ಬೆಳಗಾವಿ- ನಾನೇನು ಫುಟ್ಬಾಲ್ ಅಲ್ಲಾ ಇಕಾಡೇ ಒದ್ದ ಮ್ಯಾಲ ಅಕಾಡೇ ಹೋಗೋದು,ಅಕಾಡೇ ಒದ್ದ್ ಮ್ಯಾಲ ಈ ಕಡೇ ಬರಾಕ್ ನಾನೇನು ಫುಟ್ಬಾಲ್ ಅಲ್ಲಾ ಹೈಕಮಾಂಡ್ ನನ್ನ ಮೇಲೆ ಎಷ್ಟೇ ಒತ್ತಡ ತಂದ್ರೂ,ಲೋಕಸಭೆಗೆ ನಾನು ನನ್ನ ಪುತ್ರ ಇಬ್ಬರು ಸ್ಪರ್ಧಿಸಲ್ಲ ಎಂದು ಹಿರಿಯ ನಿಷ್ಠಾವಂತ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ತಮ್ಮ ಮನದಾಳದ ಮಾತನ್ನು ಮಾದ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.
ಬೆಳಗಾವಿ ನಗರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಚಿಕ್ಕೋಡಿ ಲೋಕಸಭೆ ಟಿಕೆಟ್ ಕುರುಬ ಸಮಾಜಕ್ಕೆ ಕೊಡಿ ಗೆಲ್ಲಿಸಿಕೊಂಡು ಬರ್ತಿವಿ,ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಕುರುಬ ಸಮಾಜಕ್ಕೆ ಈ ಬಾರಿ ಟಿಕೆಟ್ ಕೊಡಿ ಎಂದು ಕೇಳಿಕೊಂಡಿದ್ದಾರೆ ಈ ಸಮಾಜಕ್ಕೆ ಟಿಕೆಟ್ ಕೊಟ್ರೆ,ಅಥವಾ ಬೇರೆ ಯಾರಿಗಾದ್ರೂ ಕೊಟ್ಟರೆ ಈ ಕ್ಷೇತ್ರದ ಕಾಂಗ್ರೆಸ್ ಶಾಸಕರು ಸೇರಿ,ನಾವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.
ನೀವು ನಿಂತ್ರೆ ನಿಮ್ಮ ಮಗ ಗಣೇಶ್ ಹುಕ್ಕೇರಿಯನ್ನು ಮಂತ್ರಿ ಮಾಡ್ತಾರೆ ಎನ್ನುವ ಸುದ್ದಿ ಇದೆ ಅಲ್ಲಾ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು,2014 ರಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಮಂತ್ರಿ ಇದ್ದರೂ ಸ್ಪರ್ಧಿಸಿ ಗೆದ್ದಿದ್ದೆ,ಆಗ ಪುತ್ರ ಗಣೇಶ ಹುಕ್ಕೇರಿ ಶಾಸಕ ಮಾಡಿ ಮಂತ್ರಿ ಮಾಡ್ತಿವಿ ಅಂತಾ ವರಿಷ್ಠರು ಭರವಸೆ ಕೊಟ್ಡಿದ್ದರು,ಆದ್ರೆ ಪುತ್ರ ಗಣೇಶನಿಗೆ ಶಾಸಕನಾಗಿ ಮಾಡಿದ್ರು ಮಂತ್ರಿ ಮಾಡಿಲ್ಲ.ಕಳೆದ 2023 ರಲ್ಲಿ ಶಾಸಕ ಗಣೇಶ 78 ಸಾವಿರ ಅಂತರದಿಂದ ಗೆದ್ದರು ಮಂತ್ರಿ ಮಾಡಿಲ್ಲ.ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನವನ್ನ ಕೇಳಿಲ್ಲ, ಮಂತ್ರಿ ಸ್ಥಾನ ಕೇಳೋದಿಲ್ಲ,ಈಗ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡಗಳು ಬರ್ತಾಯಿದೆ.ನಾನು ಸ್ಪರ್ಧೆ ಮಾಡಿದ್ರೆ ಚಿಕ್ಕೋಡಿ ಲೋಕಸಭೆಯಲ್ಲಿ ಗೆಲ್ಲುತ್ತೇವೆ ಅಂತಾ ಲೆಕ್ಕಾಚಾರವಿದೆ.ಆದ್ರೆ ನಾನು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಕಾಶ್ ಹುಕ್ಕೇರಿ ಸ್ಪಷ್ಟಪಡಿಸಿದ್ದಾರೆ.
ನನ್ನ ವಯಸ್ಸು ಈಗ 78 ವರ್ಷ,ಮೇಲಾಗಿ ನನ್ನ ಎಂಎಲ್ಸಿ ಅಧಿಕಾರ ಅವಧಿ ಇನ್ನೂ 4 ವರ್ಷವಿದೆ.ನನ್ನನ್ನ ನಂಬಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಶಿಕ್ಷಕರು ಮತ ಹಾಕಿ ಗೆಲ್ಲಿಸಿದ್ದಾರೆ.ನನಗೆ ಮತಕೊಟ್ಟ ಶಿಕ್ಷಕರಿಗೆ ದ್ರೋಹ ಮಾಡುವದಿಲ್ಲ.ಈಗಾಗಲೇ ಬೆಳಗಾವಿಗೆ ಲಿಂಗಾಯತ, ಚಿಕ್ಕೋಡಿಗೆ ಕುರುಬ ಸಮುದಾಯ ಅಂತಾ ಚರ್ಚೆ ಆಗಿದೆ.ಚಿಕ್ಕೋಡಿ ಲೋಕಸಭೆಯಲ್ಲಿ 3 ಲಕ್ಷ ಕುರುಬ ಸಮುದಾಯದರು ಇದ್ದಾರೆ.ನಾವೆಲ್ಲರೂ ಸೇರಿ ಗೆಲ್ಲಿಸಿಕೊಂಡು ಬರ್ತಿವಿ ಎಂದ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ.