ಬೆಳಗಾವಿ, -ಭಾರತ ಬಿಟ್ಟು ತೊಲಗಿ(ಕ್ವಿಟ್ ಇಂಡಿಯಾ)” ಚಳವಳಿಯಲ್ಲಿ ಭಾಗವಹಿಸಿದ್ದ ಇಬ್ಬರು ಸ್ವಾತಂತ್ರ್ಯ ಯೋಧರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಂಗಳವಾರ ಸನ್ಮಾನಿಸಿ, ಗೌರವಿಸಿದರು.
ಕ್ವಿಟ್ ಇಂಡಿಯಾ ಚಳವಳಿಗೆ 80 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಅವರನ್ನು ಜಿಲ್ಲಾಡಳಿತದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿದರು.
ಹಿರಿಯ ಸ್ವಾತಂತ್ರ್ಯ ಯೋಧರಾದ ಇಲ್ಲಿನ ಅನಗೋಳದ ರಾಣಿ ಚೆನ್ನಮ್ಮ ನಗರದ ರಾಜೇಂದ್ರ ಧರ್ಮಪ್ಪಾ ಕಲಘಟಗಿ ಹಾಗೂ ಕುವೆಂಪು ನಗರದ ವಿಠ್ಠಲ ಯಾಳಗಿ ಅವರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಗೌರವಿಸಿದರು.
ಈ ಸಂದರ್ಭದಲ್ಲಿ ಹೋರಾಟದ ದಿನಗಳನ್ನು ಮೆಲುಕುಹಾಕಿದ ರಾಜೇಂದ್ರ ಕಲಘಟಗಿ ಅವರು, ಕ್ವಿಟ್ ಇಂಡಿಯಾ ಚಳವಳಿಯ ಮುಂಚೂಣಿಯಲ್ಲಿದ್ದ ಮಹಾತ್ಮಾ ಗಾಂಧೀಜಿಯವರು ಇಡೀ ದೇಶಕ್ಕೆ ಪ್ರೇರಣೆಯಾಗಿದ್ದರು ಎಂದು ಸ್ಮರಿಸಿದರು.
ಇಬ್ಬರೂ ಮಹನೀಯರ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಭೇಟಿ ಮಾಡಿ ಅವರನ್ನು ಸನ್ಮಾನಿಸುವ ಅವಕಾಶ ದೊರಕಿರುವುದು ತಮ್ಮ ಸೌಭಾಗ್ಯವೆಂದರು.
ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ ಆರ್.ಕೆ.ಕುಲಕರ್ಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
****