ಬಂಡಾಯʼಕ್ಕೆ ಇನ್ನೊಂದು ಹೆಸರು – ಪ್ರೀತಿಯ  ‘ಚಂಪಾʼ

*’ಬಂಡಾಯʼಕ್ಕೆ ಇನ್ನೊಂದು ಹೆಸರು – ಮನುಷ್ಯ ಪ್ರೀತಿಯ  ‘ಚಂಪಾʼ*
*( ಪ್ರೀತಿಯ ಗುರುಗಳಿಗೆ ನಮನಗಳು)*

*ʼಬಂಡಾಯʼ* ಎಂದಾಗ ಥಟ್ಟನೆ ಎದುರಾಗುವ ಸಾಂಸ್ಕೃತಿಕ ವ್ಯಕ್ತಿತ್ವ *’ಚಂಪಾ’* ಕನ್ನಡ ಅಸ್ಮಿತೆಯ ಜನಪರ ಸಾಂಸ್ಕೃತಿಕ ಧ್ವನಿ ಒಂದುಕಾಲಕ್ಕೆ ಧಾರವಾಡದಿಂದ ಪುಟಿದೆದ್ದು ನಾಡಿನ ತುಂಬಾ ಅನುರಣಿಸುತ್ತಿತ್ತು. ಇಂದು ಈ ಧ್ವನಿ ಬೆಂಗಳೂರಿನಲ್ಲಿ ದೈಹಿಕವಾಗಿ ಅಸ್ತಂಗತವಾಗಿದೆ. ಆದರೆ, ಆ ಧ್ವನಿಯಿಂದ ಹೊರಟ ಪ್ರತಿಧ್ವನಿ ಅಲೆಗಳು ನಮ್ಮ ಮಧ್ಯ ಧ್ವನಿ ಮಾಡುತ್ತಿವೆ. ಕನ್ನಡ ಸಾಂಸ್ಕೃತಿಕ ಲೋಕದ ಜೀವಪರ ಚಂಪಾ ಎಂಬ ಅಗಮ್ಯೆ ಧ್ವನಿ ಒಂದು ದೊಡ್ಡಶಕ್ತಿ ಇದ್ದಾಗ ಪ್ರತಿಧ್ವನಿಗಳೊಗೆ ಒಂದುರೀತಿಯ ಬಲಬಂದಂತೆ. ಧಾರವಾಡದ ನೆಲದಲ್ಲಿನ ಶಾಮಲೆಯ ಗುಪ್ತಗಾಮಿನಿ ಬೋರಗರೆದದ್ದು ಚಂಪಾ ಎಂಬ ದಭೆದಭೆಯಿಂದ. ದಕ್ಷಿಣ ಕರ್ನಾಟಕದಲ್ಲಿ ಬಂಡಾಯದ ಸಾಮೂಹಿಕ ಧ್ವನಿ ಮೊಳಗುತ್ತಿದ್ದ ಸಂದರ್ಭದಲ್ಲಿ ಚಂಪಾ ಏಕಮಾತ್ರ ಕಂಠ ಮೊಳಗಿ ಪ್ರತಿಧ್ವನಿಗಳನ್ನು ಸೃಷ್ಟಿಸಿದ್ದು ವಿಶೇಷ.

ಬಂಡಾಯದ ಇನ್ನೊಂದು ಹೆಸರು ʼಮನುಷ್ಯ ಪ್ರೀತಿʼ. ಯಾರೂ ಏನೇ ಹೇಳಿದರೂ ಈ ಮಾತು ಚಂಪಾ ಅವರಿಗೆ ಪೂರ್ಣಪ್ರಮಾಣದಲ್ಲಿ ಅನ್ವಯಿಸುತ್ತದೆ. ʼಪ್ರೀತಿ ಇಲ್ಲದೆ ನಾ ಏನನನೂ ಮಾಡಲಾರೆ, ದ್ವೇಷವನ್ನೂ ಕೂಡʼ ಎಂಬುದು ಚಂಪಾ ಅವರ ಬಂಡಾಯದ ಮೂಲಬೇರವಾಗಿತ್ತು. ಬಂಡಾಯದ ಹಣೆಪಟ್ಟಿಕಟ್ಟಿಕೊಂಡು ಮೆರೆಯುವ ಅದಷ್ಟೋ ಸಾಹಿತಿಗಳೆನಿಸಿಕೊಂಡವರು ಬಡವರ ಹೊಟ್ಟೆಯ ಮೇಲೆ ಕಾಲಿಟ್ಟಿದ್ದು, ಅಸಹಾಯಕರ ಗೋನು ಮುರಿದಿರುವ ಅಮಾನವೀಯ ಹೀನ ಮುಖಗಳನ್ನು ಕಂಡಿದ್ದೇನೆ. ಚಂಪಾ ಈ ವರ್ತನೆಗೆ ಎಂದೂ ಅವಕಾಶ ಕಲ್ಪಿಸಲಿಲ್ಲ. ಸ್ವಾರ್ಥಸಾಧನೆಗಾಗಿ ಬಾಲಬುಡಕರ ಗುಂಪು ಕಟ್ಟಿಕೊಂಡು ಸ್ವಹಿತಾಸಕ್ತಿಯ ಜಾತ್ರೆಗೆ ಅವರು ಅವಕಾಶ ನೀಡಲಿಲ್ಲ.  ತಾನೊಬ್ಬನೇ ಬಂಡಾಯದ ವಾರಸುದಾರ  ಎಂದು ಎಂದೂ ಮೆರೆಯಲಿಲ್ಲ. ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ಪ್ರೀತಿಯಿಂದ ಬರಮಾಡಿಕೊಂಡು ದಾರಿ ತೋರಿದರೆ ಹೊರತು, ಹತ್ತಿಕ್ಕುವ ಹುನ್ನಾರ ಅವರಲ್ಲಿ ಹುಟ್ಟಲಿಲ್ಲ. ಜೀರ್ಣೀಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಕೂಡಗೋಲು ನುಂಗಬೇಕು ಎಂದು, ಬಂಡಾಯದಿಂದ ಉಂಟಾಗುವ ಬಿಕ್ಕಟ್ಟುಗಳನ್ನು ಏಕಮಾತ್ರ ವ್ಯಕ್ತಿಯಾಗಿ ಎದುರಿಸಿದವರು. ಪ್ರಭುತ್ವಕ್ಕೆ ನೇರವಾಗಿ ಸವಾಲು ಎಸೆಯುವದರ ಮೂಲಕ ನಡುಕು ಉಂಟು ಮಾಡಿದರು.  ಬಾಲಬುಡರಕನ್ನು ಕಟ್ಟಿಕೊಂಡು ಎಂದೂ ಅಅವರು ಕುಡಗೋಲು ನುಂಗುವ ಬುದ್ದಿಗೇಡಿತನ ಮಾಡಲಿಲ್ಲ. ಇದಕ್ಕೆ ಹೊರತಾಗಿ, ಸ್ವತಂತ್ರ ವಿಚಾರಧಾರೆಗಳನ್ನು ಪೋಷಿಸಿ, ಬೆಳೆಸಿ ಆಶ್ರಯ ನೀಡಿದವರು. ʼಸಂಕ್ರಮಣʼ ಸಾಹಿತ್ಯ- ಸಾಂಸ್ಕೃತಿಕ ಕ್ರಾಂತಿಗೆ ಮಾತ್ರ ಸೀಮಿತಗೊಳದೆ ಹೊಸ ತಲೆಮಾರಿನ ವೈಚಾರಿಕ ಕ್ರಾತಿಯ ಅಕ್ಷರಗಳಿಗೆ ಧ್ವನಿ ನೀಡಿತು. ಆ ಸಂಕ್ರಮಣದ ಮೂಲಕ ಅದೆಷ್ಟೊ ಹೊಸ ತಲೆಮಾರುಗಳನ್ನು ಹುಟ್ಟುಹಾಕಿದವರು. ಕನ್ನಡ ಅಸ್ಮಿತೆ, ಜನಪರ ನಿಲುವುಗಳ ಅಭಿವ್ಯಕ್ತಿ ಸಂದಿಗ್ಧ ಸಂದರ್ಭಗಳಲ್ಲಿ ಯಾರ ಬರುವಿಕೆಗಾಗಿ ಕಾಯದೇ  ಒಂಟಿಧ್ವನಿ ಮೊಳಗಿಸಿದ ಕನ್ನಡ ಸಾಂಸ್ಕೃತಿಕ ಲೋಕದ ಒಂಟಿ ಸಲಗ ಎಂಬುದರಲ್ಲಿ ಚಂಪಾ ಅಸ್ತಿತ್ವ ಇರುವುದು. ಚಂಪಾ ಅವರ ಬರಹ ಮಾತು ಸತ್ಯವನ್ನು ಬಟಾಬಯಲುಗೊಳಿಸುವ ಕಟು ವ್ಯಂಗ್ಯ. ಈ ವ್ಯಂಗ್ಯದ ಏಟು ತೊಗಲ ಬಿರಿದು ಆಳಕ್ಕಿಳಿಯುತ್ತಿತ್ತ. ಇದರ ಹಿಂದೆ ತಾತ್ವಿಕ ಹಾಗೂ ಸೈದ್ಧಾಂತಿಕ ಸ್ಪಷ್ಟವಾದ ಗಟ್ಟಿತನ ಇತ್ತು. ಈ ಕಾರಣಕ್ಕಾಗಿ ಚಂಪಾರನ್ನು ಅಷ್ಟು ಸುಲಭವಾಗಿ ಯಾರಿಗೂ ಬಗ್ಗಿಸಲು ಸಾಧ್ಯವಿರಲಿಲ್ಲ. – ಹೀಗೆ ಅವರ ಬಂಡಾಯದ ಜೀವದ್ರ್ಯದ ಬಗ್ಗೆ ಹೇಳುತ್ತ ಹೋದಂತೆ ಸಾಕಷ್ಟು ವಿಚಾರಗಳು ಹೊರಬರುತ್ತವೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ ಜೊತೆಗೆ ಮುಕ್ತವಾಗಿ ಮಾತನಾಡುವ ಅವಕಾಶ ನನ್ನಂಥ ಸ್ವತಂತ್ರ ವಿಚಾರಶೀಲ ಮನಸ್ಸುಗಳಿಗೆ ಚಂಪಾಸ್ಪರ್ಶ ಸಹಜ ಮತ್ತು ಅನಿವಾರ್ಯವಾಗಿತ್ತು. ಕನ್ನಡ ಅಧ್ಯಯನ ಪೀಠ ಗುಂಪುಗಾರಿಕೆಯ ಗೂಡಾದಾಗ ಚಂಪಾ ಮಾತ್ರ ಸೃಜನಶೀಲ ಮನಸ್ಸುಗಳ ಕಟ್ಟುವ ಕೆಲಸ ಮಾಡಿದರು. ಬೆಳೆಸುವದ ಮೂಲಕ ಬೆಳೆದರು. ಅದಕ್ಕೆ ಪೂರಕವಾದ ವೇದಿಕೆಗಳನ್ನು ಧಾರವಾಡದ ನೆಲದಲ್ಲಿ ನಿರಂತರ ಹಮ್ಮಿಕೊಂಡರು. ಅವರೊಳಗಿನ ಸಾಂಸ್ಕೃತಿಕ ಕಾಳಜಿಯ ಗುಪ್ತಗಾಮಿನಿ ಹೊಸ ಜೀವ ಪಡೆದುಕೊಂಡು ಪ್ರವಾಹದಂತೆ ಹರೆದದ್ದು. ಈ ನದಿ ರಾಜ್ಯದ ರಾಜಧಾನಿಯತ್ತ ಮುಖಮಾಡಿದರೂ ನೆಲದ ಸ್ಪರ್ಶ ಮಾತ್ರ ಕಳೆದುಕೊಂಡಿರಲಿಲ್ಲ.

ಕನ್ನಡ ಅಧ್ಯಯನ ಪೀಠದಿಂದ ಅದೇನು ಕಲಿತೆದ್ದೇನೋ ಗೊತ್ತಿಲ್ಲ ಚಂಪಾರ ಒಡನಾಟದಿಂದ ಸಾಂಸ್ಕೃತಿಕ ಕಾಳಜಿಗೆ ವೈಚಾರಿಕ ಸ್ಪರ್ಶ ಹಾಗೂ ಅಭಿವ್ಯಕ್ತಿಯ ಗಟ್ಟಿತನ ದಕ್ಕಿದ್ದು ಸತ್ಯ. ಹೀಗಾಗಿ, ನನ್ನಂಥ ಅದೆಷ್ಟೋ ಹುಡುಗರಿಗೆ ಸಾಂಸ್ಕೃತಿಕ ಗುರುಗಳಾಗಿ ಕಂಡವರು. ಇಂತಹ ಪ್ರೀತಿಯ ಗುರುಗಳು ವಯೋಸಹಜ ಬಳಲಿಕೆಯಿಂದ ಇತ್ತೀಚೆಗೆ ಸಂಪರ್ಕ ನಿಲ್ಲುವುದರಕ್ಕಿಂತ ಪೂರ್ವದಲ್ಲಿ ಮೇಲಿಂದ ಮೇಲೆ ಅವರಿಂದ ದೂರವಾಣಿ ಬಂದಾಗ ಅವರ ಬಂಡಾಯದ ಧ್ವನಿ ಎದೆಯಲ್ಲಿ ರಿಂಗನಿಸುತ್ತಿತ್ತು. ಎಲ್ಲರಿಗೂ ಅವರ ಮೊದಲು ಮಾತು ‘ಹ್ಯಾಗದರಿ. ಅರಾಮ ಅದೇರಿಲ್ಲ?ʼ ಎಂಬ ಎದೆಯೊಳಗಿನ ಮಾತು ಎದೆಯೊಳಗೆ ಪ್ರವೇಶಿಸುತ್ತಿತ್ತು. ಸಂಕ್ರಮಣದ ಬಗ್ಗೆ, ಬರವಣಿಗೆಯ ಬಗ್ಗೆ ಅಷ್ಟಿಷ್ಟು ಮಾತುಗಳು, ಒಂದಿಷ್ಟು ಚಾಟಿ ಮಾತುಗಳು ಸಹಜ. ಅವರೊಂದು ರಾಜಕೀಯ ಪಕ್ಷ ಸೇರಿದಾಗ ಲಂಕೇಶ ಪತ್ರಿಕೆಗೆ ಅವರ ವಿರುದ್ದ ಬರೆದಾಗ ಮನಿಸಿಕೊಂಡರೂ ಪ್ರೀತಿಯಿಂದಲೇ ಮಾತನಾಡಿ, ಪ್ರೀತಿಯ ಹೂವು ಅರಳಿಸಿದ ಅಪರೂಪದ ಬೌದ್ಧಿಕ ಗುರುಗಳು. ಇಂಥ ಗುರು ಇಲ್ಲ ಎಂದು ಕಲ್ಪಿಸುವುದು ಸಹಜವಾಗಿ ಶಕ್ತಿ ಉಡುಗಿದಂತಾಗುತ್ತದೆ.

*- ಕೆ. ಎನ್.‌ ದೊಡ್ಡಮನಿ,*

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.