ಬೆಳಗಾವಿ- ಪರಿಸರ ಮಾಲಿನ್ಯ ಕಂಟ್ರೋಲ್ ಮಾಡುವ ಅಧಿಕಾರಿಗಳು 30 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಫಿರ್ಯಾದಿ ಶ್ರೀರಾಜು ಲಕ್ಷ್ಮಣ ಪಾಶ್ಚಾಪೂರೆ ಸಾಃಉತ್ತಮ ಟಾಕೀಜ್ ಹಿಂದೆ ಹಳೆ ಚಂದೂರ ರಸ್ತೆ ಇಚಲಕರಂಜಿ ಜಿಃಕೊಲ್ಹಾಪೂರ ಇವರು ಎಸಿಬಿ ಪೊಲೀಸ್ ಠಾಣೆ ಬೆಳಗಾವಿಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಫಿರ್ಯಾದಿಯು ಈಗ ಒಂದು ವರ್ಷದಿಂದ ಚಿಕ್ಕೋಡಿ ತಾಲೂಕಿನ ಬೋರಗಾಂವದಲ್ಲಿ ಆರ್‍ಪಿ ಪ್ರೊಡಕ್ಷನ್ ಎಂಬ ಹೆಸರಿನಿಂದ ಪಾನ್ ಮಸಾಲಾ, ಸೆಂಟೆಂಡ್ ಸುಪಾರಿ ಮತ್ತು ತಂಬಾಕು ಪ್ಯಾಕ್ಟರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕನ್ಸೆಂಟ್ ಫಾರ್ ಆಪರೇಷನ್ (ಸಿಎಫ್‍ಓ) ನೇದ್ದರ ಅನುಮತಿಯ ಅವಶ್ಯಕತೆ ಇದ್ದು, ಈ ಕುರಿತು ಫಿರ್ಯಾದಿದಾರರು ಆನ್‍ಲೈನ್‍ದಲ್ಲಿ ಅರ್ಜಿ ಸಲ್ಲಿಸಿ ಈ ಅನುಮತಿಗಾಗಿ ಚಿಕ್ಕೋಡಿಯಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿರುವ ಅಧಿಕಾರಿಗಳಿಗೆ ಭೇಟಿಯಾದಾಗ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ರೂ.30,000/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಶ್ರೀ ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಶ್ರೀ ಮಹಾಂತೇಶ ಎಸ್.ಜಿದ್ದಿ, ಪೊಲೀಸ್ ಉಪಾಧೀಕ್ಷಕರವರು ದಾಖಲಿಸಿಕೊಂಡಿರುತ್ತಾರೆ. ಶ್ರೀ ನಿರಂಜನ್ ಎಂ. ಪಾಟೀಲ್, ಪೊಲೀಸ್ ನಿರೀಕ್ಷಕರು ಹಾಗೂ ಶ್ರೀ ಅಲಿ ಶೇಖ್, ಪೊಲೀಸ್ ನಿರೀಕ್ಷಕರು, ಧಾರವಾಡ ಹಾಗೂ ಬೆಳಗಾವಿ ಭ್ರಷ್ಟಾಚಾರ ದಳ ಪೊಲೀಸ್ ಠಾಣೆಗಳ ಸಿಬ್ಬಂದಿಯವರು ಕಾರ್ಯಚರಣೆಯಲ್ಲಿ ತೊಡಗಿದ್ದು, ದಿನಾಂಕ:16.05.2022 ರಂದು ಆಪಾದಿತ- 1) ಶ್ರೀ.ವಿಜಯಕುಮಾರ ಶಾಂತಪ್ಪ ಶೆಂಡುರಿ ಕ್ಷೇತ್ರ ಸಹಾಯಕ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಇವರು ಆಪಾದಿತ-2) ಶ್ರೀ.ಪ್ರದೀಪ ಸೂರ್ಯಕಾಂತ ಮಮದಾಪೂರ ಉಪ-ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಇವರ ಸೂಚನೆಯ ಮೇರೆಗೆ ರೂ.30,000/-ಗಳ ಲಂಚದ ಹಣವನ್ನು ಫಿರ್ಯಾದಿಯಿಂದ ಸ್ವೀಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು. ಆಪಾದಿತರನ್ನು ದಸ್ತಗೀರ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ.