ಬೈಕ್ ನಲ್ಲಿ ಸಂಚರಿಸಿ ಗಣೇಶ ವಿಸರ್ಜನೆ ಮಾರ್ಗ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ,- ಗಣೇಶೋತ್ಸವ ಹಿನ್ನೆಲೆಯಲ್ಲಿ ಬೈಕ್ ನಲ್ಲಿ ನಗರಸಂಚಾರ ಕೈಗೊಂಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮೆರವಣಿಗೆ ಮಾರ್ಗ ಹಾಗೂ ಗಣೇಶ ಮೂರ್ತಿ ವಿಸರ್ಜನಾ ಹೊಂಡವನ್ನು ಪರಿಶೀಲಿಸಿದರು.
ಗಣೇಶೋತ್ಸವ ಸಂದರ್ಭದಲ್ಲಿ ಮೆರವಣಿ ನಡೆಯಲಿರುವ ನಗರದ ಪ್ರಮುಖ ಮಾರ್ಗಗಳನ್ನು ಸೋಮವಾರ(ಆ.29) ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾನುಕೂಲ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೆರವಣಿಗೆ ಮಾರ್ಗದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ವಬೇಕು; ಕೆಳಹಂತದಲ್ಲಿರುವ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಗಣೇಶ ವಿಸರ್ಜನೆ ಮಾಡುವ ಕಪಿಲೇಶ್ವರ ಹೊಂಡವನ್ನು ಮತ್ತು ಸುತ್ತಮುತ್ತಲಿನ ಜಾಗೆಯನ್ನು ಸ್ವಚ್ಛಗೊಳಿಸಬೇಕು. ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕ ಬೇಲಿ ಅಳವಡಿಸುವುದರ ಜತೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ಇದಲ್ಲದೇ ಸಂಚಾರಿ ಹೊಂಡಗಳನ್ನು ವ್ಯವಸ್ಥೆ ಮಾಡಿರುವ ಕುರಿತು ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿಯನ್ನು ನೀಡಬೇಕು.
ಸಾರ್ವಜನಿಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುವುದರಿಂದ ಸ್ವಚ್ಛತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು, ಗಣೇಶೋತ್ಸವ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಆರಂಭಿಸಲಾಗಿದ್ದು, ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಪಿಲೇಶ್ವರ ಹೊಂಡ, ಖಡೇಬಜಾರ್, ರಾಮಕಿಂಡ ಗಲ್ಲಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಬೈಕ್ ನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
****