ಅಂತರರಾಷ್ಡ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ವಿಶೇಷ ವರದಿ
ರೋಗ ಇದೆ ಎಂದು ಹೆದರಲಿಲ್ಲ,ಬದುಕುವ ಛಲ ಬಿಡಲಿಲ್ಲ,ಎಲ್ಲ ಸವಾಲುಗಳನ್ನು ಎದುರಿಸಿ,ಸುಮಾರು ಇಪ್ಪತ್ತು ಮಕ್ಕಳಿಗೆ ಆಶ್ರಯ ನೀಡಿ,ಇಲ್ಲಿ ಆಶ್ರಯ ಪಡೆದ ಮಕ್ಕಳ ಅರೈಕೆ ಮಾಡಿದ ಈ ಮಹಾತಾಯಿಯ ಮಾನವೀಯ ಸೇವೆಗೊಂದು ಸಲಾಂ….!!!
ಬೆಳಗಾವಿ- ಮಾರಕ ಎಚ್‌ಐವಿಗೆ ಸವಾಲೆಸೆದು, ಎಚ್‌ಐವಿ ಪೀಡತರಿಗೆ ಬದುಕು ನೀಡಿದ ಮಾದರಿ ಮಹಿಳೆ – ಬೆಳಗಾವಿಯ ನಾಗರತ್ನ ಸುನಿಲ್ ರಾಮಗೌಡ
ಎಚ್‌ಐವಿ ಒಂದು ಮಾರಣಾಂತಿಕ ಖಾಯಿಲೆ ಎಂದು ಪರಿಗಣಿಸಲಾಗಿದೆ. ಈ ಖಾಯಿಲೆ ಬಂದರೆ ಸಾವು ಖಚಿತ ಎಂದು ಭಯಪಡುವುದು ಸಾಮಾನ್ಯ. ಆದರೆ, ಈ ಖಾಯಿಲೆಯನ್ನು ಎದುರಿಸಿ ಬದುಕಬಹುದು ಎಂದು ವಿಶ್ವಾಸದೊಂದಿಗೆ, ಈ ಖಾಯಿಲೆಯಿಂದ ಬಳಲುವವರಿಗೆ ಆತ್ಮಸ್ಥರ್ಯ ತುಂಬಿ ಅವರ ಬದುಕಿಗೆ ಆಶ್ರಯ ಒದಗಿಸಿ, ಸೂಕ್ತ ಮಾಗದರ್ಶನ ನೀಡುವುದರ ಮೂಲಕ ವಿಶ್ವಾಸದಿಂದ ಬದುಕುವ ಭರವಸೆ ಮೂಡಿಸಿದ ಮಹಿಳೆಯ ಬೆಳಗಾವಿಯ ನಾಗರತ್ನ ಸುನಿಲ್ ರಾಮಗೌಡ ಅವರು.
ನಾಗರತ್ನ ಅವರು ೧೬ ವರ್ಷದವರಾಗಿದ್ದಾಗ ೧೯೯೭ರಲ್ಲಿ ಸುನಿಲ್ ಜೊತೆ ವಿವಾಹ ಜರಗುತ್ತದೆ. ಆರು ತಿಂಗಳ ನಂತರ ವೈದ್ಯಕೀಯ ಪರೀಕ್ಷೆ ನಂತರ ಅದ್ಹೇಗೋ ಸುನಿಲ್ ಗೆ ಎಚ್‌ಐವಿ ಇರುವುದು ಪತ್ತೆಯಾಗುತ್ತದೆ. ಆವಾಗ ನಾಗರತ್ನ ಅವರಿಗೆ ಈ ಖಾಯಿಲೆ ಇರುವುದು ಗೊತ್ತಾಗುತ್ತದೆ. ವೈದ್ಯರು ಇಬ್ಬರಿಗೂ ಸಾವುಖಚಿತ ಎಂದು ಹೇಳಿಕೆ ನೀಡಿ ಅದೈರ್ಯಗೊಳಿಸಿದರೂ ಸಾವಿಗೆ ಹೆದರದೆ ಎಚ್‌ಐವಿಯನ್ನು ಸವಾಲಾಗಿ ಎದುರಿಸಿ, ಗಟ್ಟಿಯಾಗಿ ಜೀವಿಸಿ, ಸಾಧಿಸಿ ತೋರಿಸಿದ್ದಾರೆ. ಈ ಮಧ್ಯ ಪತಿ ಸುನಿಲ್‌ನನ್ನು ಕಳೆದುಕೊಂಡರೂ ತಾನು ಜನ್ಮ ನೀಡಿದ ಮಗು ಈ ಖಾಯಿಲೆಯಿಂದ ಮುಕ್ತವಾಗಿರುವ ಬಗ್ಗೆ ಖಚಿತಗೊಂಡು ನಾಗರತ್ನ ಅವರಲ್ಲಿ ಬದುಕಿನ ಭರವಸೆ ಇನ್ನಷ್ಟು ಗಟ್ಟಿಗೊಂಡು ಸಾಧನೆಯ ಮುಂದಿನ ಮಾರ್ಗ ಕ್ರಮಿಸುಲು ಸಾಧ್ಯವಾಗುತ್ತದೆ.
ನಂತರ, ಜೀವನದ ಪೂರ್ಣವಿಶ್ವಾಸದೊಂದಿಗೆ ತಮ್ಮನ್ನು ಸಂಪೂರ್ಣವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು, ಎಚ್‌ಐವಿ ಪೀಡಿತ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಮಕ್ಕಳ ಬುದಕಿಗೆ ಆಶ್ರಯ ನೀಡಲು ಪ್ರಾರಂಭಿಸಿದರು. ಇದಕ್ಕಾಗಿ ಆಶ್ರಯ ಪೌಂಡೇಷನ್ ಎಂಬ ಸಂಸ್ಥೆ ಕಟ್ಟಿಕೊಂಡು ಕಳೆದ ೧೮ ವರ್ಷಗಳಿಂದ ಇಂಥ ಮಕ್ಕಳಿಗೆ ದಾನಿಗಳು ನೀಡುವ ಸಹಾಯ ಸಹಕಾರದ ಮೂಲಕ ಮಕ್ಕಳಿಗೆ ನೆರಳಾಗಿ, ಅವರಿಗೆಲ್ಲ ಸೂಕ್ತ ಶಿಕ್ಷಣ ನೀಡುತ್ತ ಬಂದಿದ್ದಾರೆ. ಸ್ವಯಂ ಉದ್ಯೋಗ ನಿರ್ವಹಣೆಗೆ ಕರಕುಶಲ ತರಬೇತಿಯನ್ನೂ ನೀಡಿ ಸ್ವಾಲಂಭಿ ಬದುಕು ಕಟ್ಟಿಕೊಳ್ಳುವ ಮಾರ್ಗ ನಿರ್ಮಿಸಿ ಕೊಡುತ್ತ ಬಂದಿದ್ದಾರೆ.
ಇಂದು ನಾಗರತ್ನ ಅವರು ೨೦ ಜನ ಮಕ್ಕಳಿಗೆ ತಮ್ಮ ಆಶ್ರಯ ಪೌಂಡೇಷನ್ ಮೂಲಕ ಬದುಕಿಗೆ ಆದಾರ ಒದಗಿಸಿದ್ದಾರೆ. ಐಎಚ್‌ವಿ ಪೀಡಿತ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಈ ರೀತಿಯ ಆಶ್ರಯ ನೀಡಿದ ಕರ್ನಾಟಕದ ಏಕೈಕ ಸಂಸ್ಥೆಯಾಗಿದ್ದು, ನಾಗರತ್ನ ಅವರ ಅನುಪಮ ಸೇವೆಗೆ ಸಾರ್ವಜನಕರು, ಅನೇಕ ಸಂಘ ಸಂಸ್ಥೆಗಳು ಗೌರವ ಪ್ರಶಸ್ತಿಗಳನ್ನು ನೀಡಿ, ಗೌರವಿಸಿವೆ.
****