ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿರುವ 138 ಪೌರ ಕಾರ್ಮಿಕರ ಹೊರಗುತ್ತಿಗೆ ನೇಮಕಾತಿ ಗೋಲ್ ಮಾಲ್ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿತು.
ಪಾಲಿಕೆ ಸಭೆಯಲ್ಲಿ ನಗರ ಸೇವಕ ರವಿ ಸಾಳುಂಕೆ ಅವರು 138 ಪೌರಕಾರ್ಮಿಕರ ನೇಮಕಾತಿ ಪ್ರಶ್ನಿಸಿ ಮಂಡಿಸಿದ ಗಮನಸೆಳೆಯುವ ಸೂಚನೆಯ ಮೇರೆಗೆ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಯಿತು.
138 ಪೌರ ಕಾರ್ಮಿಕರು ಗುತ್ತಿಗೆದಾರರ ಹತ್ತಿರ ಸ್ವಚ್ಛತಾ ಕಾಮಗಾರಿ ನಡೆಸಿದ್ದಾರೆ. ಇವರ ನೇಮಕಾತಿ ವಿಚಾರದಲ್ಲಿ ಗೋಲ್ ಮಾಲ್ ನಡೆದಿದೆ ಎನ್ನಲಾಗಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವದರಿಂದ 138 ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಪಾಲಿಕೆಯ ಆರೋಗ್ಯ ಸ್ಥಾಯಿ ಸಮೀತಿ ಮಾಡಿದ ಎಡವಟ್ಟಿನಿಂದಾಗಿ ಇನ್ನುವರೆಗೆ ಸಂಬಳ ಸಿಗದೇ ಪರದಾಡುತ್ತಿದ್ದಾರೆ.
ಜುಲೈ 28 ರಂದು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ರವಿ ಧೋತ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 138 ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ನಿರ್ಣಯ ಕೈಗೊಳ್ಳಲಾಗಿತ್ತು, ಈ ನಿರ್ಣಯ ಅಗಸ್ಟ್ 16 ರಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಅಂಗೀಕರಿಸಲಾಗಿತ್ತು ಆದ್ರೆ ಜುಲೈ 1 ರಂದೇ ಪೌರ ಕಾರ್ಮಿಕರ ನೇಮಕಾತಿ ಆದೇಶ ನೀಡಲಾಗಿತ್ತು ಈ ಅಸಂಬದ್ಧ ನೇಮಕಾತಿ ಪ್ರಕ್ರಿಯೆಯನ್ನು ಲೋಕೋಪಯೋಗಿ ಸ್ಥಾಯಿ ಸಮೀತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಅವರು ಪ್ರಶ್ನೆ ಮಾಡಿದ್ದರು.
138 ಪೌರ ಕಾರ್ಮಿಕರು ದಿನನಿತ್ಯ ಶ್ರಮಿಸಿದರೂ ಅವರಿಗೆ ಸಂಬಳ ಸಿಗುತ್ತಿಲ್ಲ. ಈ ಗೋಲ್ ಮಾಲ್ ಹಿಂದೆ ಯಾರ ಕೈವಾಡವಿದೆ, ನೇಮಕಾತಿ ಪ್ರಕ್ರಿಯೆಯಲ್ಲಿ ಹಣಕಾಸಿನ ವ್ಯವಹಾರ ನಡೆದಿದೆಯಾ ? ಎನ್ನುವದರ ಬಗ್ಗೆ ತನಿಖೆ ಆಗಬೇಕಾಗಿದೆ.ಗೋಲ್ ಮಾಲ್ ತನಿಖೆಗಾಗಿ ಸಮೀತಿ ನೇಮಿಸುವಂತೆ ಇಂದು ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ