Breaking News

ಡಿಜಿಟಲ್ ವಿಶ್ವಕ್ಕೆ‌ ಭಾರತವೇ ಗುರು: ಓಂ ಬಿರ್ಲಾ

ಬೆಳಗಾವಿ-‌ಭಾರತದಲ್ಲಿ ಡಿಜಿಟಲ್ ಶಿಕ್ಷಣದ ಹೊಸ ಯುಗ ಆರಂಭಗೊಂಡಿದೆ. ಡಿಜಿಟಲ್ ಶಿಕ್ಷಣದಲ್ಲಿ ಹಲವು ಸವಾಲುಗಳಿವೆ. ಆದಾಗ್ಯೂ ‌ಇವುಗಳನ್ನು ಮೀರಿ ಭಾರತವು ಡಿಜಿಟಲ್ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು‌ ಜಗತ್ತಿನಲ್ಲಿ ವಿಶಿಷ್ಟ ಕೀರ್ತಿಗೆ ಪಾತ್ರವಾಗಿದೆ ಎಂದು ಲೋಕಸಭೆ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ (ಮಾ .10) ನಡೆದ ವಿಟಿಯು 21 ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಗತ್ತಿನ ಹಲವು ದೇಶಗಳಲ್ಲಿ ಡಿಜಿಟಲ್, ಐಟಿ, ಮಾಹಿತಿ-ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕರ್ನಾಟಕದ ಯುವ ಸಮುದಾಯದ ಕೊಡುಗೆ ದೊಡ್ಡದಾಗಿದೆ.
ಡಿಜಿಟಲ್ ಕ್ಷೇತ್ರದಲ್ಲಿ ಭಾರತವು ಇಡೀ ಜಗತ್ತಿನಲ್ಲಿ ಅತ್ಯುತ್ತಮ ಸಾಧನೆಗೈದಿದೆ. ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ.
ಅಪಾರ ಬೌದ್ಧಿಕ ‌ಸಂಪತ್ತು ಹೊಂದಿರುವ ನಮ್ಮ ದೇಶವು ವಿಶ್ವಗುರು ಆಗಿ ಹೊರಹೊಮ್ಮುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದನ್ನು‌ ಅರಿತುಕೊಂಡು ನಮಗೆ ಅವಕಾಶವಿರುವ ಕೃಷಿ, ವೈದ್ಯಕೀಯ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಉನ್ನತ ಸಾಧನೆ‌ ಮಾಡಬೇಕು. ಈ ನಿಟ್ಟಿನಲ್ಲಿ ಯುವಸಮುದಾಯ ಮುಂದಡಿ ಇಡಬೇಕು ಎಂದು‌ ಕರೆ‌ ನೀಡಿದರು.

ದೇಶದ ನವನಿರ್ಮಾಣಕ್ಜೆ ಕೊಡುಗೆ ನೀಡಿರುವ ಸರ್. ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಪ್ರತಿಷ್ಠಿತ ವಿಟಿಯು ಘಟಿಕೋತ್ಸವದಲ್ಲಿ ಭಾಗವಹಿಸಿರುವುದಕ್ಕೆ ಸಂತಸವಾಗಿದೆ.
ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳ ಜೀವನದಲ್ಲಿ ಇದು ಅವಿಸ್ಮರಣೀಯ ದಿನವಾಗಿದೆ. ಅತ್ಯುತ್ತಮ ಸಾಧನೆಗೈದು ಸುವರ್ಣ ಪದಕ ಹಾಗೂ ರ್ಯಾಂಕ್ ಗಳಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದು ಅವರಿಗೆ ಕಲಿಸಿದ‌ ಗುರುಗಳಿಗೂ ಅವಿಸ್ಮರಣೀಯ ದಿನ.

ಪದವಿ ಪಡೆಯುವ ಮೂಲಕ ಬದುಕಿನ ಹೊಸ ಅಧ್ಯಾಯ ಆರಂಭವಾದಂತಾಗಿದೆ. ನಾವು ಗಳಿಸಿದ ಜ್ಞಾನದ ಆಧಾರದ ಮೇಲೆ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಿದೆ.
ವಿದ್ಯಾರ್ಥಿಗಳು ಗಳಿಸಿದ‌ ಪದವಿ‌ ಮತ್ತು ಜ್ಞಾನವನ್ನು ರಾಷ್ಟ್ರಕ್ಕೆ ಸಮರ್ಪಿಸಬೇಕಿದೆ. ಶಿಸ್ತು, ಉತ್ಸಾಹ ಹಾಗೂ ನೈತಿಕತೆಯ ಮೂಲಕ ಹೊಸತನ ಮತ್ತು ಸಾಧನೆಗೆ ಮುಂದಾಗಬೇಕು.

ಸರ್. ಎಂ.ವಿಶ್ವೇಶ್ವರಯ್ಯ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಇಸ್ರೋ ಅಧ್ಯಕ್ಷರಾಗಿದ್ದ ಕಸ್ತೂರಿ ರಂಗನ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ‌ಅಂತಹ ಮಹನೀಯರಿಂದ ನಮಗೆ ದೊರೆತಿರುವ ಮಾರ್ಗದರ್ಶನ ವನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು.
ಮಾತೃಭಾಷೆ ಕನ್ನಡದಲ್ಲೂ ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶವನ್ನು ಸರಕಾರ ಕಲ್ಪಿಸಿದೆ.‌ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಲೋಕಸಭೆಯ ಸಭಾಧ್ಯಕ್ಷರಾದ ‌ಓಂ ಬಿರ್ಲಾ ‌ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರು ಮತ್ತು ಸಮಕುಲಾಧಿಪತಿಯೂ ಆಗಿರುವ ಡಾ.ಅಶ್ವತ್ಥನಾರಾಯಣ ಅವರು, “ವಿದ್ಯಾರ್ಥಿಗಳು ಪಡೆದ ಪದವಿಗಳು ಉತ್ತಮ ಬದುಕು ನಿರ್ಮಿಸಿಕೊಡುವ ಸಾಧನೆಗಳಾಗಿವೆ. ನಿಮ್ಮ ಜ್ಞಾನವು ಕೇವಲ ಉದ್ಯೋಗ ಪಡೆಯುವುದಕ್ಕೆ ಸೀಮಿತಗೊಳಿಸದೇ ಉದ್ಯೋಗ ಸೃಷ್ಟಿಸಲು ಬಳಸಿಕೊಳ್ಳಬೇಕು. ಸರಕಾರ ಒದಗಿಸಿರುವ ಅವಕಾಶಗಳನ್ನು ಬಳಸಿಕೊಂಡು ನವೋದ್ಯಮಿಗಳಾಗಿ ಹೊರಹೊಮ್ಮಬೇಕು” ಎಂದು ಕರೆ ನೀಡಿದರು.
ಕೋವಿಡ್ ನಿಂದ ಉಂಟಾದ ಸ್ಥಿತ್ಯಂತರ ಹಾಗೂ ಕೆಲವು ಬದಲಾವಣೆಗಳು ನಮಗೆ ಹಲವಾರು ಬಗೆಯ ಅವಕಾಶಗಳನ್ನು ಒದಗಿಸಿದೆ. ಎಂತಹದ್ದೇ ಸವಾಲು ಎದುರಾದರೂ ಸ್ವಾವಲಂಬಿ ಮತ್ತು ಸುಭದ್ರ ಭಾರತ ನಿರ್ಮಾಣ ನಮ್ಮಿಂದ ಸಾಧ್ಯ ಎಂಬುದನ್ನು ಈಗಾಗಲೇ ಸಾಬೀತಾಗಿದೆ ಎಂದು ಹೇಳಿದರು.

ಹಲವಾರು ಗುರಿ‌ ಮತ್ತು ಕನಸುಗಳೊಂದಿಗೆ ವೃತ್ತಿ ‌ಬದುಕಿಗೆ ಕಾಲಿಡುತ್ತಿರುವ ಎಲ್ಲರ ಕನಸು ಈಡೇರಲಿ ಎಂದು ಶುಭ ಹಾರೈಸಿದರು.
ಕಲಿಕೆಯ ಜೊತೆಗೆ ಸಂಪಾದನೆಗೂ ಅವಕಾಶ ಕೊಡುವಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು. ಮುಂಬರುವ ದಿನಗಳಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಗಣನೀಯ ಬದಲಾವಣೆಗಳನ್ನು ತರಲಾಗುವುದು. ಸರ್ವರಿಗೂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುವುದು.
ಎಸ್.ಜಿ.ಬಾಳೇಕುಂದ್ರಿ ಅವರ ಹೆಸರಿನಲ್ಲಿ ವಿಟಿಯು ನಲ್ಲಿ ಅಧ್ಯಯನ ‌ಕೇಂದ್ರವನ್ನು ಆರಂಭಿಸಲಾಗುವುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.

ದೇಶದ ಪ್ರಗತಿಗೆ ಕೈಜೋಡಿಸಲು ರಾಜ್ಯಪಾಲರ ಕರೆ:

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು, ನವ ಪದವೀಧರರು ದೇಶದ ಪ್ರಗತಿಯ ಭಾಗವಾಗಬೇಕು. ಉದ್ಯೋಗ ‌ಹುಡುಕುವರಾಗದೇ ಉದ್ಯೋಗ ಸೃಷ್ಟಿಸುವವರಾಗಬೇಕು. ಸ್ವಯಂ ಉದ್ಯೋಗ ಆರಂಭಿಸಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಜ್ಞಾನ-ತಂತ್ರಜ್ಞಾನ, ತಾಂತ್ರಿಕ ಕ್ಷೇತ್ರದ ಸಾಧನೆಯಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೆ.
ಯುವ ಸಮುದಾಯವನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವ ನಮ್ಮ ದೇಶದ ಕಡೆ ಇಡೀ ವಿಶ್ವ ಗಮನಿಸುತ್ತಿದೆ. 21 ನೇ ಶತಮಾನವು ಭಾರತದ ಸಾಧನೆಗೆ ಸಾಕ್ಷಿಯಾಗಲಿದೆ.

ದೇಶದ ಸರ್ವಾಂಗೀಣ ಅಭಿವೃದ್ಧಿ ಸರಕಾರದ‌ ಆಶಯವಾಗಿದೆ ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಪದವಿ ಪಡೆಯುವ ದಿನ‌ ಜೀವನದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಇಂದು ಪದವಿ ಪಡೆದ ಎಲ್ಲರ ಬದುಕು ಉಜ್ವಲವಾಗಲಿ ಎಂದು ರಾಜ್ಯಪಾಲರು ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ವಿಶ್ವವಿದ್ಯಾಲಯ ಸಾಧನೆ ಹಾಗೂ ಭವಿಷ್ಯದ ಗುರಿಯನ್ನು ವಿವರಿಸಿದ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅವರು, ಹೊಸ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಕ್ರಮಗಳ ಮೂಲಕ ವಿವಿಯು ಎನ್.ಐ.ಆರ್.ಎಫ್. ಶ್ರೇಣಿಯಲ್ಲಿ ರಾಷ್ಟ್ರಮಟ್ಟದ ಸ್ಥಾನವನ್ನು ಪಡೆದಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದಡಿಯಲ್ಲಿ 217 ಸಂಯೋಜಿತ ಕಾಲೇಜುಗಳಿದ್ದು, ಅಂದಾಜು 3 ಲಕ್ಷ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಲಾಗುತ್ತಿದೆ.

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹಲವಾರು ಬದಲಾವಣೆಗಳಾಗಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದೆ. ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ದಾಂಡೇಲಿ ಮತ್ತು ಕೊಪ್ಪಳದ ತಳಕಲ್ ನಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಅಕಾಡಮಿ ಸ್ಥಾಪಿಸಲಾಗಿದೆ.
ಹೊಸ ಯೋಜನೆಗಳ ಅನುಷ್ಠಾನದ ಮೂಲಕ ವಿವಿಯನ್ನು ನಾವಿನ್ಯತೆ ಮತ್ತು ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯವಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.

ಮೂವರಿಗೆ ಡಾಕ್ಟರ್ ಆಪ್ ಸೈನ್ಸ್ ಗೌರವ :

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮೂವರು ಮಹನೀಯರಿಗೆ ವಿಟಿಯು ವತಿಯಿಂದ “ಡಾಕ್ಟರ್ ಆಪ್ ಸೈನ್ಸ್” ಗೌರವ ಪದವಿಯನ್ನು ಪ್ರಕಟಿಸಲಾಯಿತು.
ಈ ಸಂದರ್ಭದಲ್ಲಿ ಪದ್ಮ ಭೂಷಣ ಪುರಸ್ಕೃತರಾದ ಬೆಂಗಳೂರಿನ ಅಕ್ಸಿಲೊರ್ ವೆಂಚರ್ಸನ ಅಧ್ಯಕ್ಷರು ಹಾಗೂ ಇನ್ಫೋಸಿಸ್ ನ ಸಹ-ಸಂಸ್ಥಾಪಕರಾದ ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್ ಅವರು, ವಿಟಿಯುದಿಂದ ಗೌರವ ಡಾಕ್ಟರೇಟ್ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಇನ್ಫೋಸಿಸ್ ನ ನನ್ನ ಸಹೋದ್ಯೋಗಿಗಳ ಸಹಕಾರದಿಂದ ನಾನು ಇಂತಹ ಗೌರವಕ್ಕೆ ಪಾತ್ರನಾಗಿದ್ದಾನೆ ಎಂದು ಹೇಳಿದರು.

ಗೌರವ ಡಾಕ್ಟರೇಟ್ ಪುರಸ್ಕೃತರಾದ ಪದ್ಮ ಭೂಷಣ ಪುರಸ್ಕೃತರಾದ, ಹೈದರಾಬಾದಿನ ಭಾರತ ಬಯೋಟೆಕ್ ಅಂ. ಲಿ. ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೃಷ್ಣ ಎಲ್ಲಾ ಹಾಗೂ ಪದ್ಮಶ್ರೀ ಪುರಸ್ಕೃತರಾದ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೋ.ರೋಹಿಣಿ ಗೊಡಬೋಲೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಘೋಷಿಸಲಾಯಿತು.

ಸಂಸದೆ ಮಂಗಳ ಅಂಗಡಿ, ವಿಟಿಯು ಕುಲಸಚಿವ ಪ್ರೊ.ಆನಂದ ದೇಶಪಾಂಡೆ, ಕುಲಸಚಿವ(ಮೌಲ್ಯಮಾಪನ) ಪ್ರೊ.ರಂಗಸ್ವಾಮಿ ಬಿ.ಇ., ಸಿಂಡಿಕೇಟ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
**********

16 ಪದಕ ಗಳಿಸಿದ ಬುಷ್ರಾ ಮತೀನ್ ಚಿನ್ನದ ಹುಡುಗಿ

* ರಾಯಚೂರು ಎಸ್ ಎಲ್ ಎನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ಒಟ್ಟು 16 ಚಿನ್ನದ ಪದಕ ಪಡೆಯುವ ಮೂಲಕ ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿದ್ದಾಳೆ. ಬೆಂಗಳೂರಿನ ಬಿ.ಎನ್.ಎಮ್. ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಎಲೆಟ್ರಿಕಲ್‌ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ವಾತಿ ದಯಾನಂದ ಏಳು ಚಿನ್ನದ ಪದಕಗಳನ್ನು ಪಡೆದುಕೊಂಡರು.

ಕೆ.ಎಲ್.ಇ ಶೇಷಗಿರಿ ಕಾಲೇಜಿನ ವಿವೇಕ ಭದ್ರಕಾಳಿ ಏಳು ಚಿನ್ನದ ಪದಕ, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ನ ವಿಧ್ಯಾರ್ಥಿನಿ ಚಂದನಾ ಎಂ. ಏಳು ಚಿನ್ನದ ಪದಕ, ಬೆಂಗಳೂರಿನ ಸಿ.ಎಂ.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೊಂದಲ ಹಳ್ಳಿಯ ವಿಧ್ಯಾರ್ಥಿನಿ ರಮ್ಯಾ ಟಿ. ಆರು ಚಿನ್ನದ ಪದಕ, ಬೆಂಗಳೂರಿನ ಆರ್ ಎನ್ ಎಸ್ ನಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಧ್ಯಾರ್ಥಿನಿ ಪ್ರಜ್ಞಾ ಎನ್. ನಾಲ್ಕು ಚಿನ್ನದ ಪದಕ, ಶಿವಮೊಗ್ಗದ ಜೆ.ಎನ್.ಎನ್. ಸಿ.ಇ ವಿಧ್ಯಾರ್ಥಿನಿ ಪಲ್ಲವಿ ಪಿ. ನಾಲ್ಕು ಚಿನ್ನದ ಪದಕ, ಬೆಂಗಳೂರಿನ ಆರ್ ಎನ್ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಧ್ಯಾರ್ಥಿನಿ ತೇಜಸ್ವಿನಿ ಆರ್ ನಾಲ್ಕು ಚಿನ್ನದ ಪದಕ ಹಾಗೂ ಅಶ್ವಿತಾ ಎನ್. ಮೂರು ಚಿನ್ನದ ಪದಕ ಮತ್ತು ದಾವಣಗೆರೆಯ ಯು.ಬಿ.ಡಿ.ಟಿ ಕಾಲೇಜಿನ ವಿದ್ಯಾರ್ಥಿನಿ ಸವಿತಾ ಎಚ್. ಟಿ.ಅವರಿಗೆ ಮೂರು ಚಿನ್ನದ ಪದಕ ಪ್ರದಾನ ಮಾಡಲಾಯಿತು.

57,498 ಜನರಿಗೆ ಎಂಜಿನಿಯರಿಂಗ್ ಪದವಿ:

ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515+ ಪಿಎಚ್ ಡಿ, 04 ಎಂಎಸ್ಸಿ (ಎಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಪದವಿ ಪ್ರಧಾನ ಮಾಡಲಾಯಿತು.

ವಿಶ್ವವಿದ್ಯಾಲಯ 21 ನೇ ಘಟಿಕೋತ್ಸವದಲ್ಲಿ 57,498 ಬಿಇ/ಬಿಟೆಕ್ ಪದವಿ, 902 ಬಿ.ಆರ್ಕ್ ಪದವಿ, 12 ಬಿ.ಪ್ಲಾನ್; 4362 ಎಂಬಿಎ ಪದವಿ, 1387 ಎಂಸಿಎ, 1292 ಎಂಟೆಕ್; 73 ಎಂ.ಆರ್ಕ್; 33 ಪಿಜಿ ಡಿಪ್ಲೋಮಾ; 575ಕ್ಕಿಂತ ಹೆಚ್ಚು ಪಿ.ಎಚ್.ಡಿ; 3 ಇಂಟಿಗ್ರೇಟೆಡ್ ಡ್ಯೂಯಲ್ ಡಿಗ್ರಿ ಹಾಗೂ 4 ಎಂ.ಎಸ್ಸಿ(ಎಂಜಿನಿಯರಿಂಗ್) ಬೈ‌ ರಿಸರ್ವ್ ಪದವಿಗಳನ್ನು ಪ್ರದಾನ ಮಾಡಲಾಯಿತು.
*****

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *