ಪರ್ಮಿಶನ್ ಇಲ್ಲದೇ, ಬ್ಯಾನರ್, ಪೋಸ್ಟರ್ ಗಳನ್ನು ಅಂಟಿಸುವಂತಿಲ್ಲ!

ಮತದಾರರಿಗೆ ಆಮಿಷ: ತೀವ್ರ ನಿಗಾವಹಿಸಲು ಸೂಚನೆ
ಬೆಳಗಾವಿ, ಮಾ.14-ಆಯಾ ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆಯದೇ ಯಾವುದೇ ರೀತಿಯ ಬ್ಯಾನರ್, ಪೋಸ್ಟರ್ ಗಳನ್ನು ಅಂಟಿಸುವಂತಿಲ್ಲ; ಆದ್ದರಿಂದ ಪರವಾನಿಗೆ ಪಡೆಯದೇ ಬ್ಯಾನರ್ ಮತ್ತು ಪೋಸ್ಟರ್ ಗಳು ಕಂಡುಬಂದರೆ ಅವುಗಳನ್ನು ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಚುನಾವಣಾಧಿಕಾರಿಗಳ ಜತೆ ಮಂಗಳವಾರ(ಮಾ.14) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಸದ್ಯಕ್ಕೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿಲ್ಲ; ಆದರೆ ಚಾಲ್ತಿಯಲ್ಲಿರುವ ಕಾಯ್ದೆ-ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಿಂದ ಸೂಕ್ತ ಪರವಾನಿಗೆ ಪಡಯದೇ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಗಳನ್ನು ಅಳವಡಿಸುವಂತಿಲ್ಲ. ಈ ರೀತಿಯ ಅನಧಿಕೃತ ಪ್ರಚಾರ ಸಾಮಗ್ರಿಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ತಿಳಿಸಿದರು.

ಇದಲ್ಲದೇ ಮತದಾರರಿಗೆ ಆಸೆ-ಆಮಿಷವೊಡ್ಡುವಂತಹ ಉಡುಗೊರೆ, ಕೊಡುಗೆ ನೀಡುವುದು ಮತ್ತು ಸಾಮೂಹಿಕವಾಗಿ ಊಟದ ವ್ಯವಸ್ಥೆ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು.
ಈ ರೀತಿಯ ಪ್ರಕರಗಳು ಕಂಡುಬಂದರೆ ಯಾವುದೇ ರೀತಿಯ ಮುಲಾಜಿಲ್ಲದೇ ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.

ಯಾವುದೇ ನಿರ್ದಿಷ್ಟ ವ್ಯಕ್ತಿಯ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಹೊಂದಿರುವಂತಹ ಉಡುಗೊರೆ, ಸೀರೆ, ಕುಕರ್, ವಾಚ್ ಮತ್ತಿತರ ವಸ್ತುಗಳ ವಿತರಣೆ, ಸಾಗಾಣಿಕೆ ಹಾಗೂ ದಾಸ್ತಾನು ಕಂಡುಬಂದರೆ ಅವುಗಳನ್ನು ಕೂಡ ಚಾಲ್ತಿಯಲ್ಲಿರುವ ನಿಯಮಾವಳಿ ಅನುಸಾರ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.

ಅನಧಿಕೃತವಾಗಿ ಮದ್ಯ ಮಾರಾಟ, ಸಾಗಾಣಿಕೆ, ದಾಸ್ತಾನು ಅಥವಾ ವಿತರಣೆ ಮೇಲೆ ತೀವ್ರ ನಿಗಾ ವಹಿಸಬೇಕು. ಗಡಿಭಾಗಗಳ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ನಡೆಸಬೇಕು.

ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚನೆ ನೀಡಿದರು.
ಇದಲ್ಲದೇ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಯೋಗದ ಮಾರ್ಗಸೂಚಿಯಂತೆ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಖಚಿತಪಡಿಸಬೇಕು; ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಯಾಗಿರುವ ಆರ್.ವೆಂಕಟೇಶ್ ಕುಮಾರ್, ಅವರು ಮಾದರಿ ನೀತಿಸಂಹಿತೆ ಇಲ್ಲದಿದ್ದರೂ ಚಾಲ್ತಿಯಲ್ಲಿರುವ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಚುನಾವಣಾ ಆಯೋಗದ ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದ್ದು, ಅನಧಿಕೃತ ಬ್ಯಾನರ್-ಪೋಸ್ಟರ್ ತೆರವುಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿಯನ್ನು ನೀಡಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಚುನಾವಣಾಧಿಕರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇದಾದ ಬಳಿಕ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಜತೆ ಸಭೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು, ಜಿಲ್ಲೆಯಲ್ಲಿ ಅನಧಿಕೃತವಾಗಿ ಅಂಟಿಸಲಾಗಿರುವ ಪೋಸ್ಟರ್, ಬ್ಯಾನರ್, ಗೋಡೆಬರಹಗಳನ್ನು ಗಳನ್ನು ಕೂಡಲೇ ತೆರವುಗೊಳಿಸಬೇಕು. ಖಾಸಗಿ ಸ್ಥಳಗಳಲ್ಲಿ ಇರುವ ಬ್ಯಾನರ್ ಗಳನ್ನು ಕೂಡ ನಿಯಮಾವಳಿ ಪ್ರಕಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಪಾಳಿಯ ಪ್ರಕಾರ ರಿಜಿಸ್ಟರ್ ನಿರ್ವಹಿಸಬೇಕು. ಸಿಸಿಟಿವಿ ಮತ್ತಿತರ ಮೂಲಸೌಕರ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
****

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *