Breaking News
Home / Breaking News / ಕಿತ್ತೂರಿನ ಅಭಿವೃದ್ದಿಗೆ ಪ್ರತಿ ವರ್ಷ ಐದು ಕೋಟಿ ಕೊಡ್ತೀನಿ- ಸತೀಶ್ ಜಾರಕಿಹೊಳಿ

ಕಿತ್ತೂರಿನ ಅಭಿವೃದ್ದಿಗೆ ಪ್ರತಿ ವರ್ಷ ಐದು ಕೋಟಿ ಕೊಡ್ತೀನಿ- ಸತೀಶ್ ಜಾರಕಿಹೊಳಿ

ವಿಜಯೋತ್ಸವದ 200 ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,  -ರಾಜ್ಯ ಸರ್ಕಾರವು ಮುಂದಿನ ವರ್ಷ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭರವಸೆಯನ್ನು ನೀಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ಮಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ರಾಜ್ಯಮಟ್ಟದ ಕಿತ್ತೂರು ಉತ್ಸವವನ್ನು ಸೋಮವಾರ(ಅ.23) ಉದ್ಘಾಟಿಸಿ ಅವರು ಮಾತನಾಡಿದರು.

1824 ಅಕ್ಟೋಬರ್ 23 ರಂದು ಬ್ರಿಟೀಷರ ವಿರುದ್ಧ ನಡೆದ ಹೋರಾಟದಲ್ಲಿ ಚನ್ನಮ್ಮ ಜಯಗಳಿಸಿರುವುದರ ಸವಿನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 23 ರಂದು ವಿಜಯೋತ್ಸವ ಆಚರಿಸಲಾಗುತ್ತಿದೆ. ಮುಂದಿನ ವರ್ಷ 200 ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಕಳೆದ 25 ವರ್ಷಗಳಿಂದ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಾಲದಲ್ಲಿ ಉತ್ಸವವನ್ನು ಆರಂಭಿಸಲಾಗಿದ್ದು, ಅಂದಿನಿಂದ ನಾಡಿನ ಕಲೆ-ಸಂಸ್ಕೃತಿಯ ವೈಭವದ ಅನಾವರಣಗೊಳಿಸಲಾಗುತ್ತಿದೆ.

ನಮ್ಮ ನೆಲದ ರಕ್ಷಣೆಗಾಗಿ ಹೋರಾಟ ನಡೆಸಿದ ಚನ್ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದಾರೆ.
ಉತ್ಸವವನ್ನು ರಾಜ್ಯವ್ಯಾಪಿ ಉತ್ಸವವಾಗಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಿದ್ದಾರೆ. ಶಾಸಕರ ಪ್ರಯತ್ನದ ಫಲವಾಗಿ ಈ ವರ್ಷ ಬರಗಾಲದ ನಡುವೆಯೂ ಮೂರು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಸಲು ಸಾಧ್ಯವಾಗಿದೆ.

ಕಿತ್ತೂರಿಗೆ ಮೂಲಸೌಕರ್ಯ:

ಉತ್ಸವದ ಜತೆಗೆ ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಆದ್ಯತೆ ನೀಡುತ್ತ ಬರಲಾಗಿದೆ. ಐತಿಹಾಸಿಕ ಕಿತ್ತೂರು ಕೋಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಕೋಟೆಯ ಆವರಣದ ಸೌಂದರ್ಯೀಕರಣ ಮಾಡುವುದರ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.

ಲೊಕೋಪಯೋಗಿ ಇಲಾಖೆಯ ವತಿಯಿಂದ ಪ್ರತಿವರ್ಷ ಐದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ಕಿತ್ತೂರು ಪಟ್ಟಣದಲ್ಲಿ ಮೂಲಸೌಕರ್ಯ ಒದಗಿಸಲು ಈ ಅನುದಾನ ಬಳಕೆ ಮಾಡಲಾಗುವುದು. ಕಿತ್ತೂರು-ನಂದಗಡ-ಸಂಗೊಳ್ಳಿ ಪ್ರವಾಸಿ ಸರ್ಕಿಟ್ ಮಾಡಲಾಗುವುದು ಎಂದರು.

ಅತಿಥಿಯಾಗಿ ಮಾತನಾಡಿದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಮೂರು ದಿನಗಳ ಉತ್ಸವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಈ ಸಂದರ್ಭದಲ್ಲಿ ಐತಿಹಾಸಿಕ ಹೋರಾಟ ಹಾಗೂ ಚರಿತ್ರೆಯ ಮಹತ್ವದ ಬಗ್ಗೆ ನಡೆಯುವ ಚಿಂತನ-ಮಂಥನವನ್ನು ಜನರಿಗೆ ತಲುಪಿಸಬೇಕಿದೆ ಎಂದರು.

ಆಯಾ ಕಾಲದ ಸರಕಾರಗಳ ಪ್ರೋತ್ಸಾಹ ಹಾಗೂ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಉತ್ಸವ ರಾಜ್ಯಮಟ್ಟದ ಉತ್ಸವವಾಗಿದೆ ಎಂದರು.
ಮುಂದಿನ ವರ್ಷ ವಿಜಯೋತ್ಸವಕ್ಕೆ 200 ವರ್ಷಗಳಾಗುವುದರಿಂದ ಕಿತ್ತೂರು ಉತ್ಸವವು ರಾಷ್ಟ್ರಮಟ್ಟದ ಉತ್ಸವವನ್ನಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದು ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡರು.

ಕಿತ್ತೂರಿನ ಹೆದ್ದಾರಿಯನ್ನು ಕೈಗಾರಿಕೆಗಳ ಕಾರಿಡಾರ್ ಮಾಡುವ ಮೂಲಕ ಈ ಭಾಗದ ಸರ್ವತೋಮುಖ ಪ್ರಗತಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದು ಈರಣ್ಣ ಕಡಾಡಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಚನ್ನಮ್ಮನ ಕಿತ್ತೂರಿನ ಶಾಸಕ ಬಾಬಾಸಾಹೇಬ್ ಪಾಟೀಲ, ಕಿತ್ತೂರು ಉತ್ಸವವನ್ನು ಮುಂದಿನ ವರ್ಷ ರಾಷ್ಟ್ತಮಟ್ಟದ ಉತ್ಸವವನ್ನಾಗಿ ಮಾಡಲು ಎಲ್ಲ ರೀತೀಯ

ಬರಗಾಲದ ಮಧ್ಯೆಯೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದಾಗಿ ಸರಕಾರವು ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಇದಲ್ಲದೇ ಲೋಕೋಪಯೋಗಿ ಇಲಾಖೆಯ ವತಿಯಿಂದ ಪ್ರತಿವರ್ಷ ಐದು ಕೋಟಿ ರೂಪಾಯಿ ನೀಡಲಾಗುವುದು ಎಂದು ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಆದರೆ ಹತ್ತು ಕೋಟಿ ಅನುದಾನ ಪಡೆದುಕೊಂಡು ಕಿತ್ತೂರು ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು ಎಂದರು.

ಕೋಟೆಯ ಅಭಿವೃದ್ಧಿ; ಕೆರೆಗಳ ಅಭಿವೃದ್ಧಿಯ ಜತೆಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಲಾಗುವುದು. ಹೆಚ್ಚಿನ ಪ್ರಮಾಣದ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಬಾಬಾಸಾಹೇಬ್ ಪಾಟೀಲ ಜನರಿಗೆ ಭರವಸೆ ನೀಡಿದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಿತ್ತೂರು ಉತ್ಸವ ತ್ಯಾಗ-ಬಲಿದಾನ, ಕೆಚ್ಚೆದೆಯ ಹೋರಾಟ ಮತ್ತು ಸ್ವಾಭಿಮಾನದ ಉತ್ಸವವಾಗಿದೆ.
ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತಿತರರ ಹೋರಾಟದ ಫಲವಾಗಿ ನಾವು ಇಂದು ಉತ್ಸವ ಆಚರಿಸುತ್ತಿದ್ದೇವೆ. 200 ನೇ ವರ್ಷಾಚರಣೆಯು ರಾಷ್ಟ್ರಮಟ್ಟದ ಉತ್ಸವವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
2024 ರ ವೇಳೆಗೆ ಕೋಟೆಯನ್ನು ಅಭಿವೃದ್ಧಿಪಡಿಸುವ ಮೂಲಕ ಕಿತ್ತೂರು ಕೂಡ ರಾಷ್ಟ್ರಮಟ್ಟದ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಆಶೀರ್ಚನ ನೀಡಿದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ವೀರರಾಣಿ ಎಂಬ ಹೆಸರಿಗೆ ತಕ್ಕಂತೆ ಬದುಕಿದ ಏಕೈಕ‌ ಮಹಿಳೆ ಕಿತ್ತೂರು ಚೆನ್ನಮ್ಮ ಎಂದು ಬಣ್ಣಿಸಿದರು.

ಕೇಂದ್ರ ಸರಕಾರವು ಮೊದಲ ಸ್ವಾತಂತ್ರ್ಯ ಹೋರಾಟ ‘ಸಿಪಾಯಿ ದಂಗೆ’ ಎಂಬ ಠರಾವು ಬದಲಾಯಿಸಿ ಮೊದಲ ಸ್ವಾತಂತ್ರ್ಯ ಹೋರಾಟ ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟ ಎಂದು ತಿದ್ದುಪಡಿ ಮಾಡಿ ಠರಾವು ತೆಗೆದುಕೊಳ್ಳಬೇಕು.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮಳ ಹೆಸರಿಡಬೇಕು. 200 ವರ್ಷಾಚರಣೆ ಸಂದರ್ಭದಲ್ಲಿ ಈ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ.ಕೆ.ಧರಣಿದೇವಿ, ಬ್ರಿಟೀಷರ ವಿರುದ್ಧ ಸಮರ ಸಾರಿದ ಮೊಟ್ಟಮೊದಲ ಮಹಿಳೆ ಎಂಬ ಕೀರ್ತಿ ಕಿತ್ತೂರು ಚನ್ನಮ್ಮಳಿಗೆ ಸಲ್ಲುತ್ತದೆ. ಚನ್ನಮ್ಮಳ ಕೆಚ್ಚೆದೆಯ ಸ್ವಾಭಿಮಾನದ ಹೋರಾಟ ನಮಗೆಲ್ಲ ಆದರ್ಶಪ್ರಾಯರಾಗಿದೆ ಎಂದರು.
ಮಹಿಳಾ ಸ್ವಾಭಿಮಾನ ಹಾಗೂ ಸಮಾನತೆಗೆ ಮೊದಲಿನಿಂದಲೂ ನಮ್ಮಲ್ಲಿ ಆದ್ಯತೆ ನೀಡಿರುವುದಕ್ಕೆ ಚೆನ್ಮಮ್ಮಳೇ ಸಾಕ್ಷಿ ಎಂದು ಧರಣಿದೇವಿ ಅಭಿಪ್ರಾಯಪಟ್ಟರು.

ಚನ್ನಮ್ಮನ ವಂಶಸ್ಥರಿಗೆ ವೇದಿಕೆಯಲ್ಲಿ ಸನ್ಮಾನ:

ಕಿತ್ತೂರು ಚನ್ನಮ್ಮಳ ವಂಶಸ್ಥರಾದ ತೊಲಗಿಯ ಮಲ್ಲಸರ್ಜ ಚಂದ್ರಶೇಖರ್ ದೇಸಾಯಿ ಅವರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.
ಎಪಿಜೆ ಅಬ್ದುಲ್ ಕಲಾಂ ಅಂತರರಾಷ್ಟ್ರೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ನ್ಯಾಯವಾದಿ ಸರಸ್ವತಿ ಪೂಜಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ, ಬೆಳಗಾವಿ ಉತ್ತರ ಶಾಸಕರಾದ ಆಸೀಫ್(ರಾಜು) ಸೇಠ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಾಜಿ ಶಾಸಕ ಶ್ಯಾಮ್ ಘಾಟಗೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ಹಾಗೂ ಶೃತಿ ಜಾಧವ ನಿರೂಪಿಸಿದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ವಂದಿಸಿದರು.
ಸಾವಿರಾರು ಜನರು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವದ ರಸದೌತಣ ಸವಿದರು.
***

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *