ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯರಗಟ್ಟಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಘಟನೆ ಬೆನ್ನಲ್ಲೇ ದೊಡವಾಡ ಠಾಣೆ ಪಿಎಸ್ಐ ನಂದೀಶರನ್ನು ಅಮಾನತು ಮಾಡಿ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದೇ ಎಎಸ್ಐ ಸಾವಿಗೆ ಕಾರಣ ಎಂಬುದು ಸಾಬೀತಾಗಿದೆ.
ಯರಗಟ್ಟಿ ಪಟ್ಟಣದ ವಿಜಯಕಾಂತ ಮಿಕಲಿ (51) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಎಎಸ್ಐ. ಇವರು ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ಮುಗಿಸಿ ಯರಗಟ್ಟಿಯಲ್ಲಿರುವ ಮನೆಗೆ ಬರುವಾಗ ರಸ್ತೆ ಅಪಘಾತ ಸಂಭಿಸಿದೆ. ಅತಿವೇಗದಿಂದ ಬೈಕ್ ಚಲಾಯಿಸುವಾಗ ಹಂಪ್ ಜಿಗಿಸಿ ರಸ್ತೆ ಅಪಘಾತ ಸಂಭಿಸಿದೆ. ಯರಗಟ್ಟಿಯ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ಘಟನೆ ನಡೆದಿದ್ದು, ಸ್ಥಳದಲ್ಲೇ ಎಎಸ್ಐ ಮೃತರಾಗಿದ್ದಾರೆ
ಕೆಲ ತಿಂಗಳ ಹಿಂದೆಯೇ ಎಲ್ಲ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಬೆಳಗಾವಿ ಎಸ್ಪಿ ಕಡ್ಡಾಯಗೊಳಿಸಿದ್ದಾರೆ. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕಾರಣಕ್ಕೆ ದೊಡವಾಡ ಠಾಣೆ ಪಿಎಸ್ಐ ನಂದೀಶ ಅಮಾನತು ಮಾಡಿ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ. ಎಸ್ಪಿ ಅವರ ಕಳಕಳಿ ಗಟ್ಟಿ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.