ಬೆಳಗಾವಿ-ನಿನ್ನೆ ಶುಕ್ರವಾರ ಸಂಜೆ ಐದು ಗಂಟೆಗೆ ಆರಂಭವಾಗಿದ್ದ ಗಣೇಶ್ ವಿಸರ್ಜನಾ ಮೆರವಣಿಗೆ ಇಂದು ಶನಿವಾರ ಸಂಜೆ ಐದು ಗಂಟೆಗೆ ಸಮಾರೋಪಗೊಂಡಿದ್ದು,ನಿರಂತರವಾಗಿ 24 ಗಂಟೆಗಳ ಕಾಲ ನಡೆದ ಈ ಅದ್ಧೂರಿ ಮೆರವಣಿಗೆ ಗಣೇಶ ಉತ್ಸವದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ.
ಇಂದು ಸಂಜೆ 4-30 ಗಂಟೆಗೆ ಖಡಕ್ ಗಲ್ಲಿಯ ಸಾರ್ವಜನಿಕ ಗಣಪತಿಯನ್ನು ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆ ಮಾಡುವ ಮೂಲಕ ಭಕ್ತರು,ವಿಘ್ನೇಶ್ವರನಿಗೆ ಭಕ್ತಿಪೂರ್ವಕ ವಿದಾಯ ಹೇಳಿದ್ರು.
ಒಂದು ಕಡೆ ಭಕ್ತರು ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುತ್ತಿದ್ದಂತೆಯೇ ನಿನ್ನೆ ಸಂಜೆಯಿಂದ ನಿರಂತರವಾಗಿ, 24 ಗಂಟೆಗಳ ಕಾಲ,ಮೆರವಣಿಗೆಯ ಬಂದೋಬಸ್ತಿ ಮಾಡಿ,ಯಾವುದೇ ರೀತಿಯ ಅಹಿತಕರ ಘಟನೆಗಳು,ಗದ್ದಲ ಗಲಾಟೆಗಳು ನಡೆಯದಂತೆ ಶ್ರಮಿಸಿದ್ದ ಖಾಕಿ ಪಡೆ,ಪಾಲಿಕೆ ಅಧಿಕಾರಿಗಳು ಹೆಜ್ಜೆ ಹಾಕಿ,ಕುಣಿದು ಸಂಬ್ರಮಿಸಿದರು.
ನಗರ ಪೋಲೀಸ್ ಆಯುಕ್ತ ಡಾ. ಬೋರಲಿಂಗಯ್ಯ,ಡಿಸಿಪಿ ರವೀಂದ್ರ ಗಡಾದೆ,ಎಸಿಪಿ ನಾರಾಯಣ ಭರಮಣಿ ಸೇರಿದಂತೆ ಎಲ್ಲ ಪೋಲೀಸ್ ಅಧಿಕಾರಿಗಳು ಸಾವಿರಾರು ಜನ ಪೋಲೀಸ್ ಸಿಬ್ಬಂಧಿಗಳು,ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಹಾಗೂ ಪಾಲಿಕೆ ಅಧಿಕಾರಿಗಳು ನಿಜವಾಗಿಯೂ ಈ ಬಾರಿಯ ಗಣೇಶ ಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ದೊರಕಿಸಿಕೊಡುವದರ ಜೊತೆಗೆ ಇಡೀ ರಾತ್ರಿ ಓಡಾಡಿ,ತಮ್ಮ ಕರ್ತವ್ಯ ವನ್ನು ಅತ್ಯಂತ ಭಕ್ತಿಪೂರ್ವಕವಾಗಿ ನಿಭಾಯಿಸಿದರು.
ನಿನ್ನೆ ಶುಕ್ರವಾರ ರಾತ್ರಿ ಗಣೇಶ್ ದರ್ಶನಕ್ಕಾಗಿ ಲಕ್ಷಾಂತರ ಜನ ಜಮಾಯಿಸಿದ್ದರು.ಡಾಲ್ಬಿಯ ಸದ್ದಿಗೆ ಯುವ ಪಡೆ ಹುಚ್ಚೆದ್ದು ಕುಣಿಯಿತು,ಸುಮಾರು ಒಂದು ಗಂಟೆಕಾಲ ಮಳೆ ಸುರಿದರೂ ಮಳೆಯನ್ನು ಲೆಕ್ಕಿಸದೇ ಭಕ್ತರು ಭಕ್ತಿಯ ಭಂಡಾರದಲ್ಲಿ ಮುಳುಗಿ ಹೆಜ್ಜೆ ಹಾಕುವದನ್ನು ಬಿಡಲಿಲ್ಲ.
ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗದಲ್ಲಿ,ಧರ್ಮವೀರ ಸಂಬಾಜಿ ವೃತ್ತದಲ್ಲಿ ವೇದಿಕೆ ನಿರ್ಮಿಸಿ,ಮಾರ್ಗದಲ್ಲಿ ಸಾಗುವ ಪ್ರತಿಯೊಂದು ಗಣೇಶ್ ಮೂರ್ತಿಗೂ ಪುಷ್ಪವೃಷ್ಠಿಯ ಭಕ್ತಿಯನ್ನು ಸಮರ್ಪಿಸಿದರು. ಕಾಂಗ್ರೆಸ್ ಮುಖಂಡ ಪ್ರದೀಪ ಎಂಜೆ.ಮಲಗೌಡ ಪಾಟೀಲ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಸೇರಿದಂತೆ ಇತರ ವ್ಯವಸ್ಥೆ ಮಾಡಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ತ್ ಸದಸ್ಯಚನ್ನರಾಜ್ ಹಟ್ಟಿಹೊಳಿ,ಮಾಜಿ ಸಚಿವ ಎಬಿ ಪಾಟೀಲ ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ನಾಯಕರು,ಕಾಂಗ್ರೆಸ್ ವೇದಿಕೆಯ ಮೇಲೆ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಗಣೇಶ ಮೂರ್ತಿಗಳಿಗೆ ಪುಷ್ಪ ವೃಷ್ಠಿಯ ಮೂಲಕ ಭಕ್ತಿಪೂರ್ವಕ ಗೌರವ ಸಲ್ಲಿಸಿ ಎಲ್ಲರ ಗಮನ ಸೆಳೆದರು.
ಬಿಜೆಪಿ ವತಿಯಿಂದಲೂ ಮೂರು ವೇದಿಕೆಗಳನ್ನು ನಿರ್ಮಿಸಲಾಗಿತ್ತು ಶಾಸಕ ಅನೀಲ ಬೆನಕೆ ,ಮತ್ತು ಅಭಯ ಪಾಟೀಲ ಬೆಳಗಿನವರೆಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಿನ್ನೆ ಸಂಜೆ,ಐದು ಗಂಟೆಗೆ ಶುರುವಾಗಿದ್ದ ಮೆರವಣಿಗೆ ಇಂದು ಸಂಜೆ ಮಹಾನಗರ ಪಾಲಿಕೆಯ ಗಣೇಶ್ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಈ ಬಾರಿಯ ಗಣೇಶ ಹಬ್ಬಕ್ಕೆ ಭಕ್ತಿಪೂರ್ವಕ ವಿದಾಯ ಹೇಳಲಾಯಿತು.