Breaking News

ಬೆಳಗಾವ್ಯಾಗ ಮಳೆ ಬಿದ್ದು ಎಷ್ಟ ಲುಕ್ಸಾನ್ ಆಗೈತಿ ದಿಲ್ಲ್ಯಾವ್ರ ಬಂದ ಬರ್ಕೊಂಡ್ ಹೋಗ್ಯಾರ…!!

ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ; ಹಾನಿ ಪರಿಶೀಲನೆ
———————————————————-
ಕೇಂದ್ರ ತಂಡಕ್ಕೆ ಹಾನಿ ಮನವರಿಕೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, –ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಕೇಂದ್ರ ನೆರೆ ಅಧ್ಯಯನ ತಂಡವು ಶನಿವಾರ(ಸೆ.10) ಪರಿಶೀಲನೆ ನಡೆಸಿತು.

ಕೇಂದ್ರ ಜಲ ಆಯೋಗದ ಜಲಶಕ್ತಿ ಸಚಿವಾಲಯದ ನಿರ್ದೇಶಕರಾದ ಅಶೋಕ ಕುಮಾರ್ ವಿ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ಧಾರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ವಿ.ವಿ.ಶಾಸ್ತ್ರಿ ಹಾಗೂ ಕರ್ನಾಟಕ ‌ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರರಾದ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಅವರು ಜತೆಗಿದ್ದರು.

ಬೆಳಗಾವಿಯಿಂದ ಪ್ರವಾಸ ಆರಂಭಿಸಿದ ಕೇಂದ್ರ ತಂಡವು ಮೊದಲಿಗೆ ಯಳ್ಳೂರ ರಸ್ತೆಯಲ್ಲಿ ಭತ್ತದ ಬೆಳೆಹಾನಿಯನ್ನು ವೀಕ್ಷಿಸಿತು.
ಇದಾದ ಬಳಿಕ ಖಾನಾಪುರ ತಾಲ್ಲೂಕಿನ ಶಿಂಗಿನಕೊಪ್ಪ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ‌ ಹಾನಿಯನ್ನು ಪರಿಶೀಲಿಸಿ, ಮಾಹಿತಿಯನ್ನು ಪಡೆದುಕೊಂಡರು.

ಗರ್ಲಗುಂಜಿ ಶಾಲಾ ಭೇಟಿ:

ಗರ್ಲಗುಂಜಿಯ ಆದರ್ಶ ಬಾಲಕರ ಮರಾಠಿ ವಿದ್ಯಾಲಯದ 11 ರಲ್ಲಿ ಏಳು ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿವೆ.
1 ರಿಂದ 7 ನೇ ತರಗತಿಯ 150 ಮಕ್ಕಳು ಕಲಿಯುತ್ತಿದ್ದು, ಕೊಠಡಿಗಳು ಹಾನಿಗೊಳಗಾಗಿರುವುದರಿಂದ ಸಮುದಾಯ ಭವನ ಹಾಗೂ ಇರುವ ಕೊಠಡಿಗಳಲ್ಲಿ ತರಗತಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
65 ವರ್ಷದ ಶಾಲಾ ಕಟ್ಟಡವನ್ನು ಪರಿಶೀಲಿಸಿದರು. ಜುಲೈ ಮಾಹೆಯಲ್ಲಿ ಕಟ್ಟಡ ಕುಸಿದಿದೆ ಎಂದು ತಿಳಿಸಿದರು.
ಹಂತ ಹಂತವಾಗಿ ಇಡೀ ಶಾಲಾ ಕಟ್ಟಡ ಕುಸಿದಿರುತ್ತದೆ ಎಂದು ಹೇಳಿದರು.
ಶಾಲಾ ಮಕ್ಕಳು ತಮ್ಮ ಕೈಯಾರೆ ಮಾಡಿದ ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿದರು.
ಶಾಲಾ ಕಟ್ಟಡ ಹಾನಿಯಾಗಿರುವ ಬಗೆಯ ಕುರಿತು ಶಾಲಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯೋಪಾಧ್ಯಾಯರನ್ನು ಕೇಂದ್ರ ತಂಡದ ಸದಸ್ಯರು ವಿಚಾರಿಸಿದರು.

ಪ್ರತಿ ಕೊಠಡಿಗೆ ಭೇಟಿ ನೀಡಿದ ಪರಿಶೀಲಿಸಿದ ಅವರು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಪಕ್ಕದಲ್ಲಿ ಇರುವ ಹೊಸ ಕೊಠಡಿಗಳ ಮೇಲೆ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಲು ಉದ್ಧೇಶಿಸಲಾಗಿದೆ. ನರೇಗಾ ಯೋಜನೆಯಡಿ ಜಿಪಂ ವತಿಯಿಂದ ಪಾದಚಾರಿ ಬ್ಲಾಕ್ಸ್ ಅಳವಡಿಸಲಾಗಿರುತ್ತದೆ ಎಂದು ಜಿಪಂ ಸಿಇಓ ದರ್ಶನ ತಿಳಿಸಿದರು.

ಶಾಲೆಯಲ್ಲಿ ಗೋದಿ ಉಪ್ಪಿಟ್ಟು ಸವಿದ ತಂಡ:

ಗುರ್ಲಗಂಜಿ ಶಾಲೆಯಲ್ಲಿ ಗೋಧಿ ಉಪ್ಪಿಟ್ಟು ಸವಿದ ಕೇಂದ್ರ ತಂಡದ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರ ಮನವಿಯ ಮೇರೆಗೆ ಗೋಧಿ ಉಪ್ಪಿಟ್ಟು ಸವಿದರು.
ಶಾಲೆಯಲ್ಲಿ ತಯಾರಿಸುವ ಆಹಾರದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತೋಪಿನಕಟ್ಟೆಯಲ್ಲಿ ಮನೆಹಾನಿ ಪರಿಶೀಲನೆ:

ತೋಪಿನಕಟ್ಟಿಯಲ್ಲಿ ಇತ್ತೀಚಿನ ಮಳೆಯಿಂದ ಹಾನಿಗೊಳಗಾದ ನಾಲ್ಕು ಮನೆಗಳನ್ನು ತಂಡವು ವೀಕ್ಷಿಸಿತು.
ಮೊದಲಿಗೆ ಶಾಂತಾ ಹೊಸೂರಕರ ಅವರ ಮನೆಯನ್ನು ಪರಿಶೀಲಿಸಿತು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಸಂಪೂರ್ಣ ಕುಸಿತಗೊಂಡಿರುವುದರಿಂದ ಮೊದಲ ಕಂತಿನ 90 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಸರಕಾರ ನೀಡುವ ಐದು ಲಕ್ಷ ರೂಪಾಯಿ ಬಳಸಿಕೊಂಡು ಉತ್ತಮ ಮನೆ ನಿರ್ಮಿಸಿಕೊಳ್ಳುವಂತೆ ತಂಡದ ಸದಸ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟಾರೆ 355 ಕೋಟಿ ರೂಪಾಯಿ ಹಾನಿಯಾಗಿರುತ್ತದೆ.
ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಒಟ್ಟಾರೆ 79.37 ಕೋಟಿ ರೂಪಾಯಿ ನಷ್ಟ ಉಂಟಾಗಿರುತ್ತದೆ. ಈಗಾಗಲೇ ವರದಿ ಸಲ್ಲಿಸಲಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಮತ್ತೊಂದು ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಬೆಳೆ, ರಸ್ತೆ, ಶಾಲಾ ಕಟ್ಟಡ ಸೇರಿದಂತೆ ಮೂಲಸೌಕರ್ಯ ಹಾನಿಯ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲಾಡಳಿತದಿಂದ ಮನವರಿಕೆ ಮಾಡಲಾಗಿರುತ್ತದೆ.
ಸಭೆಯಲ್ಲಿ ವಿಸ್ತೃತವಾದ ಮಾಹಿತಿಯನ್ನು ಛಾಯಾಚಿತ್ರ ಮತ್ತು ವಿಡಿಯೋ ದಾಖಲೆಗಳ ಸಮೇತ ಕೇಂದ್ರ ತಂಡಕ್ಕೆ ಒದಗಿಸಲಾಗಿದೆ ಎಂದು ವಿವರಿಸಿದರು.

ಖಾನಾಪುರದಲ್ಲಿ ಅಂಗನವಾಡಿ ಕೇಂದ್ರಗಳ ಭೇಟಿ:

ನಂತರ ಖಾನಾಪುರ ಪಟ್ಟಣದ ಚಿರಮುರಕರ ಹಾಗೂ ಘೋಡೆ ಗಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ತಂಡವು ಕಟ್ಟಡ ಪರಿಶೀಲಿಸಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಮೂರ್ತಿ ಮತ್ತಿತರರು ಮಾಹಿತಿಯನ್ನು ನೀಡಿದರು.
ಕೊನೆಗೆ ಹಾರುರಿ ಬಳಿ ಶಿಂಧೂರ-ಹೆಮ್ಮಡಗಾ ರಸ್ತೆ ಹಾನಿಯನ್ನು ಪರಿಶೀಲಿಸಲಾಯಿತು.

ಇದಕ್ಕೂ ಮುಂಚೆ ಬೆಳಗಾವಿ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಇತ್ತೀಚಿನ ಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಅಂಕಿ-ಅಂಶಗಳ ಸಮೇತ ವಿವರಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯ ಸವದತ್ತಿ, ಖಾನಾಪುರ ಹಾಗೂ ನಿಪ್ಪಾಣಿಯಲ್ಲಿ ಮೂರು ಜನರ ಜೀವಹಾನಿಯಾಗಿದ್ದು, ತಲಾ ಐದು ಲಕ್ಷ ರೂಪಾಯಿಯಂತೆ ಪರಿಹಾರ ನೀಡಲಾಗಿರುತ್ತದೆ.
34 ಜಾನುವಾರುಗಳ ಜೀವಹಾನಿಯಾಗಿದ್ದು, ಐದು ತಾಲ್ಲೂಕಿನಲ್ಲಿ ಒಟ್ಟು 65 ಕುಟುಂಬಗಳು ಪ್ರವಾಹದಿಂದ ಬಾಧಿತಗೊಂಡಿರುತ್ತವೆ.

ಜಿಲ್ಲೆಯಲ್ಲಿ 14 ಮನೆಗಳು ಸಂಪೂರ್ಣ ಹಾನಿ:

ಜಿಲ್ಲೆಯಲ್ಲಿ ಸಂಪೂರ್ಣ, ಭಾಗಶಃ ಸೇರಿದಂತೆ ಒಟ್ಟು 1562 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 14 ಮನೆಗಳು ಮಾತ್ರ ಸಂಪೂರ್ಣವಾಗಿ ಕುಸಿದಿರುತ್ತವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

747 ಭಾಗಶಃ ಹಾಗೂ 801 ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳಿದರು.
ಭತ್ತ, ಜೋಳ, ಗೋವಿನಜೋಳ, ಹೆಸರು, ಸೋಯಾಬಿನ್ ಸೇರಿದಂತೆ 27,341 ಹೆಕ್ಟೇರ್ ಬೆಳೆಯು ಪ್ರವಾಹದಿಂದ ಬಾಧಿತಗೊಂಡಿರುತ್ತದೆ.
ಅದೇ ರೀತಿ 127.81 ಹೆಕ್ಟೇರ್ ತೋಟಗಾರಿಕೆ ಬೆಳೆ ಕೂಡ ನಷ್ಟವಾಗಿರುತ್ತದೆ.
1330 ಕಿ.ಮೀ. ರಸ್ತೆ, 23 ಸೇತುವೆ, 326 ವಿದ್ಯುತ್ ಕಂಬಗಳಿಗೆ ಹಾನಿಯಾಗಿರುತ್ತದೆ.
ಇದಲ್ಲದೇ 972 ಪ್ರಾಥಮಿಕ ಶಾಲಾ ಕಟ್ಟಡಗಳು ಮತ್ತು 820 ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಕೂಡ ಅತಿವೃಷ್ಟಿಯಿಂದ ಹಾನಿಯಾಗಿರುತ್ತವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿಯನ್ನು ನೀಡಿದರು.
ಈ ಎಲ್ಲ ಹಾನಿಗೆ ಸಂಬಂಧಿಸಿದಂತೆ ಛಾಯಾಚಿತ್ರ ಹಾಗೂ ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಲಾಗಿದ್ದು, ಇದನ್ನು ಪರಿಗಣಿಸಿ ಹೆಚ್ಚಿನ ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ತಂಡದ ಸದಸ್ಯರಿಗೆ ಮನವಿ ಮಾಡಿಕೊಂಡರು.

ಇದೇ ವೇಳೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದ ‌ಛಾಯಾಚಿತ್ರ ಪ್ರದರ್ಶನವನ್ನು ಕೇಂದ್ರ ಅಧ್ಯಯನ ತಂಡವು ವೀಕ್ಷಿಸಿತು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹಾನಿಯ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ನಗರ ಯೋಜನಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುವೈದ್ಯಕೀಯ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ ಕೂಲೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****

Check Also

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ …

Leave a Reply

Your email address will not be published. Required fields are marked *