ಬೆಳಗಾವಿ, ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿದ್ದ 121 ಜನರನ್ನು ಇಂದು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಳಿಸಿ ಅವರವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಬೆಳಗಾವಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ 87 ಹಾಗೂ ರಾಯಬಾಗ ತಾಲ್ಲೂಕಿನಲ್ಲಿದ್ದ 34 ಜನರನ್ನು ಮನೆಗೆ ಕಳುಹಿಸಲಾಗಿದೆ.
ಈ ಎಲ್ಲರೂ ಹದಿನಾಲ್ಕು ದಿನಗಳ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ. ಈ ಅವಧಿಯಲ್ಲಿ ಇವರ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಎಲ್ಲ ವರದಿಗಳು ನೆಗೆಟಿವ್ ಬಂದಿರುವುದರಿಂದ ಅವರನ್ನು ಮನೆಗೆ ಕಳಿಸಲಾಯಿತು ಎಂದು ತಿಳಿಸಿದರು.
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದರೂ ಅವರವರ ಮನೆಯಲ್ಲಿಯೇ ಮುಂದಿನ ಹದಿನಾಲ್ಕು ದಿನಗಳವರೆಗೆ ಕ್ವಾರಂಟೈನ್ ಇರಬೇಕಾಗುತ್ತದೆ.
ಹೀಗೆ ಮನೆಯಲ್ಲಿ ಇರುವವರ ಮೇಲೆ ಸಾಫ್ಟ್‌ವೇರ್ ಹಾಗೂ ಮೊಬೈಲ್ ಆಪ್ ಮೂಲಕ ನಿಗಾ ವಹಿಸಲಾಗುತ್ತದೆ. ಇದಲ್ಲದೇ ಆರೋಗ್ಯ ಇಲಾಖೆಯ ತಂಡಗಳು ಕೂಡ ಅವರ ಮನೆಗಳಿಗೆ ಭೇಟಿ ನೀಡುತ್ತಾರೆ.
ಆರೋಗ್ಯ, ಕಂದಾಯ, ಪೊಲಿಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅವಿರತ ಶ್ರಮದ ಫಲವಾಗಿ ಸೋಂಕಿತರು ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಗುಣಮುಖರಾಗುತ್ತಿದ್ದಾರೆ.
ಮನೆಗಳಿಗೆ ತೆರಳಿರುವವರು ಕಡ್ಡಾಯವಾಗಿ ಹದಿನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾರ್ಗಸೂಚಿ ಹಾಗೂ ಅಧಿಕಾರಿಗಳ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಕೋವಿಡ್-೧೯ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡಿದ್ದಾರೆ.
****