ಬೆಳಗಾವಿ-ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದು ಅವರು ಬೆಳಗಾವಿ ಮಹಾನಗರ ಪ್ರವೇಶ ಮಾಡದಂತೆ ತಡೆಯಲು ಹಿರೇಬಾಗೇವಾಡಿ ಟೋಲ್ ಬಳಿ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದೆ.
ಬೆಳಗಾವಿ ಮಹಾನಗರದಲ್ಲಿ ಭಾಷಾ ಧ್ವೇಷದ ಕಿಡಿ ಹೊತ್ತಿದಾಗ, ಬೆಳಗಾವಿ ಪೋಲೀಸ್ರು ವಾಟಾಳ್ ನಾಗರಾಜ್ ಸೇರಿದಂತೆ ಎಲ್ಲ ಕನ್ನಡಪರ ಹೋರಾಟಗಾರರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆಯುತ್ತಾರೆ. ಇಂದು ಕರವೇ ಅಧ್ಯಕ್ಷ ನಾರಾಯಣಗೌಡ್ರು ಸಾವಿರಾರು ಕಾರ್ಯಕರ್ತರ ಜೊತೆಗೆ ಬೆಳಗಾವಿಗೆ ಮುತ್ತಿಗೆ ಹಾಕಿ ನಾಡದ್ರೋಹಿಗಳ ವಿರುದ್ಧ ಗುಡುಗಲು, ನಮ್ಮ ನಡೆ ಬೆಳಗಾವಿ ಕಡೆ ಎನ್ನುವ ಘೋಷಣೆ ಹಾಕಿ ಬೆಳಗಾವಿಗೆ ಬರುತ್ತಿರುವ ಸಂಧರ್ಭದಲ್ಲಿ ಕರವೇ ಪಡೆಗೆ ಹಿರೇಬಾಗೇವಾಡಿ ಟೋಲ್ ಬಳಿ ತಡೆಯಲು ಪೋಲೀಸರು ಬಿಗಿ ಪೋಲೀಸ್ ಸರ್ಪಗಾವಲನ್ನು ನಿಯೋಜನೆ ಮಾಡಿದ್ದಾರೆ.
ಎಂಇಎಸ್ ನಿಷೇಧಿಸುವದು, ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ತಡೆಯುವುದು ಸೇರಿದಂತೆ ಹಲವಾರು ಕನ್ನಡಪರ ವಿಚಾರಗಳನ್ನು ಮುಂದಿಟ್ಟುಕೊಂಡು ಕರವೇ ಇಂದು ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಯನ್ನು ಆಯೋಜಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾವಿರಾರು ಕಾರ್ಯಕರ್ತರಿಗೆ ಅಡುಗೆ ವ್ಯವಸ್ಥೆಯನ್ನು ಮಾಡಿತ್ತು.
ಬೆಳಗಾವಿ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬೆಳಗಾವಿ ಮಹಾನಗರಕ್ಕೆ ಬರುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಈಗಾಗಲೇ ಪೋಲೀಸರು ಹಿರೇಬಾಗೇವಾಡಿ ಟೋಲ್ ಬಳಿಯೇ ತಡೆದಿದ್ದಾರೆ.ಇದೇ ಮಾರ್ಗದಿಂದ ನಾರಾಯಣಗೌಡ್ರು ಬಂದಲ್ಲಿ ಅವರನ್ನೂ ಪೋಲೀಸ್ರು ತಡೆಯುವ ಸಾಧ್ಯತೆ ಇದೆ.
ಬೆಳಗಾವಿಯ ನಿಪ್ಪಾಣಿ ಗಡಿಯಲ್ಲೂ ಹೈ- ಅಲರ್ಟ್…
ಮಹಾರಾಷ್ಟ್ರದ ಇಬ್ವರು ಸಚಿವರು ಹಾಗೂ ಸಂಸದರೊಬ್ಬರು ಬೆಳಗಾವಿಗೆ ಬರುವದಾಗಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ನಿಪ್ಪಾಣಿಯ ಕುಗನೋಳಿ ಚೆಕ್ ಪೋಸ್ಟ್ ಸೇರಿದಂತೆ ಮಹಾರಾಷ್ಟ್ರದಿಂದ ಬೆಳಗಾವಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಕರ್ನಾಟಕ ಪೋಲೀಸ್ರು ತೀವ್ರ ನಿಗಾ ಇಟ್ಟಿದ್ದು ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ .