Home / Breaking News / ಮೋಬೈಲ್ ತೆಗೆದುಕೊಳ್ಳಲು ದುಡ್ಡು ಕೊಡದ ಅತ್ತಿಗೆಯ ಮರ್ಡರ್…

ಮೋಬೈಲ್ ತೆಗೆದುಕೊಳ್ಳಲು ದುಡ್ಡು ಕೊಡದ ಅತ್ತಿಗೆಯ ಮರ್ಡರ್…

ಬೆಳಗಾವಿ
ಮೊಬೈಲ್ ತೆಗೆದುಕೊಳ್ಳಲು ಹಣ ನೀಡಲು ನಿರಾಕರಿಸಿದ ಅತ್ತಿಗೆಯನ್ನೇ ಕೊಲೆ ಮಾಡಿದ್ದ ಮೈದುನನ್ನು ಪೊಲೀಸರು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರ ಕ್ಷೀಪ್ರ ಕಾರ್ಯಾಚರಣೆಯಿಂದ ಆಕಸ್ಮಿಕ ಸಾವು ಪ್ರಕರಣ ಕೊಲೆಯ ರಹಸ್ಯವನ್ನು ಬಿಚ್ಚಿಡುವಂತೆ ಸಾರಿದೆ.
ಮಹಾಂತೇಶ ನಗರದಲ್ಲಿ ವಾಸವಾಗಿದ್ದ ಬಸಲಿಂಗವ್ವ ಅದೃಶಿ ಎಮ್ಮಿನಕಟ್ಟಿ (೨೯) ಹತ್ಯೆಗೀಡಾಗಿದ್ದ ಮಹಿಳೆ. ಮಂಜುನಾಥ ಶಿವಪುತ್ರ ಎಮ್ಮಿನಕಟ್ಟಿ (೩೨) ಬಂಧಿತ ಆರೋಪಿಯಾಗಿದ್ದಾನೆ. ಮೂಲತಃ ಖಾನಾಪುರ ತಾಲೂಕಿನ ಗುಂಡೆನಟ್ಟಿ ಗ್ರಾಮದವರಾದ ಇವರು ಹೊಟ್ಟೆಪಾಡಿಗಾಗಿ ಬೆಳಗಾವಿ ನಗರಕ್ಕೆ ಬಂದು ಹತ್ಯೆಗೀಡಾದ ಬಸಲಿಂಗವ್ವ, ಅವಳ ಪತಿ ಅದೃಶಿ ಹಾಗೂ ಮೈದುನ ಮಂಜುನಾಥ ಇಲ್ಲಿನ ಮಹಾಂತೇಶ ನಗರದಲ್ಲಿ ಶ್ರೀ ವೀರಭದ್ರೇಶ್ವರ ಖಾನಾವಳಿ ನಡೆಸುತ್ತಿದ್ದರು. ಜನವರಿ ೨ರಂದು ಆರೋಪಿ ಮಂಜುನಾಥ ಖಾನಾವಳಿಯಿಂದ ತನ್ನ ಅಣ್ಣನಾದ ಅದೃಶಿಗೆ ಮನೆಗೆ ಹೋಗಿ ಮೊಬೈಲ್ ಚಾರ್ಜ್ ಮಾಡಿಕೊಂಡು ನಂತರ ಎಪಿಎಂಸಿಗೆ ಹೋಗಿ ಈರುಳ್ಳಿ ತರುವುದಾಗಿ ಹೇಳಿ ಮನೆಗೆ ಹೋಗಿದ್ದಾನೆ. ಮನೆಯಲ್ಲಿದ್ದ ಅತ್ತಿಗೆ ಬಸಲಿಂಗವ್ವಳಿಗೆ ತಕ್ಷಣ ₹೧೦ ಸಾವಿರ ಕೊಡಿ ನಾನು ಹೊಸ ಮೊಬೈಲ್ ತೆಗೆದುಕೊಳ್ಳಬೇಕು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈತನ ಹಣದ ಬೇಡಿಕೆಗೆ ಸ್ಪಂದಿಸದ ಬಸಲಿಂಗವ್ವ ನಿನ್ನ ಬಳಿ ಈಗಾಗಲೇ ಮೊಬೈಲ್ ಇದೆ. ಇನ್ನೂ ಸ್ವಲ್ಪ ದಿನದ ಬಳಿಕ ಹೊಸದಾಗಿ ಮೊಬೈಲ್ ತೆಗೆದುಕೊಳ್ಳುವಂತೆ ಎಂದು ತಿಳಿ ಹೇಳಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮಂಜುನಾಥ ಅತ್ತಿಗೆಯೊಂದಿಗೆ ವಾಗ್ವಾದ ನಡೆಸಿದ್ದರಿಂದ ಆಕ್ರೋಶಗೊಂಡ ಬಸಲಿಂಗವ್ವ ಕಪಾಳಮೋಕ್ಷ ಮಾಡಿ, ನಂತರ ಅಡುಗೆ ಮನೆಯತ್ತ ತೆರಳಿದ್ದಾಳೆ. ಈ ವೇಳೆ ಹಿಂಬದಿಯಿಂದ ತೆರಳಿದ ಮಂಜುನಾಥ ಮೊಬೈಲ್ ಚಾರ್ಜ್‌ರ ಕೇಬಲ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ, ಬಳಿಕ ಮೃತದೇಹವನ್ನು ಬೆಡ್‌ರೂಮ್‌ಗೆ ತೆಗೆದುಕೊಂಡು ಹೋಗಿ ಮಲಗಿಸಿದ್ದಾನೆ. ನಂತರ ತನ್ನ ಹಿರಿಯ ಸಹೋದರ ಅದೃಶಿ ಎಮ್ಮಿನಕಟ್ಟಿಗೆ ಫೋನ್ ಮಾಡಿ ಅತ್ತಿಗೆ ಕುಸಿದು ಬಿದ್ದಿದ್ದಾಳೆ. ಆದ್ದರಿಂದ ಮನೆಗೆ ಬೇಗ ಬರುವಂತೆ ತಿಳಿಸಿದ್ದಾನೆ.

ಈ ಸುದ್ದಿ ತಿಳಿದ ಬಸಲಿಂಗವ್ವನ ಪತಿ ಅದೃಶಿ ಕೂಡಲೇ ಮನೆಗೆ ಬಂದು ವಿಚಾರಿಸಿದ್ದಾನೆ. ಈ ವೇಳೆ ಆರೋಪಿ ಮಂಜುನಾಥ ಅಣ್ಣನ ಮುಂದೆ ಇನ್ನಿಲ್ಲದ ಕಟ್ಟುಕತೆಯನ್ನು ಹೇಳಿದ್ದಾನೆ. ಸಹೋದರ ಮಾತಿನ ಮೇಲಿನ ನಂಬಿಕೆಯಿಂದ ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಈಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ ಎಂಎಲ್‌ಸಿ ದಾಖಲುಮಾಡಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಮಾಳಮಾರುತಿ ಠಾಣೆಯ ಪೊಲೀಸರು ಖಾಸಗಿ ಆಸ್ಪತ್ರೆಗೆ ದೌಡಾಯಿಸಿ ಮೃತದೇಹವನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುತ್ತಿಗೆ ಮೇಲೆ ಸಣ್ಣ ಪ್ರಮಾಣದ ಗುರುತು ಕಾಣಿಸಿಕೊಂಡಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿ ಮಂಜುನಾಥ ಹಾಗೂ ಮೃತಳ ಪತಿ ಅದೃಶಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಹೋದರರಿಬ್ಬರು ಇದು ಆಕಸ್ಮಿಕ ಸಾವು. ಕುತ್ತಿಗೆಗೆ ಮೊದಲಿನಿಂದಲೂ ಗುರುತು ಇದೆ ಎಂದು ಕಟ್ಟುಕತೆ ಕಟ್ಟಿದ್ದಾರೆ. ಇವರಿಬ್ಬರ ಹೇಳಿಕೆ ಮೇಲೆ ಅನುಮಾನಗೊಂಡ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ಸಹೋದರರಿಗೆ ಮೃತದೇವನ್ನು ಅಂತ್ಯಸಂಸ್ಕಾರ ಮಾಡುವಂತೆ ತಿಳಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಸುನೀಲಕುಮಾರ ಪಾಟೀಲ ನೇತೃತ್ವದ ತಂಡ ಮತ್ತೆ ಇಬ್ಬರು ಸಹೋದರರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹೇಳಿಕೆ ನೀಡಿದ್ದಕ್ಕೂ, ಮೊದಲು ಹೇಳಿಕೆ ನೀಡಿರುವುದಕ್ಕೂ ವ್ಯತ್ಯಾಸ ಕಂಡುಬಂದಿದೆ. ನಂತರ ಮನೆಗೆ ತೆರಳಿದ ಪೊಲೀಸರು ಮೂರನೇ ಬಾರಿಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆಯೂ ಮೊದಲೆರಡು ಬಾರಿಗೆ ಹೇಳಿಕೆ ನೀಡಿದ್ದಕ್ಕೂ, ಮೂರನೇ ಬಾರಿಗೆ ಹೇಳಿಕೆ ನೀಡಿದ್ದಕ್ಕೂ ತಾಳೆಯಾಗದ ಹಿನ್ನೆಲೆಯಲ್ಲಿ ಪೊಲೀಸರ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಈ ವೇಳೆ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಕೊಲೆ ಮಾಡಿದ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಆಕಸ್ಮಿಕ ಸಾವು ಪ್ರಕರಣವನ್ನು ವಿಚಾರಣೆ ನಡೆಸಿ, ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾಳಮಾರುತಿ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಸುನೀಲಕುಮಾರ ಪಾಟೀಲ ನೇತೃತ್ವದ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ, ಡಿಸಿಪಿಗಳಾದ ಸ್ನೇಹಾ.ಪಿ.ವಿ, ರವೀಂದ್ರ ಗಡಾದಿ ಸೇರಿದಂತೆ ಇನ್ನೀತರ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಚಾರ್ಜರ್ ಕೇಬಲ್‌ನಿಂದ ಅತ್ತಿಗೆ ಕುತ್ತಿಗೆ ಬಿಗಿದು ಕೊಲೆ ಮಾಡಲಾದ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಸಿಬ್ಬಂದಿ ಬೇಧಿಸಿದ್ದಾರೆ. ಪೊಲೀಸ ಇನ್‌ಪೆಕ್ಟರ್ ನೇತೃತ್ವದ ತಂಡ ಉತ್ತಮ ಕಾರ್ಯ ಮಾಡಿದೆ.
– ರವೀಂದ್ರ ಗಡಾದಿ ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *