಲ್ಲಿ ಪ್ರವಾಸಿಗರು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಬಾರದು ಎಂದು ಮನವಿ ಮಾಡಿಕೊಂಡರು.

ಸೇತುವೆ ಮೇಲೆ‌ ಸಂಚಾರ ನಿರ್ಬಂಧ:

ಬೆಳಗಾವಿ ಜಿಲ್ಲೆಯ ಹದಿನೈದು ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ಸಾರ್ವಜನಿಕರ ಸಂಚಾರವನ್ನು ನಿರಗಬಂಧಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.

ಈ ಸೇತುವೆಗಳ ಎರಡೂ ಬದಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನೀರಿನ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳಲ್ಲಿ ಸುರಕ್ಷತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಅದೇ ರೀತಿ ಪ್ರವಾಸಿತಾಣಗಳಲ್ಲೂ ಸಿಬ್ಬಂದಿ ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.

ವೇದಗಂಗಾ-ದೂಧಗಂಗಾ ನದಿಪಾತ್ರದ ಜನರಿಗೆ ಎಚ್ಚರಿಕೆ:

ಬೆಳಗಾವಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ಬಳಿಯಲ್ಲಿ ಘಟಪ್ರಭಾ ನದಿಯ ಹರಿವು ವೀಕ್ಷಿಸಿದ ಹಿರಿಯ ಅಧಿಕಾರಿಗಳ ತಂಡವು ನಂತರ ನಿಪ್ಪಾಣಿ ತಾಲ್ಲೂಕಿನ ವೇದಗಂಗಾ-ದೂಧಗಂಗಾ ನದಿಪಾತ್ರದಲ್ಲಿ ಪರಿಶೀಲನೆ ಕೈಗೊಂಡಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಅವರು, ಸಂಭವನೀಯ ಪ್ರವಾಹ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಇದೇ ವೇಳೆ ನದಿಪಾತ್ರದ ಭೀವಶಿ, ಕಾರದಗಾ, ಜತ್ರಾಟ, ಭರವಾಡ, ಕುನ್ನೂರ ಮತ್ತು ಭೋಜ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ವೇದಗಂಗಾ-ದೂಧಗಂಗಾ ನದಿಗಳಲ್ಲಿ ಹೆಚ್ಚಿನ ಒಳಹರಿವು ಕಂಡುಬರುತ್ತಿದ್ದು, ಎರಡೂ ನದಿಗಳಲ್ಲಿ ಒಟ್ಟಾರೆ 24 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ.
ಆದ್ದರಿಂದ ಈ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಜಾನುವಾರುಗಳ ಸಮೇತ ಎತ್ತರದ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡರು.

ಚಿಕ್ಕೋಡಿ ಬಳಿಯ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿಯ ಒಳ ಹರಿವು ವೀಕ್ಷಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರಿನ ಮಟ್ಟ ಹಾಗೂ ಮಳೆಯ ಪ್ರಮಾಣದ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪಾಯಕಾರಿ ಸನ್ನಿವೇಶದ ಬಗ್ಗೆ ನದಿಪಾತ್ರದ ಜನರಿಗೆ ಮುಂಚಿತವಾಗಿ ಎಚ್ಚರಿಕೆಯನ್ನು ನೀಡಬೇಕು. ತುರ್ತು ಸಂದರ್ಭಗಳಲ್ಲಿ ಜನರು ಹಾಗೂ ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ತದನಂತರ ಯಡೂರ ಗ್ರಾಮದ ಬಳಿ ಅಧಿಕಾರಿಗಳು ಬೋಟ್ ನಲ್ಲಿ ಸಂಚರಿಸಿ ನದಿತೀರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ ಸೇರಿದಂತೆ ಕಂದಾಯ, ನೀರಾವರಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *