Breaking News

ಬೆಳಗಾವಿಯೆಂದರೆ ಬಂಗಾರೆಪ್ಪ ಬಂಗಾರೆಪ್ಪ ಎಂದರೆ ಬೆಳಗಾವಿ

ಬೆಳಗಾವಿಯೆಂದರೆ ಬಂಗಾರೆಪ್ಪ
ಬಂಗಾರೆಪ್ಪ ಎಂದರೆ ಬೆಳಗಾವಿ
ಎನ್ನುವ ಕಾಲವೊಂದಿತ್ತು…….

ಇಂದು ಅಕ್ಟೋಬರ್ 26.ದಿವಂಗತ
ಮುಖ್ಯಮಂತ್ರಿ ಬಂಗಾರೆಪ್ಪ ಅವರ ಜನ್ಮದಿನ.ಬಂಗಾರೆಪ್ಪ ಅವರು ಬೆಳಗಾವಿಯಿಂದ ದೂರದ ಶಿವಮೊಗ್ಗ
ಜಿಲ್ಲೆಯ ಸೊರಬದವರಾಗಿದ್ದರೂ
ಬೆಳಗಾವಿಗೂ ಅವರಿಗೂ ಬಿಡಿಸಲಾಗದ
ನಂಟಿತ್ತು.ಗಡಿ, ನಾಡು,ನುಡಿಯ , ಜಲದ ಸಂಬಂಧಿತ ವಿಷಯಗಳ ಬಗ್ಗೆ ತಮ್ಮದೇ ಆದ ಗಟ್ಟಿಯಾದ ನಿಲುವು ಹಾಗೂ ಬದ್ಧತೆ
ಹೊಂದಿದ್ದ ಬಂಗಾರೆಪ್ಪ ಅವರು 1993 ರಲ್ಕ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದಾಗ ನನ್ನಂಥ ಸಾವಿರಾರು ಯುವಕರು ಅವರ ಬೆನ್ನಿಗೆ ನಿಂತಿದ್ದೆವು.
ಮುಖ್ಯಮಂತ್ರಿಯಾಗಿದ್ದಾಗಲೇ ಅವರು ಬೆಳಗಾವಿಯ ರಾಜಕಾರಾಣದಲ್ಲಿ ನೇರ ಹಸ್ತಕ್ಷೇಪ ಮಾಡಿದ್ದರಿಂದಲೇ ಬೆಳಗಾವಿಯ ಇತಿಹಾಸದಲ್ಲಿ ಮೊಟ್ಟ
ಮೊದಲ ಬಾರಿಗೆ 1991 ರಲ್ಲಿ ದಿ.ಸಿದ್ದನಗೌಡ ಪಾಟೀಲರು ಕನ್ನಡದ ಮಹಾಪೌರರಾದರು.
ನಿಸ್ಸಾರ ಅಹ್ಮದ ಸನದಿ ಅವರು ಉಪ
ಮಹಾಪೌರರಾದರು!
ಈ ಇತಿಹಾಸ ಸೃಷ್ಟಿಯಾಗುವ ಮೊದಲು ಮಹಾಪೌರರಾಗಿದ್ದ ಎಮ್.ಇ.ಎಸ್.ನ ದಿ.ಸಂಭಾಜಿ ಪಾಟೀಲರು ಸಿಎಮ್ ಬಂಗಾರೆಪ್ಪ ಅವರನ್ನು ಬೆಳಗಾವಿಗೆ ಆಹ್ವಾನಿಸಿ ಸನ್ಮಾನ ಮಾಡಿದ್ದೂ ಸಹ ಬೆಳಗಾವಿಯಲ್ಲಿ ಒಂದು ಐತಿಹಾಸಿಕ ಘಟನೆಯೇ ಆಗಿತ್ತು.40 ಕಿ.ಮೀ.ದೂರದ ಹಿಡ್ಕಲ್ ಜಲಾಶಯದಿಂದ ಬೆಳಗಾವಿಗೆ ನೀರು ಪೂರೈಸುವ 25 ಕೋ.ರೂ.ಯೋಜನೆಗೆ ಅಡಿಗಲ್ಲು ಹಾಕಿದ ಬಂಗಾರೆಪ್ಪ ಕನ್ನಡ ಮತ್ತು ಮರಾಠಿಗರ ಮನಸ್ಸು ಗೆದ್ದರು.ಸಂಭಾಜಿ ಮಾತ್ರ ಎಮ್.ಇ.ಎಸ್.ನಾಯಕರ ಆಕ್ರೋಶಕ್ಕೆ ಕಾರಣರಾಗಿ ಮದುವೆ ಮತ್ತು ಮಸಣ ಕ್ರಿಯೆಗಳಿಂದ ಬಹಿಷ್ಕಾರಕ್ಕೆ ಒಳಗಾದರು!
ಬೆಳಗಾವಿಯಿಂದ ಪ್ರಕಟವಾಗುವ ದಿನಪತ್ರಿಕೆಗಳು ಸೋತು ಸೊರಗಿದ ಸಮಯದಲ್ಲಿ ಅವುಗಳಿಗೆ ಆಕ್ಸಿಜೆನ್ ನೀಡಿದವರು ಬಂಗಾರೆಪ್ಪ.ಪ್ರತಿ ತಿಂಗಳು ಎರಡು ಅರ್ಧ ಪುಟಗಳಷ್ಟು ವಿಶೇಷ ಜಾಹೀರಾತುಗಳು ದೊರೆಯುವಂತೆ ಮಾಡಿದ ಬಂಗರೆಪ್ಪ ಗಡಿ ಭಾಗದ ಪತ್ರಿಕೆಗಳಿಗೆ ಜೀವ ತುಂಬಿದರು.ಇಂದಿಗೂ ರಾಜ್ಯ ಸರಕಾರ ವಿಶೇಷ ಜಾಹೀರಾತುಗಳನ್ನು ನೀಡುತ್ತಿದೆ.
ವೀರರಾಣಿ ಕಿತ್ತೂರು ಚೆನ್ನಮ್ಮಳ ಕಿತ್ತೂರು ಹಾಳು ಬಿದ್ದಿತ್ತು.ಅಲ್ಲೊಂದು ಪ್ರಾಧಿಕಾರ ರಚಿಸಿ ಒಂದು ಕೋಟಿ ರೂ.ಆರಂಭಿಕ ನಿಧಿ ಕೊಟ್ಟು ಅಭಿವೃದ್ಧಿಗೆ ನಾಂದಿ ಹಾಡಿದವರೇ ಬಂಗಾರೆಪ್ಪ.
ಬೆಳಗಾವಿಯಿಂದ ಕನ್ನಡಿಗರ ನಿಯೋಗ ಅವರ ಬಳಿ ಹೋದಾಗಲೆಲ್ಲ ಅವರಲ್ಲಿಯ ನಾಡು, ನುಡಿ ಮತ್ತು ಗಡಿಯ ಕುರಿತ ಅಭಿಮಾನ ಎದ್ದು ಕಾಣುತ್ತಿತ್ತು.ನಾನು ಅನೇಕ ಬಾರಿ ಇದನ್ನು ಕಂಡಿದ್ದೇನೆ.ಹೆಸ್ಕಾಮ್ ಕಾರ್ಯಕಾರಿ ಅಭಿಯಂತರಾಗಿದ್ದ ಶ್ರೀ ಹೂಗಾರ ಎಂಬವರು ಉದ್ದಿಮೆದಾರರೊಬ್ಬರ ವಿದ್ಯುತ್ ಕಳ್ಳತನವನ್ನು ಪತ್ತೆ ಹಚ್ಚಿದ್ದರು.ಉದ್ದಿಮೆದಾರರು ಎಮ್.ಇ.ಎಸ್.ಶಾಸಕರ ಮೂಲಕ ಹೂಗಾರ ಅವರನ್ನು ಬೆಳಗಾವಿಯಿಂದ ಬೀದರಗೆ ವರ್ಗ ಮಾಡಿಸಿದ್ದರು.ಇದನ್ನು ವಿರೋಧಿಸಿ ನಾನು ಮತ್ತು ನನ್ನ ಗೆಳೆಯರು ಬೆಂಗಳೂರಿಗೆ ಧಾವಿಸಿ ಬಂಗಾರೆಪ್ಪ ಅವರನ್ನು ಭೆಟ್ಟಿಯಾದೆವು.ನಮ್ಮ ಮನವಿಯ ಮೇಲೆ ಅವರು ಟಿಪ್ಪಣಿ ಬರೆಯುವಷ್ಟರಲ್ಲಿ ಅವರ ವಿಶೇಷ ಕಾರ್ಯದರ್ಶಿ ಕೋಟಲಿಂಗೇಗೌಡ ಅವರು ಮಧ್ಯ ಪ್ರವೇಶಿಸಿ,” ಈ ಅಧಿಕಾರಿಯ ಮೇಲೆ ಅಲಿಗೇಶನ್ ಇವೆ” ಎಂದು ಬಿಟ್ಟರು!
ಆಗ ಬಂಗಾರೆಪ್ಪ ಅವರು,” ಅವರದು ಅಲಿಗೇಶನ್, ಇವರದು ಡೆಲಿಗೇಶನ್” ಎಂದ್ಯ್ ಕಾರ್ಯದರ್ಶಿಗೆ ಉತ್ತರ ಕೊಟ್ಟು ವರ್ಗಾವಣೆ ರದ್ಧುಗೊಳಿಸಿದರು!
ಈ ನಡವಳಿಕೆಗಳು ನಮ್ಮಂಥ ಯುವಕರನ್ನು ಸೆಳೆದವು.ಕೆಸಿಪಿ ಕಟ್ಟಿದ ಬಂಗಾರೆಪ್ಪ ಅವರನ್ನು ಬೆಳಗಾವಿಗೆ ತಂದು ಮೆರೆಸಿದೆವು.ಕಿತ್ತೂರು ಚೆನ್ನಮ್ಮ ವೃತ್ತದಿಂದ ವಡಗಾವಿಯ ಶ್ರೀ ಬನಶಂಕರಿ ದೇವಸ್ಥಾನದವರೆಗೆ ವಾಹನಗಳ ಸಾಲು ಸಾಲು.ಕೊನೆಗೆ ಬಹಿರಂಗ ಸಭೆ.ನಾನು, ನಿಸ್ಸಾರ್ ಅಹ್ಮದ ಸನದಿ ಸೇರಿ ಸಭೆಗಳನ್ನು ಆಯೋಜಿಸಿದೆವು.ಬಂಗಾರೆಪ್ಪ ಹೋದಲ್ಲೆಲ್ಲ ಬಂದಲ್ಲೆಲ್ಲ ಜನವೋ ಜನ.
ಬೆಳಗಾವಿಯ ಜನರು ಇಂದಿಗೂ ಅವರನ್ನು ಸ್ಮರಿಸುತ್ತಾರೆ.ಅವರ ಹೆಸರಿನಲ್ಲಿ ಒಂದು ಕಾಲನಿಯೂ ಬೆಳಗಾವಿಯಲ್ಲಿದೆ.
(ಬೆಳಗಾವಿಯ ವಡಗಾವಿಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಸಭೆಯಲ್ಲಿ ನಾನು ಭಾಷಣ ಮಾಡುತ್ತಿದ್ದಾಗ ಬಂಗಾರೆಪ್ಪ, ಮಾಜಿ ಸಚಿವ ದಿ.ಮಲ್ಹಾರಿಗೌಡ ಪಾಟೀಲ, ನಿಸ್ಸಾರ ಅಹ್ಮದ ಸನದಿ( ಸಫಾರಿ ಡ್ರೆಸ್ ಹಾಕಿದವರು) ದಿ.ಗೋಪಾಲ ಘಂಟಿ ಇದ್ದಾರೆ).
ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ ಮೊ:9620114466

Check Also

ಶಿಕ್ಷಣ ಕ್ಷೇತ್ರಕ್ಕೆ 1500 ಕೋಟಿ ದೇಣಿಗೆ ನೀಡಿದ ಅಜೀಂ ಪ್ರೇಮಜೀ….

“ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ” ಲೋಗೋ ಅನಾವರಣ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ: ಸಚಿವ ಮಧು ಬಂಗಾರಪ್ಪ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.