Breaking News

ಕೊರೋನಾ ಎದುರಿಸಲು ರೆಡಿಯಾಗಿ,- ರಮೇಶ್ ಜಾರಕಿಹೊಳಿ

ಬೆಳಗಾವಿ, ಜುಲೈ – ಮುಂಬರುವ

ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳು ಇರುವುದರಿಂದ ಜಿಲ್ಲೆಯಲ್ಲಿ ವೆಂಟಿಲೇಟರ್, ಹಾಸಿಗೆಗಳು ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ(ಜು.7) ನಡೆದ ಕೋವಿಡ್ ಹಾಗೂ ಪ್ರವಾಹ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ ಎರಡು ತಿಂಗಳು ಪ್ರಮುಖವಾಗಿರುವುದರಿಂದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲಿಸ್ ಇಲಾಖೆ ಇನ್ನಷ್ಟು ಜಾಗರೂಕತೆಯಿಂದ ಕೆಲಸ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ನೆಗಡಿ, ಜ್ವರದ ಔಷಧ ತೆಗೆದುಕೊಳ್ಳುತ್ತಿರುವ ಬಗ್ಗೆ ಮೆಡಿಕಲ್ ಗಳ ಮೂಲಕ ತಕ್ಷಣ ಮಾಹಿತಿಯನ್ನು ಕಲೆಹಾಕಿ ಅಂತಹವರನ್ನು ಗುರುತಿಸಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೋಮ್ ಕ್ವಾರಂಟೈನ್ ನಲ್ಲಿ ಇರುವವರ ಬಗ್ಗೆ ನಿರಂತರ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಬಿಡುಗಡೆ ಹೊಂದಿದವರಿಗೆ ಮತ್ತೆ ಸೋಂಕು ಕಂಡುಬಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ನಾಲ್ಕು ತಿಂಗಳಿನಿಂದ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ.
ಮುಂದಿನ ಎರಡು ತಿಂಗಳು ಮಹತ್ವದ ಅವಧಿಯಾಗಿರುವುದರಿಂದ ಹಿರಿಯ ಅಧಿಕಾರಿಗಳು ಸಭೆ ಕರೆದು ವೈದ್ಯರು, ಅಧಿಕಾರಿ, ಸಿಬ್ಬಂದಿಗೆ ಇನ್ನಷ್ಟು ಚುರುಕಿನಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಸೋಂಕಿತರು ಯಾರೂ ಸಮುದಾಯದ ಜತೆ ಬೆರೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಭಾನುವಾರ ಲಾಕ ಡೌನ್ ಯಶಸ್ವಿಯಾಗಿದ್ದು, ಜನರು ಸ್ವಯಂಪ್ರೇರಣೆಯಿಂದ ಬೆಂಬಲ ನೀಡಿದ್ದಾರೆ. ಜನಪ್ರತಿನಿಧಿಗಳು ಕೂಡ ಸ್ವಯಂಪ್ರೇರಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ತಡೆಗಟ್ಟಲು ಸಹಕರಿಸಬೇಕಿದೆ.
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸೋಂಕು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಜಿಲ್ಲೆಯಲ್ಲಿ ಒಟ್ಟು ಎಷ್ಟು ವೆಂಟಿಲೇಟರ್ ಇವೆ. ಎಷ್ಟು ಬಳಕೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಮದುವೆ ಮತ್ತಿತರ ಸಮಾರಂಭಗಳಲ್ಲಿ ಅತೀ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಆದ್ದರಿಂದ ಹೋಮ್ ಕ್ವಾರಂಟೈನ್ ಇರುವವರ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೋಮ್ ಕ್ವಾರಂಟೈನ್ ಬದಲು ಅಲ್ಲಿ ಸ್ಥಳೀಯವಾಗಿ ಲಭ್ಯವಿರುವ ಹಾಸ್ಟೆಲ್ ಅಥವಾ ಶಾಲಾ ಕಟ್ಟಡಗಳಲ್ಲಿ ಇರಿಸಬೇಕು ಎಂದು ಮನವಿ ಮಾಡಿಕೊಂಡರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಸೋಂಕಿತ ಮಹಿಳೆಯರಿಗೆ ಹೆರಿಗೆ ಬಳಿಕ ಯಾವ ರೀತಿ ತಪಾಸಣೆ ಮಾಡಲಾಗುತ್ತಿದೆ ಹಾಗೂ ಮಕ್ಕಳಿಗೆ ಸೋಂಕಿ ತಗುಲಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಗಡಿಭಾಗದಲ್ಲಿ ವಲಸೆ ಕಾರ್ಮಿಕರ ಪ್ರಯಾಣ ಹೆಚ್ಚಾಗುತ್ತಿರುವುದರಿಂದ ಗಡಿಯಲ್ಲಿ ವಲಸೆ ಕಾರ್ಮಿಕರು ಮತ್ತು ಪ್ರಯಾಣಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

316 ಜನರು ಗುಣಮುಖ-ಜಿಲ್ಲಾಧಿಕಾರಿ:

396 ಕೋವಿಡ್ ಪ್ರಕರಣ 316 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 74 ಸಕ್ರಿಯ ಪ್ರಕರಣಗಳಿದ್ದು, ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಸೋಂಕಿತರಿಗೆ ಚಿಕಿತ್ಸೆ ಮತ್ತು ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಹೊಸ ಮಾರ್ಗಸೂಚಿ ಪ್ರಕಾರ ಇಂದಿನಿಂದ ಎಲ್ಲರಿಗೂ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದ್ದು, ಜಿಪಿಆರ್ ಎಸ್ ತಂತ್ರಜ್ಞಾನದ ಮೂಲಕ ಸೋಂಕಿತರ ಮೇಲೆ ನಿಗಾ ವಹಿಸಲಾಗುತ್ತಿದ್ದು, ನಿಯಮಾವಳಿ ಉಲ್ಲಂಘಿಸಿ ಹೊರ ಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.

ಜಿಲ್ಲೆಯ ಎರಡು ಪ್ರಯೋಗಾಲಯಗಳಲ್ಲಿ ಐದು ನೂರು ಮಾದರಿ ತಪಾಸಣೆ ಮಾಡಬಹುದು. ಖಾಸಗಿ ಆಸ್ಪತ್ರೆ ಜತೆಗೂ ಚರ್ಚಿಸಲಾಗಿದ್ದು, ತಪಾಸಣೆ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 27 ವೆಂಟಿಲೇಟರ್ ಗಳಿದ್ದು, ಸದ್ಯಕ್ಕೆ ಕೊರತೆ ಕಂಡುಬಂದಿಲ್ಲ.

ಕ್ವಾರಂಟೈನ್ ಆಪ್ ಮೂಲಕ ಹೋಮ್ ಕ್ವಾರಂಟೈನ್ ಮೇಲೆ ಇರುವವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಅದೇ ರೀತಿ ವಾರ್ಡ್ ಮಟ್ಟದ ಸಮಿತಿಗಳನ್ನು ಕೂಡ ರಚಿಸುವ ಮೂಲಕ ಈ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಹೋಮ್ ಕ್ವಾರಂಟೈನ್ ಇರುವವರ ಮೇಲೆ ನಿರಂತರ ನಿಗಾ ವಹಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲೇ ತಂಡಗಳನ್ನು ನಿಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿದಿನ ಒಂದು ಸಾವಿರ ಮಾದರಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಬಿಡುಗಡೆ ಹೊಂದಿದವರ ಪೈಕಿ ಒಬ್ಬರಿಗೆ ಮಾತ್ರ ಮತ್ತೆ ಸೋಂಕು ಕಂಡುಬಂದಿದೆ. ನಂತರ ಅವರೂ ಗುಣಮುಖರಾಗಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದರು.

ಇದುವರೆಗೆ ಎಂಟು ಜನರು ಮರಣ ಹೊಂದಿದ್ದಾರೆ.
ಇದುವರೆಗೆ ಸಾರಿ ಮತ್ತು ಐ.ಎಲ್.ಐ. ಗಳಿಂದ ಆಸ್ಪತ್ರೆಗೆ ಬಂದಿದ್ದ ಎಂಟು ಜನರಲ್ಲಿ ನಾಲ್ಕು ಜನರು ಕೊಮಾರ್ಬಿಡಿಟಿ ಹಿನ್ನೆಲೆ ಮರಣ ಹೊಂದಿದ್ದಾರೆ.

5 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರಿದ್ದು, ಅವರಿಗೂ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲರ ಫಲಿತಾಂಶ ನೆಗೆಟಿವ್ ಬಂದಿರುತ್ತದೆ ಎಂದು ಡಿಎಚ್ಓ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.
ಏಳು ಗರ್ಭಿಣಿಯರಲ್ಲಿ ಸೋಂಕು ಕಂಡುಬಂದಿದ್ದು, ಅದರಲ್ಲಿ ಒಬ್ಬರ ಹೆರಿಗೆಯಾದ ಬಳಿಕ ಮಗುವಿಗೆ ನೆಗೆಟಿವ್ ಬಂದಿರುತ್ತದೆ ಎಂದರು.

ಅಂತರ್ ರಾಜ್ಯ ಗಡಿಯಲ್ಲಿ ವಲಸೆ ಕಾರ್ಮಿಕರು ಮತ್ತು ಪ್ರಯಾಣಿಕರ ಮೇಲೆ ನಿಗಾ ವಹಿಸಲು ಗಡಿಭಾಗದ 40 ಕ್ಕೂ ಅಧಿಕ ಗ್ರಾಮಗಳಲ್ಲಿ ಪೊಲಿಸ್ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಭೆಗೆ ವಿವರಿಸಿದರು.

ಮಳೆ-ಬೆಳೆ ಸ್ಥಿತಿಗತಿ ಪರಿಶೀಲನೆ:

ಮಳೆಗಾಲ ಆರಂಭಗೊಂಡಿರುವುದರಿಂದ ರೈತರಿ ಬಿತ್ತನೆ ಬೀಜ, ಗೊಬ್ಬರಗಳ ಪೂರೈಕೆಗೆ ತೊಂದರೆಯಾಗಬಾರದು. ಇದಲ್ಲದೇ ರೈತರಿಗೆ ಸಿಗಬೇಕಿರುವ ಪರಿಹಾರ ಮತ್ತು ಬೆಳೆವಿಮೆ ಸಮರ್ಪಕವಾಗಿ ಒದಗಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆಹಾನಿ ಸಮರ್ಪಕವಾಗಿ ನಡೆದಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ತಕ್ಷಣವೇ ಮರುಪರಿಶೀಲಿಸಬೇಕು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಯೂರಿಯಾ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಂಡು ಅಗತ್ಯವಿರುವ ರೈತರಿಗೆ ವಿತರಿಸಬೇಕು ಎಂದು ತಿಳಿಸಿದರು.

ಬೆಳೆಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಮರು ಸಮೀಕ್ಷೆ ಮಾಡುವಂತೆ ಪದೆ ಪದೇ ಮನವಿ ಮಾಡಿಕೊಂಡರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡಗೌಡ್ರ ಹಾಗೂ ದುರ್ಯೋಧನ ಐಹೊಳೆ ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆಹಾನಿ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಶೀಲಿಸಿ ಕ್ರಮ‌ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಪ್ರವಾಹ ನಿರ್ವಹಣೆ-ಪೂರ್ವಸಿದ್ಧತೆಗೆ ಸೂಚನೆ:

ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾಗುತ್ತಿರುವುದಿಂದ ನದಿ ತೀರದ ಗ್ರಾಮಗಳಲ್ಲಿ ಪ್ರತಿದಿನ ಪರಿಸ್ಥಿತಿ ನಿಗಾವಹಿಸಬೇಕು. ತುರ್ತು ಪರಿಸ್ಥಿತಿ ನಿರ್ವಹಿಸಲು ಅಗತ್ಯವಿರುವ ಬೋಟ್ ಮತ್ತಿತರ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಶೀಘ್ರದಲ್ಲೇ ಮಹರಾಷ್ಟ್ರ ಸರ್ಕಾರ ಮತ್ತು ಸಂಬಂಧಿಸಿದ ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು, ಅಗಸರು, ಕ್ಷೌರಿಕರು ಹಾಗೂ ಚಾಲಕರಿಗೆ ಸರ್ಕಾರ ಘೋಷಿಸಿರುವ ನೆರವುಧನ ಈಗಾಗಲೇ ಅನೇಕರಿಗೆ ಜಮಾ ಮಾಡಲಾಗಿದ್ದು, ಉಳಿದವರಿಗೆ ಆದಷ್ಟು ಬೇಗ ನೇರವಾಗಿ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಶಾಸಕ ದುರ್ಯೋಧನ ಐಹೊಳೆ,ಶಾಸಕ ಮಹಾಂತೇಶ ದೊಡ್ಡಗೌಡರ, ಶಾಸಕ ಅನಿಲ್ ಬೆನಕೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ನಗರ ಪೊಲಿಸ್ ಆಯುಕ್ತರಾದ ತ್ಯಾಗರಾಜನ್ ಮತ್ತಿತರರು ಉಪಸ್ಥಿತರಿದ್ದರು.
***

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.