ಬೆಳಗಾವಿ- ಗಡಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಥರ,ಥರಾ ನಡುಗುವ ಚಳಿಯಲ್ಲಿ ಬೆಚ್ಚಗೆ ಕವದಿ ಹೊತ್ತು ಬೆಚ್ಚಗೆ ಮಲಗಿದ್ರೆ ಬೆಳಗಾಗುವಷ್ಟರಲ್ಲಿ ಬೆಚ್ವಿ ಬಿಳೋದು ಗ್ಯಾರಂಟಿ…..
ಅಥಣಿ ಚಿಕ್ಕೋಡಿ,ನಿಪ್ಪಾಣಿ,ರಾಯಬಾಗ ಸೇರಿದಂತೆ,ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರುವ ಮೂಲಕ ಸಾರ್ವಜನಿಕರನ್ನು ಎಚ್ಚರಿಸುವ ಕಾರ್ಯ ನಡೆದಿದೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ,ಗಡಿ ಭಾಗದ,ಗ್ರಾಮಗಳಲ್ಲಿ,ದನಗೋಳದಾವ್ರ…ಮನಿಗೋಳದಾವ್ರ,ಅಂಗಡಿಗೋಳದಾವ್ರ,ಹುಷಾರ್ಲೇ,ಮಲಕೋರ್ರೀಪೋ..!! ಎಂದು ಡಂಗುರ ಸಾರುತ್ತಿರುವದು ಸಾಮಾನ್ಯವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈಗ ಮೈಕೊರೆಯುವ ಚಳಿ. ಮೈಕೊರೆಯುವ ಚಳಿಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಖದೀಮರ ಗ್ಯಾಂಗ್ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಗಳಲ್ಲಿ ಎಂಟ್ರಿ ಕೊಡ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲೀಗ ಖದೀಮರ ಭಯ ಶುರುವಾಗಿದೆ
. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ 12 ಮನೆಗಳಲ್ಲಿ ಕಳ್ಳತನವಾಗಿತ್ತು. ಮರುದಿನವೇ ಅದೇ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಅಪ್ಪಯ್ಯ ಸ್ವಾಮೀ ದೇವಾಲಯ ಹಾಗೂ ಲಕ್ಕಮ್ಮ ದೇವಿ ದೇವಸ್ಥಾನದಲ್ಲಿದ್ದ ಸುಮಾರು 17 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಖದೀಮರು 6 ಮನೆಗಳಿಗೂ ಕನ್ನ ಹಾಕಿದ್ದರು. ಹೀಗಾಗಿ ಈಗ ಅಥಣಿ ತಾಲೂಕಿನಲ್ಲಿ ಜನ ಡಂಗೂರ ಸಾರಿ ಅಪರಿಚಿತರನ್ನ ಊರೊಳಗೆ ಸೇರಿಸಬೇಡಿ. ನುಮಾನ ಬರೋ ಜನ ಬಂದರೆ ಪೊಲೀಸರಿಗೆ ತಿಳಿಸಿ ಅಂತಿದಾರೆ. ಇದು ಗಡಿ ಭಾಗದ ಕಥೆಯಾದ್ರೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಅಂಟಿಕೊಂಡಿರುವ ಕಿತ್ತೂರಿನಲ್ಲಿ ಕಳೆದ ಒಂದೇ ತಿಂಗಳಲ್ಲಿ ಮೂರು ದೇವಸ್ಥಾನಗಳಲ್ಲಿ ಕಳ್ಳತನವಾಗಿದೆ. ಕಿತ್ತೂರಿನ ಸೂರ್ಯನಾರಾಯಣ ದೇವಸ್ಥಾನ, ಸಾಯಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ಕಬ್ಬಿಣದ ರಾಡ್ ಹಿಡಿದುಕೊಂಡು ಸಾಯಿ ಮಂದಿರದ ಬಾಗಿಲು ಮುರಿದು ಹುಂಡಿ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಾವಾಗ ಕಳ್ಳರ ಕಾಟ ಹೆಚ್ಚಾಯ್ತೋ ಪೊಲೀಸರು ಗಡಿಭಾಗದ ಗ್ರಾಮಗಳಲ್ಲಿ ಡಂಗೂರ ಸಾರಿಸುವ ಮೂಲಕ ಎಚ್ಚರಿಕೆ ವಹಿಸುವ ಕಾರ್ಯ ಮಾಡ್ತಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿರುವ ತಾಲೂಕುಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಗಳಲ್ಲಿ ಹೆಚ್ಚಾಗಿ ರೈತಾಪಿ ಕುಟುಂಬಗಳೇ ವಾಸಿಸೋದ್ರಿಂದ ಇಲ್ಲಿನ ಜನ ರಾತ್ರಿ ಹೊತ್ತು ಊರಲ್ಲಿರುವ ಮನೆಯಲ್ಲಿರುವ ಬದಲು ದನಕರುಗಳನ್ನ ನೋಡಿಕೊಳ್ಳುತ್ತ ತೋಟದ ವಸತಿಯಲ್ಲೆ ಉಳಿದುಬಿಡ್ತಾರೆ. ಹೀಗಾಗಿ ಇದೆ ಸಮಯದಲ್ಲಿ ಹೊಂಚು ಹಾಕಿ ಊರೊಳಗೆ ನುಗ್ಗುವ ಖದೀಮರು ಸಿಕ್ಕ ಸಿಕ್ಕಿದ್ದನ್ನ ಎಗರಿಸ್ತಾರೆ ಎನ್ನುವ ಮಾತು ಕೇಳಿ ಬರ್ತಿವೆ.
ಇನ್ನು ಊರಲ್ಲಿ ಪೊಲೀಸರು ಗಸ್ತಿಗೆ ಬಂದಿದ್ರೆ ಹೀಗೆಲ್ಲ ಆಗ್ತಿರಲಿಲ್ಲ ಅಂತಾರೆ ಗ್ರಾಮದ ಜನ ಸಹ ಆರೋಪಿಸುತ್ತಾರೆ. ಆದರೆ ಈ ಕುರಿತು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿಯವರನ್ನ ಕೇಳಿದ್ರೆ ಈಗಾಗಲೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಗಡಿಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರೋದಕ್ಕೆ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರೂ ಸಹ ಎಚ್ಚರಿಕೆಯಿಂದ ಇರಬೇಕು ಅಂತಾ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಪೊಲೀಸರ ಕರ್ತವ್ಯ ಪ್ರಜ್ಞೆಯ ಕೊರತೆಯೋ ಅಥವಾ ಜನರ ನಿಷ್ಕಾಳಜಿಯೋ ಗೊತ್ತಿಲ್ಲ ಆದರೆ ಬೆಳಗಾವಿ ಜಿಲ್ಲೆಯ ಗಡಿ ಭಾಗದ ತಾಲೂಕು ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಗಳಲ್ಲಿ ಪದೇ ಪದೇ ಸರಣಿಗಳ್ಳತನ ಪ್ರಕರಣಗಳು ಹೆಚ್ಷಾಗುತ್ತಿರುವುದು ಜನರನ್ನ ಆತಂಕಕ್ಕೀಡಾಗುವಂತೆ ಮಾಡಿದ್ದಂತು ಸುಳ್ಳಲ್ಲ.