Breaking News

ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಕನ್ನಡ ಡಿಂಡಿಮ…

ಬೆಳಗಾವಿ, : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಲಕ್ಷ ಕಂಠ ಗೀತಗಾಯನ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ಗುರುವಾರ(ಅ.28) ಗೀತಗಾಯನವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ’; ನಿಸಾರ್ ಅಹಮದ್ ಅವರ ‘ಜೋಗದ ಸಿರಿ‌ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಸಾವಿರಾರು ವಿದ್ಯಾರ್ಥಿಗಳು ಹಾಡುವ ಮೂಲಕ ಕನ್ನಡ ನಾಡು-ನುಡಿಯ ಪ್ರೇಮವನ್ನು ಅನಾವರಣಗೊಳಿಸಿದರು.

ಕನ್ಮಡ ಬಳಕೆ‌ಯ ಪ್ರತಿಜ್ಞೆ:

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಆಡಳಿತ, ಪತ್ರವ್ಯವಹಾರ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಕನ್ನಡವನ್ನೇ ಬಳಸುವುದರ ಜತೆಗೆ ಕನ್ನಡ ನಾಡಿನಲ್ಲಿ ವಾಸಿಸುವ ಕನ್ನಡೇತರ‌ ಭಾಷಿಕರಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸುವುದಾಗಿ ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಇದೇ ವೇಳೆ ಮಾತನಾಡಿದ ಬೆಳಗಾವಿ ಸಂಸದರಾದ ಮಂಗಲ ಅಂಗಡಿ ಅವರು, “ಕನ್ನಡದ ಶ್ರೇಷ್ಠತೆಯನ್ನು ಸಾರುವುದು ಈ ಅಭಿಯಾನದ ವಿಶೇಷತೆಯಾಗಿದೆ. ಕನ್ನಡ ಗೀತಗಾಯನ ಅದ್ಭುತ ಕಾರ್ಯಕ್ರಮವಾಗಿದ್ದು, ಮಕ್ಕಳು ಸೇರಿದಂತೆ ಎಲ್ಲರೂ ಕೂಡ ಕನ್ನಡಪ್ರೇಮ ಮೆರೆಯಲು ಈ ಅಭಿಯಾನ ಉತ್ತಮ ಅವಕಾಶವಾಗಿದೆ” ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಪುಂಡಲೀಕ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು, ಸ್ವಾಗತಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು,ಜಿಲ್ಲಾ ಕನ್ನಡ ಜಾಗೃತ ಸಮಿತಿಯ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಂಗೀತ ಶಿಕ್ಷಕರಾದ ವಿನಾಯಕ ಮೋರೆ ಅವರ ನೇತೃತ್ವದಲ್ಲಿ ಬೆಳಗಾವಿಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗೀತಗಾಯನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
****

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.