ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ- ಸಿಎಂ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವದರ ಜೊತೆಗೆ ಬೆಳಗಾವಿಯ ಸುವರ್ಣ ಸೌಧವನ್ನು ಶಕ್ತಿ ಕೇಂದ್ರವನ್ನಾಹಿಸುವ ನಿಟ್ಟಿನಲ್ಲಿ,ಸಕ್ಕರೆ ಆಯುಕ್ತರ ಕಚೇರಿ ಸೇರಿದಂತೆ ಇನ್ನುಳಿದ ಕಚೇರಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವದಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ.

 

ಬೆಳಗಾವಿ): ನೆರೆಹಾನಿ ಸಂದರ್ಭದಲ್ಲಿ ಉಂಟಾಗಿರುವ ಮನೆ ಹಾಗೂ ಬೆಳೆಹಾನಿಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರವಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು. ಸಮೀಕ್ಷೆ ಪೂರ್ಣಗೊಂಡರೆ ನಿಖರ ಅಂಕಿ-ಅಂಶಗಳ ಸಮೇತ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುತ್ತದೆ.
ಆದ್ದರಿಂದ ಆದಷ್ಟು ಬೇಗನೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಕೋವಿಡ್ ನಿರ್ವಹಣೆ ಹಾಗೂ ನೆರೆಹಾನಿಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶನಿವಾರ (ಆ.21) ನಡೆದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮೀಕ್ಷೆ ವಿಳಂಬಗೊಂಡಷ್ಟು ಸಮಸ್ಯೆ ಜಟಿಲಗೊಳ್ಳುತ್ತದೆ. ಆದ್ದರಿಂದ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಿ ಸಂತ್ರಸ್ತರ ಖಾತೆಗೆ‌ ಪರಿಹಾರ ಜಮೆ‌ ಮಾಡಲು ಕ್ರಮಕೈಗೊಳ್ಳಬೇಕು.
ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪ್ರಸಕ್ತ ಸಾಲಿನ ಪ್ರವಾಹ ಹಾನಿ ಸಮೀಕ್ಷೆ ಮಾಡುವಾಗ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು.
ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಕಿ ಉಳಿದಿರುವ ಪರಿಹಾರ ಕಂತುಗಳನ್ನು ಬಿಡುಗಡೆ ಮಾಡಲು ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳಲಿದೆ.
ಮನೆಹಾನಿ ಲಾಗಿನ್ ಅವಧಿ ವಿಸ್ತರಣೆ, ಮನೆಗಳ ಸೂಕ್ತ ದಾಖಲಾತಿ ಇಲ್ಲದ ಕುಟುಂಬಗಳಿಗೆ ಪರಿಹಾರ ಒದಗಿಸಲು ಇರುವ ಪರ್ಯಾಯ ಮಾರ್ಗಗಳ ಕುರಿತು ಪರಿಶೀಲನೆ ನಡೆಸಿ ಕ್ರಮ‌ಕೈಹೊಳ್ಳಲಾಗುವುದು.
ಈ ರೀತಿಯ ಕುಟುಂಬಗಳ ಪ್ರತ್ಯೇಕವಾದ ಪಟ್ಟಿ ಸಿದ್ಧವಾದ ಬಳಿಕ ಹಣಕಾಸು ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದರು.
ಗ್ರಾಮಸ್ಥರು ಶಾಶ್ವತ ಸ್ಥಳಾಂತರ‌ ಬಯಸಿದ ಸಂದರ್ಭದಲ್ಲಿ ಸರಕಾರಿ ಜಮೀನು ಲಭ್ಯವಿದ್ದರೆ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲಾಗುವುದು. ಇದಲ್ಲದೇ ನವಗ್ರಾಮ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಕೂಡ ಮನೆಗಳನ್ನು ಒದಗಿಸಲಾಗುವುದು ಎಂದರು.

ಬೆಳಗಾವಿ ಜಿಲ್ಲೆಗೆ ಹೆಚ್ಚುವರಿ ಲಸಿಕೆ ಪೂರೈಕೆ:

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಸಂಪೂರ್ಣ ಗುಣಮುಖರಾಗುವವರೆಗೆ ಅವರ ಮನೆಗಳಿಗೆ ಕೂಡ ಅಗತ್ಯ ಔಷಧಿ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ
ಬೆಳಗಾವಿ ಜಿಲ್ಲೆಗೆ ಪ್ರತಿದಿನ 40 ಸಾವಿರ ಲಸಿಕೆ ನೀಡುವ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿದಿನ ನೀಡಲಾಗುತ್ತಿರುವ 25 ಸಾವಿರ ಲಸಿಕೆಗಳ ಜತೆಗೆ ಹೆಚ್ಚುವರಿಯಾಗಿ ಪ್ರತಿದಿನ 25 ಸಾವಿರ ಲಸಿಕೆಗಳನ್ನು ಪೂರೈಕೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೆಚ್ಚುವರಿ ಅಗತ್ಯವಿರುವ ಲಸಿಕೆಗಳ ಪ್ರಮಾಣದ ಬಗ್ಗೆ ಕೂಡಲೇ ಪ್ರಸ್ತಾಪವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ತವ್ಯಕ್ಕೆ ಹಾಜರಾಗದ ನೇಮಕಾತಿ ರದ್ದು- ಸಿಎಂ ಸೂಚನೆ:

ಹೊಸದಾಗಿ ನೇಮಕಗೊಂಡು ಇದುವರೆಗೆ ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಕೂಡಲೇ ನೋಟಿಸ್ ನೀಡಬೇಕು. ಆದಾಗ್ಯೂ ಹಾಜರಾಗದಿದ್ದರೆ ಅವರ ನೇಮಕಾತಿಯನ್ನು ರದ್ದುಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಕಡೆಯ ಸಿಬ್ಬಂದಿ ಹಾಗೂ ವೈದ್ಯರ ನಿಯೋಜನೆಯನ್ನು ರದ್ದುಗೊಳಿಸಬೇಕು. ಕೆಲಸದ ಒತ್ತಡ ಆಧರಿಸಿ ತಾತ್ಕಾಲಿಕವಾಗಿ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ನಿಯೋಜಿಸಬೇಕು.
ಡಯಾಲಿಸಿಸ್ ಚಿಕಿತ್ಸೆಗೆ ದೊರಕದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು.

ಕೋವಿಡ್ ಪರೀಕ್ಷೆ ಹೆಚ್ಚಿಸಲು ನಿರ್ದೇಶನ:

ಗಡಿ ಜಿಲ್ಲೆಯಾಗಿರುವುದರಿಂದ ತೀವ್ರ ನಿಗಾವಹಿಸಬೇಕು ಎಲ್ಲಿ ಸೋಂಕು ಕಂಡುಬರುತ್ತದೆಯೋ ಅಂತಹ ಪ್ರದೇಶಗಳಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದರು.
ಗಡಿಭಾಗದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು.
ರೈಲು ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಆರಂಭಿಸಬೇಕು. ಮುಂದಿನ ಹತ್ತರಿಂದ ಹದಿನೈದು ದಿನಗಳಲ್ಲಿ ಆಕ್ಸಿಜನ್ ಘಟಕಗಳು ಕಾರ್ಯಾರಂಭಿಸಬೇಕು.

ಪ್ರತಿದಿನ ಐದು ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಒಂದು ಕೋಟಿ ಲಸಿಕೆಗಳನ್ನು ಪೂರೈಸಲು ಕೇಂದ್ರ ಸರಕಾರಕ್ಕೆ‌ ಮನವಿ‌ ಮಾಡಿಕೊಳ್ಳಲಾಗಿದೆ.
ಲಸಿಕೆ ಬಳಕೆಯನ್ನು ಆಧರಿಸಿ ಲಸಿಕೆ ಪೂರೈಕೆ ಮಾಡುವುದರಿಂದ ಪ್ರತಿ ಜಿಲ್ಲೆಯಲ್ಲಿ ‌ಸಾಮರ್ಥ್ಯಕ್ಕೆ ಅನುಗುಣವಾಗಿ ಗರಿಷ್ಠ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ದೈನಂದಿನ ಲಸಿಕಾ ಪ್ರಮಾಣ ಆಧರಿಸಿ ಲಸಿಕೆಯನ್ನು ಪೂರೈಸಲಾಗುವುದು. ಆದ್ದರಿಂದ ‌ಲಸಿಕೆ ಪೂರೈಕೆಯಾದ ತಕ್ಷಣವೇ ಅವುಗಳನ್ನು ಜನರಿಗೆ ನೀಡಬೇಕು.

ಮೂರನೇ ಅಲೆ ನಿರ್ವಹಣೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಶಾಲೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು.
ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಪೌಷ್ಟಿಕಾಹಾರ ಒದಗಿಸಬೇಕು. ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ತಕ್ಷಣವೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು.
ಕೋವಿಡ್ ಅಥವಾ ಅಪೌಷ್ಟಿಕತೆಯಿಂದ ಯಾವುದೇ ಮಗುವಿಗೆ ತೊಂದರೆಯಾಗುವುದನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗುತ್ತಿಗೆ ‌ಆಧಾರದ ಮೇಲೆ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಬಾಕಿ ವೇತನ ಪಾವತಿಗೆ ಅಗತ್ಯ ಅನುದಾನ ‌ನೀಡಲಾಗುವುದು.
ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿರುವುದರಿಂದ ಹೊಸ ತಾಲ್ಲೂಕುಗಳ ಆಧಾರದ ಮೇರೆಗೆ ಆಸ್ಪತ್ರೆ ಸ್ಥಾಪನೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ವಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಜಲಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮಾತನಾಡಿ, ಇತ್ತೀಚಿನ ನೆರೆಹಾನಿಯಿಂದ ಪ್ರಾಥಮಿಕ ಮಾಹಿತಿ ಪ್ರಕಾರ 2800 ಕೋಟಿ ರೂಪಾಯಿ ಹಾನಿ ವರದಿಯಾಗಿದೆ ಎಂದು ತಿಳಿಸಿದರು.
ಪ್ರವಾಹ ಸಂದರ್ಭದಲ್ಲಿ ‌ಮನೆಗಳು ಹಾನಿಯಾದಾಗ ಕೂಡಲೇ ಸಮೀಕ್ಷೆ ಕೈಗೊಂಡು ಆಯಾ‌ ಪಂಚಾಯಿತಿಯಲ್ಲಿ ಪಟ್ಟಿಯನ್ನು ಪ್ರದರ್ಶಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಇದರಿಂದ ಗೊಂದಲ ನಿವಾರಣೆ‌ ಜತೆಗೆ ಅನಧಿಕೃತ ವ್ಯಕ್ತಿಗಳು ‌ಪರಿಹಾರ ಪಡೆದುಕೊಳ್ಳುವುದನ್ನು ತಪ್ಪಿಸಬಹುದು.

ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಹಾಗೂ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ಅವರು, ನೆರೆಹಾನಿ ಸಮೀಕ್ಷೆ ಹಾಗೂ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿದರು.

ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ವೈದ್ಯಕೀಯ ಸಿಬ್ಬಂದಿಗೆ ಸಂಬಳ ಬಿಡುಗಡೆಯ ಕುರಿತು ಮುಖ್ಯಮಂತ್ರಿಗಳ ಗಮನಸೆಳೆದರು.
ಶಾಶ್ವತ ಸ್ಥಳಾಂತರವಾಗಲು ಬಯಸುವ ಕುಟುಂಬಗಳಿಗೆ ಸರಕಾರಿ ಜಮೀನಿನಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.
ಶಾಸಕ ಮಹಾಂತೇಶ ಯಾದವಾಡ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕಂಡುಬಂದಿದೆ. ಆದ್ದರಿಂದ ‌ಔಷಧಿ ಪೂರೈಸಲು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರು.
ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ, ಬೆಳಗಾವಿ ಗಡಿ‌ ಜಿಲ್ಲೆಯಾಗಿರುವುದರಿಂದ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿಕೊಂಡರು.

ಶಾಸಕರಾದ ಸತೀಶ್ ಜಾರಕಿಹೊಳಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ ಎಂದು ಪರೀಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸದಂತೆ ತಿಳಿಸಿದರು.
ಶಾಸಕ ಮಹಾಂತೇಶ ಕೌಜಲಗಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿಕೊಂಡರು.
ಡಯಾಲಿಸಿಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ತಾಲ್ಲೂಕು ಆಸ್ಪತ್ರೆಗಳಲ್ಲಿ ತೊಂದರೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಲಸಿಕೆ ಪೂರೈಕೆ ಸಮರ್ಪಕವಾಗಿ ಪೂರೈಸದಿರುವುದರಿಂದ ಲಸಿಕಾಕರಣ ಅಭಿಯಾನ ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ ಹೆಚ್ಚಿನ ಲಸಿಕೆ ಪೂರೈಸಬೇಕು ಎಂದರು.
ಹೆಚ್ಚುವರಿ ಲಸಿಕೆ ಪೂರೈಸಬೇಕು ಎಂದು ಸಂಸದೆ ಮಂಗಲಾ ಅಂಗಡಿ ಕೂಡ ಒತ್ತಾಯಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕೋವಿಡ್ ತಪಾಸಣೆಗೆ ಅಗತ್ಯವಿರುವ ಆರ್.ಟಿ.-ಪಿಸಿಆರ್ ಪರೀಕ್ಷಾ ಕೇಂದ್ರವನ್ನು ಗೋಕಾಕ ನಲ್ಲಿ ಕೂಡ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಾದರೆ ಆಕ್ಸಿಜನ್ ತಕ್ಷಣವೇ ಪೂರೈಸಲು ಅನುಕೂಲವಾಗುವಂತೆ ಬಾಟ್ಲಿಂಗ್ ಯುನಿಟ್ ಸ್ಥಾಪಿಸಲು ಕೋರಿದರು.

ಶಾಸಕ ಮಹೇಶ್ ಕುಮಠಳ್ಳಿ, ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾದರೆ ಗಡಿಯಲ್ಲಿರುವ ಅಥಣಿ ತಾಲ್ಲೂಕಿನ ಮೇಲೆ ಹೆಚ್ಚಿನ ಪರಿಣಾಮ ‌ಬೀರುತ್ತದೆ. ಆದ್ದರಿಂದ ತುರ್ತು ಚಿಕಿತ್ಸೆಗೆ ಅನೂಕೂಲ ಕಲ್ಪಿಸಬೇಕು ಹಾಗೂ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಪೂರ್ಣ ಜಲಾವೃತವಾಗುವ ಗ್ರಾಮಗಳ ಎಲ್ಲ ಕುಟುಂಬಗಳಿಗೆ ತಲಾ‌ ಹತ್ತು ಸಾವಿರ ಪರಿಹಾರ ನೀಡಬೇಕು ಎಂದು ಕೋರಿದರು.

ಶಾಸಕ ಅನಿಲ್ ಬೆನಕೆ ಹಾಗೂ ಶಾಸಕ ದುರ್ಯೋಧನ ಐಹೊಳೆ ಅವರು, ಲಸಿಕೆ ಪೂರೈಕೆ ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕೋವಿಡ್ ‌ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲೆಯಲ್ಲಿ ಸದ್ಯಕ್ಕೆ 468 ಸಕ್ರಿಯ ಪ್ರಕರಣಗಳಿವೆ. ಕಳೆದ 0.81 ಪಾಸಿಟಿವಿಟಿ ದರ‌ ಮರಣ ದರ ಶೇ. 2.08 ರಷ್ಟಿದೆ ಎಂದು ತಿಳಿಸಿದರು.

ಎರಡನೇ ಡೋಸ್ ಶೇ.13 ರಷ್ಟು ನೀಡಲಾಗಿದೆ. ಗಡಿಭಾಗದ 94 ಗ್ರಾಮದಲ್ಲಿ ಲಸಿಕಾಕರಣ ಹಮ್ಮಿಕೊಂಡು ಎರಡೂ ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಅದೇ ರೀತಿ
ಕೋವಿಡ್ ನಿರ್ವಹಣೆಗಾಗಿ ಜಿಲ್ಲೆಗೆ 34 ಕೋಟಿ ಬಿಡುಗಡೆ 28 ಕೋಟಿ ಖರ್ಚು ಮಾಡಲಾಗಿದೆ
ಆಗಸ್ಟ್ 16 ರಿಂದ ವಾತ್ಸಲ್ಯ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. 221 ತಂಡಗಳನ್ನು ರಚಿಸಿ 1372 ಶಿಬಿರಗಳನ್ನು ಆಯೋಜಿಸಲಾಗಿದೆ.
ಶಾಲಾ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಶೇ.98 ರಷ್ಟು ಶಿಕ್ಷಕರಿಗೆ ಕೋವಿಡ್ ಲಸಿಕೆ ನೀಡಲಾಗಿರುತ್ತದೆ.
ಆಕ್ಸಿಜನ್ ಕೊರತೆ ನೀಗಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಇತ್ತೀಚಿಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಸಮೀಕ್ಷೆ ‌ನಡೆಸಲಾಗುತ್ತಿದ್ದು, ಸಮೀಕ್ಷೆ ಬಳಿಕ ಹಾನಿಯ‌ ನಿಖರ ಮಾಹಿತಿ ‌ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಸಭೆಯಲ್ಲಿ ತಿಳಿಸಿದರು.

ಚಿಕ್ಕೋಡಿ ಕೋವಿಡ್ ಪರೀಕ್ಷಾ ಲ್ಯಾಬ್ ಉದ್ಘಾಟನೆ:

ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದರ ಜತೆಗೆ ತ್ವರಿತವಾಗಿ ತಪಾಸಣಾ ವರದಿ ನೀಡಲು ಅನುಕೂಲವಾಗುವಂತೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ನೂತನ ಕೋವಿಡ್ ಆರ್.ಟಿ.ಪಿ.ಸಿ.ಆರ್. ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನ್ ಲೈನ್ ಮೂಲಕ ಉದ್ಘಾಟಿಸಿದರು.

ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ್ ಕತ್ತಿ ಸಭೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
****

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.