ದೆಹಲಿ ಮಾದರಿಯ ಪೊಲೀಸ್ ಮ್ಯೂಜಿಯಂ ನಿರ್ಮಾಣ : ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ
ಬೆಳಗಾವಿ,- ಪೊಲೀಸ್ ಇಲಾಖೆಯು ಉತ್ತಮ ರೀತಿಯ ಕಾರ್ಯ ಮಾಡುತ್ತಿದ್ದು, ಇಲಾಖೆಯ ಅಧಿಕಾರಿ-ಸಿಬ್ಬಂದಿಯ ಸಾಧನೆಯ ಪ್ರತಿಬಿಂಬವನ್ನು ಬೆಳಗಾವಿಯ ಮ್ಯೂಜಿಯಂನಲ್ಲಿ ಕಾಣಬಹುದು. ಇನ್ನು ಉತ್ತಮ ರೀತಿಯಲ್ಲಿ ಮ್ಯೂಜಿಯಂ ಅಭಿವೃದ್ದಿಪಡಿಸಿ ದೆಹಲಿ ಮಾದರಿಯ ಪೊಲೀಸ್ ಮ್ಯೂಜಿಯಂನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವ ಆಗರ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದರು
ನಗರದ ಪೊಲೀಸ್ ಆಯುಕ್ತರ ಕಚೇರಿಯ ಸಮೀಪದಲ್ಲಿರುವ ಪೊಲೀಸ್ ಮ್ಯೂಸಿಯಂ ಗೆ ಬುಧವಾರ (ಜುಲೈ.6) ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಒಳ್ಳೆಯ ಕಾರ್ಯ ಮಾಡಿದ, ಜನರನ್ನು ಕಾಪಾಡುವಲ್ಲಿ ಜೀವ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಗಳ ಭಾವಚಿತ್ರಗಳನ್ನು ಮ್ಯೂಜಿಯಂನಲ್ಲಿ ಇರಿಸಬೇಕು. ಅವರ ತ್ಯಾಗ, ಧೈರ್ಯವು ಇನ್ನೊಬ್ಬರಿಗೆ ಮಾದರಿಯಾಗುತ್ತದೆ ಎಂದರು.
ಪ್ರಸ್ತುತ ನಮ್ಮ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡಿ ಪೊಲೀಸ್ ಇಲಾಖೆಯನ್ನು ಅಭಿವೃದ್ದಿಪಡಿಸುತ್ತಿದೆ. ಗುರುವಾರ(ಜುಲೈ 7) ಜಿಲ್ಲೆಯಲ್ಲಿ ಎರಡು ಹೊಸ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಬಾಡಿಗೆ, ದುರಸ್ಥಿ ಹೊಂದಿರುವ 100 ಕ್ಕು ಹೆಚ್ಚು ಪೊಲೀಸ್ ಠಾಣೆಗಳನ್ನು ಹೊಸದಾಗಿ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದರು.
ಚಂದ್ರಶೇಖರ ಗುರೂಜಿ ಅವರ ಹತ್ಯಗೈದ ಆರೋಪಿಗಳನ್ನು ಬಂಧಿಸುವಲ್ಲಿ ರಾಮದುರ್ಗ ಪೊಲೀಸರಿಗೆ ಸಾಹಸ ಗಣನೀಯ ಅವರಿಗೆ ಅಭಿನಂದನೆ ತಿಳಿಸಿ ಗುರುವಾರ ಅಭಿನಂದನ ಪತ್ರವನ್ನು ನೀಡಲಾಗುವುದು. ಸೈಬರ್ ಕ್ರೈ ವಿಭಾಗವನ್ನು ಬಲಪಡಿಸಲಾಗುವುದು ಹಾಗೂ ಸದ್ಯದಲ್ಲೆ 5000 ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಿದರು.
2 ಸಾವಿರ ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣ :
ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ರಾಜ್ಯಾದ್ಯಂತ ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಗಳ ನಿರ್ಮಾಣ ಕಾರ್ಯ ಮಾಡುವ ಮೂಲಕ ಸುರಕ್ಷಿತ ಮನೆಗಳಲ್ಲಿ ಪೊಲೀಸ್ ಕುಟುಂಬಗಳ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದರು.
ಪೊಲೀಸರಿಗಾಗಿ ಎರಡು ಬಿ.ಎಚ್.ಕೆ ಮನೆಗಳ ನಿರ್ಮಾಣ ಕಾರ್ಯ ಮಾಡಲಾಗುವುದು, ಪ್ರಸ್ತುತ 164 ಮನೆಗಳ ನಿರ್ಮಾಣ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಉತ್ತರ ವಲಯದ ಐ.ಜಿ.ಪಿ ಸತೀಶಕುಮಾರ, ಡಿ.ಸಿ.ಪಿ ರವೀಂದ್ರ ಗಡಾದಿ, ನಗರದ ಕ್ರೈಂ ವಿಭಾಗದ ಡಿ.ಸಿ.ಪಿ. ಪಿ.ವಿ. ಸ್ನೇಹಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾಂವಿ ಹಾಗೂ ನಗರದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
****