Breaking News

ಸಂಗೊಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ…??

ಸಂಗೊಳ್ಳಿ, ನಂದಗಡ ಸಮಗ್ರ ಅಭಿವೃದ್ಧಿಗೆ ಬದ್ಧ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ಭರವಸೆ

ಬೆಳಗಾವಿ, – ಕ್ರಾಂತಿವೀರ ರಾಯಣ್ಣನ ಹುಟ್ಟೂರು‌ ಸಂಗೊಳ್ಳಿ ಮತ್ತು ನೇಣುಗಂಬಕ್ಕೇರಿದ ಖಾನಾಪುರ ತಾಲ್ಲೂಕಿನ ನಂದಗಡದ ಸಮಗ್ರ‌ಅಭಿವೃದ್ಧಿಗೆ‌ ಸರಕಾರ‌ ಬದ್ಧವಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ್ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ(ಜ.17) ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡ ಅಭಿವೃದ್ಧಿಗೆ 2016-17 ನೇ ಸಾಲಿನಲ್ಲಿ ಪ್ರಾಧಿಕಾರ ರಚಿಸಲಾಗಿದೆ.
ರಾಯಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿಗೆ ರಚಿಸಲಾದ ಪ್ರಾಧಿಕಾರಕ್ಕೆ ನೂರು ಎಕರೆ ಜಮೀನು ನೀಡಲಾಯಿತು.
ಅಪ್ಪಟ ದೇಶಭಕ್ತ ರಾಯಣ್ಣ ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಾರಣಕ್ಕ 267 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆ, ಶಿಲ್ಪವನ ನಿರ್ಮಿಸಲಾಗಿದೆ.

ಬಾಲಕಿಯರು ಸೇರಿದಂತೆ 230 ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ದೇಶಪ್ರೇಮ ಬೆಳೆಸಲು ಶಾಲೆ ಪ್ರೇರಣೆಯಾಗಿದೆ.
ಸಂಗೊಳ್ಳಿ ರಾಯಣ್ಣನಲ್ಲಿದ್ದ ತಾಯ್ನಾಡಿನ ಪ್ರೇಮವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು.
ಮೊಗಲರು‌ ಹಾಗೂ ಬ್ರೀಟಿಷರು ಸ್ವಂತ‌ ಸಾಮರ್ಥ್ಯದಿಂದ ಭಾರತವನ್ನು ಆಳಲಿಲ್ಲ; ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನಮ್ಮನ್ನು ಆಳುವಲ್ಲಿ ಯಶಸ್ವಿಯಾದರು.
ದೇಶಕ್ಕೆ ಸ್ವಾತಂತ್ರ್ಯ‌ ತಂದು ಕೊಟ್ಟಿರುವುದು ಮಹಾತ್ಮಾ‌ಗಾಂಧೀಜಿ ನೇತೃತ್ವದ ಕಾಂಗ್ರೆಸ್‌ ಎಂಬುದನ್ನು ಮರೆಯುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಹಲಗಲಿ ಬೇಡರು, ಟಿಪ್ಪು ಸುಲ್ತಾನ್ ಹೋರಾಟ‌ ಸ್ಮರಣೀಯ:

ಸುರಪುರದ ವೆಂಕಟಪ್ಪ‌ನಾಯಕ, ಹಲಗಲಿ‌ ಬೇಡರು, ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಅನೇಕ ಜನರು‌ ಬ್ರಿಟೀಷರ ವಿರುದ್ಧ ಹೋರಾಡಿದವರು. ಇವರ ದೇಶಪ್ರೇಮ ಸ್ಮರಣೀಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು‌ ಡಾ.ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಇಂತಹ ಮಹನೀಯರ ಹೋರಾಟದ ಬದುಕು, ಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ನಾವು ಇತಿಹಾಸವನ್ನು ತಿಳಿದುಕೊಳ್ಳದಿದ್ದರೆ ರಾಜಾ ವೆಂಕಟಪ್ಪ‌ ನಾಯಕರು, ಸಂಗೊಳ್ಳಿ ರಾಯಣ್ಣ, ಚೆನ್ನಮ್ಮನಂತಹ ಮಹನೀಯರು ಜನಮಾನಸದಿಂದ ಮರೆಯಾಗಿಬಿಡುತ್ತಾರೆ. ಆದ್ದರಿಂದ ಅವರ ಹೆಸರು‌ ಚಿರಸ್ಥಾಯಿಯಾಗಿಸುವ ಕೆಲಸವನ್ನು ಸರಕಾರ‌ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಅನ್ನ ನೀಡುವ ರೈತರು; ಅಕ್ಷರ ಕಲಿಸುವ ಶಿಕ್ಷಕರು ಹಾಗೂ ದೇಶ ಕಾಯುವ ಸೈನಿಕರ‌ ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೇರಿದ ಖಾನಾಪುರ ತಾಲ್ಲೂಕಿನ ನಂದಗಡದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಾವು ಸಂಗೊಳ್ಳಿ ರಾಯಣ್ಣ ಆಗದಿದ್ದರೂ ಪರವಾಗಿಲ್ಲ; ಅವರ ದೇಶಪ್ರೇಮವನ್ನಾದರೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಜಾತಿಧರ್ಮ‌ ಬದಿಗಿಟ್ಟು‌ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೈನಿಕ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ‌ ನೀಡಲಾಗುವುದು. ಪ್ರಾಧಿಕಾರಕ್ಕೂ ಆರ್ಥಿಕ‌ ನೆರವು ಒದಗಿಸಲಾಗುವುದು.
ಶಾಸಕ‌ ಮಹಾಂತೇಶ ಕೌಜಲಗಿ ಸಭ್ಯಸ್ಥ ರಾಜಕಾರಣಿ; ಅವರಂತಹ ಸಭ್ಯರು ಹಾಗೂ ಜಾತ್ಯಾತೀತರು ರಾಜಕಾರಣಕ್ಕೆ ಬರಬೇಕು.

ಸೈನಿಕ‌ ಶಾಲೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ‌ ಹೆಚ್ಚಿನ ಪ್ರವೇಶ ಕಲ್ಪಿಸಲು ಅವಕಾಶ‌ ಕಲ್ಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಆರ್ಥಿಕವಾಗಿ ಸಬಲವಾಗಿದೆ:

ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಸಮರ್ಪಕವಾಗಿ‌ ಅನುಷ್ಠಾನಗೊಳಿಸಿಯೂ ಕರ್ನಾಟಕ ರಾಜ್ಯ ಆರ್ಥಿಕವಾಗಿ ಸಬಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ-ಅಂಶಗಳ ಸಮೇತ‌ ಲೆಕ್ಕ ಬಿಚ್ಚಿಟ್ಟರು.

ಸರಕಾರ‌ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದು ವೇಳೆ ದಿವಾಳಿಯಾಗಿದ್ದರೆ ಪಂಚ ಗ್ಯಾರಂಟಿ‌ ಯೋಜನೆಗಳನ್ನು ಮತ್ತು ಇತರೆ ಅಭಿವೃದ್ಧಿ ಯೋಜನೆ‌ ಜಾರಿಗೊಳಿಸಲು ಹೇಗೆ ಸಾಧ್ಯವಿತ್ತು ಎಂದು ಪ್ರಶ್ನಿಸಿದರು.

ಸೈನಿಕ ಶಾಲೆ ಮಾದರಿಯ ಶಾಲೆಗಳನ್ನು ಆರಂಭಿಸಲು ಜಾರಕಿಹೊಳಿ ಒತ್ತಾಯ:

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ, ಸಂಗೊಳ್ಳಿ ರಾಯಣ್ಣನವರ ಹೆಸರು ದೇಶದಾದ್ಯಂತ ಪ್ರಸಿದ್ಧಿಗೊಳಿಸಲು ಅನುಕೂಲವಾಗುವಂತೆ ಸೈನಿಕ ಶಾಲೆಯನ್ನು ಆರಂಭಿಸಲಾಗಿದೆ. ಈ ಶಾಲೆ ಇಡೀ ದೇಶಕ್ಕೆ‌ ಮಾದರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸ್ಥಳೀಯ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಅನುಕೂಲವಾಗುವಂತೆ ರಾಜ್ಯದಾದ್ಯಂತ ಸೈನಿಕ ಶಾಲೆಯ ಮಾದರಿ‌ಯಲ್ಲಿ ಸಂಗೊಳ್ಳಿ ರಾಯಣ್ಣ ಶಾಲೆಗಳನ್ನು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಕರ್ನಾಟಕ ಸರಕಾರವು ಭೂಮಿ‌ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿರುವುದರಿಂದ ಶೇ.65 ಮತ್ತು 35ರ ಅನುಪಾತದಲ್ಲಿ ಪ್ರವೇಶ ಕಲ್ಪಿಸಬೇಕು; ಇಂತಹ ಶಾಲೆಗಳನ್ನು ರಾಜ್ಯದಲ್ಲಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಬೇಕು ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಸುರೇಶ್ ಬಿ‌.ಎಸ್. ಅವರು ಮಾತನಾಡಿ, 257 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಲ್ಲಿ ಮಾದರಿ‌ ಸೈನಿಕ ಶಾಲೆ ಸ್ಥಾಪಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದರು.
ಸವದತ್ತಿ ಯಲ್ಲಮ್ಮ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ, ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮಸ್ಥಳ ಹೀಗೆ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿರುವುದರಿಂದ ಈ ಕ್ಷೇತ್ರಗಳನ್ನು ಪ್ರವಾಸಿತಾಣಗಳನ್ನಾಗಿ ರೂಪಿಸುವ ಕೆಲಸ ನಡೆದಿದೆ. ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸುವ ಮೂಲಕ ಮುಖ್ಯಮಂತ್ರಿಗಳು ಬಸವಾದಿ ಶರಣರು‌ ಹಾಗೂ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರನ್ನು ಒಳಗೊಂಡ ಸಮ ಸಮಾಜ ನಿರ್ಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಹಾಗೂ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಧ್ಯಯನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಅಪ್ಪಟ ದೇಶಪ್ರೇಮಿ ಹಾಗೂ ಕೆಚ್ಚೆದೆಯ ಹೋರಾಟಗಾರನಾದ ಸಂಗೊಳ್ಳಿ ರಾಯಣ್ಣನ ಚರಿತ್ರೆ ಮೆಲುಕು ಹಾಕುವುದರ‌ ಜತೆಗೆ ಯುವಪೀಳಿಗೆಗೆ ತಲುಪಿಸಲು ಉತ್ಸವದ ಉದ್ದೇಶವಾಗಿದೆ ಎಂದರು.

ಸೈನಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಪ್ರವೇಶಕ್ಕೆ ಆದ್ಯತೆ ನೀಡುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಭಾರತದಲ್ಲಿಯೇ ಅತ್ಯುತ್ತಮ ಮ್ಯೂಸಿಯಂ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಸ್ಥಾಪಿಸಲಾಗಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ರೇವಣ್ಣ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಹೊಂಗಲ್ ಶಾಸಕ ಮಹಾಂತೇಶ್ ಕೌಜಲಗಿ, ಈ ಭಾಗದ ಜನರ ಆಶಯದಂತೆ ಸುಸಜ್ಜಿತ ಸೈನಿಕ ಶಾಲೆ ಹಾಗೂ ಶಿಲ್ಪವನ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.
ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ನೂರು‌ ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಶಾಲೆಯು ಇಡೀ‌ ದೇಶಕ್ಕೆ‌ ಮಾದರಿಯಾಗಿದೆ.ಜನರಿಗೆ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಮುಖ್ಯಮಂತ್ರಿಗಳ ಮಹತ್ಸಾಧನೆಯಾಗಿದೆ ಎಂದು ಹೇಳಿದರು.

45 ವರ್ಷದ ಹಿಂದಿನ ಮಲಪ್ರಭಾ ಯೋಜನೆಯಡಿ ಬೈಲಹೊಂಗಲ್ ಮತಕ್ಷೇತ್ರದ 48 ಹಳ್ಳಿಗಳು ಮುಳುಗಡೆಯಾಗಿವೆ. ಈ ಗ್ರಾಮಗಳ ಜನರ‌ ಅನುಕೂಲಕ್ಕಾಗಿ ಆರಂಭಿಸಲಾಗಿರುವ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು, ಆ ಯೋಜನೆಗಳ ಅನುಷ್ಠಾನಕ್ಕೆ ಮುಂಬರುವ ಆಯವ್ಯಯದಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂದು ಶಾಸಕ ಮಹಾಂತೇಶ‌ ಕೌಜಲಗಿ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಮಕ್ಕಳನ್ನು ಸೈನ್ಯಕ್ಕೆ ಸೇರಿಸಲು‌ ಹಾಗೂ ದೇಶಪ್ರೇಮವನ್ನು ಬೆಳೆಸಲು ಸೈನಿಕ ಶಾಲೆ ಅನುಕೂಲಕರವಾಗಿದೆ ಎಂದರು.
ಸಂಗೊಳ್ಳಿ ಹಿರೇಮಠದ ಗುರು ಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ಚನ ನೀಡಿದರು.
ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕೆಲಸಕಾರ್ಯಗಳಿಗೆ ಅನುಕೂಲವಾಗುವಂತೆ ನೂತನ ಮುಖ್ಯ ಎಂಜಿನಿಯರ್ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ಆನ್ ಲೈನ್ ಮೂಲಕ ಉದ್ಘಾಟಿಸಿದರು.

ಸರಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಸಂಸದರಾದ ಮಂಗಲ ಅಂಗಡಿ, ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ, ಶಾಸಕರಾದ ಆಸಿಫ್ ಸೇಠ್, ಗಣೇಶ್ ಹುಕ್ಕೇರಿ, ಬಾಬಾಸಾಹೇಬ್ ಪಾಟೀಲ, ಮಹೇಂದ್ರ ತಮ್ಮಣ್ಣವರ, ವಿಶ್ವಾಸ್ ವೈದ್ಯ, ಮಾಜಿ ಸಚಿವರು ಹಾಗೂ ಶಾಸಕರಾದ ಎಚ್.ವೈ.ಮೇಟಿ, ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ನಾಗರಾಜ್, ಮಾಜಿ ಸಚಿವರಾದ ಅಂಜಲಿ ನಿಂಬಾಳ್ಕರ್, ಸಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ ಸೇರಿದಂತೆ ಅನೇಕ‌ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಗೊಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *