Breaking News
Home / Breaking News / ಬೆಳಗಾವಿ ಜಿಲ್ಲೆಯ 11,600 ಜನರಿಗೆ ಹಕ್ಕುಪತ್ರ ವಿತರಣೆ

ಬೆಳಗಾವಿ ಜಿಲ್ಲೆಯ 11,600 ಜನರಿಗೆ ಹಕ್ಕುಪತ್ರ ವಿತರಣೆ

ಕಾನೂನು ತೊಡಕು ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಬೆಳಗಾವಿ, -ಅನೇಕ ಕಾನೂನು ತೊಡಕುಗಳನ್ನು ಪರಿಹರಿಸಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಅದೇ ರೀತಿ ಕಾಡಂಚಿನಲ್ಲಿ ಹಾಗೂ ಖಾಸಗಿ ಜಾಗೆಯಲ್ಲಿ ಇರುವ ಜನರಿಗೂ ಹಕ್ಕುಪತ್ರವನ್ನು ನೀಡಲು ಸರಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ರಾಮದುರ್ಗ ತಾಲ್ಲೂಕಿನ ಬಟಕುರ್ಕಿಯಲ್ಲಿ ಬುಧವಾರ(ಮಾ.15) ನಡೆದ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ ಅರಿವು ಕಾರ್ಯಕ್ರಮದಲ್ಲಿ ವಿವಿಧ ತಾಂಡಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿಗಳು ಇತ್ತೀಚಿಗೆ ಕಲಬುರಗಿಯಲ್ಲಿ 50 ಸಾವಿರಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ನೀಡಿರುತ್ತಾರೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಇನ್ನೂ 50 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಿದ್ದಾರೆ.

ಅನೇಕ ಕಾನೂನು ತೊಡಕುಗಳನ್ನು ಪರಿಹರಿಸಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರಧಾನಮಂತ್ರಿಗಳು ಇತ್ತೀಚಿಗೆ ಕಲಬುರಗಿಯಲ್ಲಿ 50 ಸಾವಿರಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ನೀಡಿರುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ಇನ್ನೂ 50 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಿದ್ದಾರೆ.

ಸಮಾಜದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಏನೇ ಗೊಂದಲ ಎದುರಾದರೂ ಸಮಾಜದ ಕಟ್ಟಕಡೆಯ ಜನರ ಕಣ್ಣೀರು ನೋಡಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಅಂತಹ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸರಕಾರಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದರ ಜತೆಗೆ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಮಲಪ್ರಭೆ ನದಿತೀರದಲ್ಲಿ ಪ್ರವಾಹಹಾನಿ ತಪ್ಪಿಸಲು 125 ಕೋಟಿ ರೂಪಾಯಿ ವೆಚ್ಚದಲ್ಲಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ.

ಬೆಳೆಹಾನಿ ಪರಿಹಾರವಾಗಿ ಕೇಂದ್ರ ಸರಕಾರ ನೀಡುವ ಪರಿಹಾರಧನದ ಎರಡು ಪಟ್ಟು ಪರಿಹಾರವನ್ನು ರಾಜ್ಯ ಸರಕಾರ ನೀಡಿರುವುದು ದೇಶದಲ್ಲೇ ಮೊದಲು. ಇದು ನಮ್ಮ ಸರಕಾರದ ಬದ್ಧತೆಯಾಗಿದೆ.
ಹಿಂದಿನಂತೆ ಬಾಯಿಮಾತಿನಲ್ಲಿ ಪರಿಹಾರ ನೀಡುವ ಸರಕಾರ ಇದಲ್ಲ; ಪ್ರತಿಯೊಂದು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಮೂಲಕ ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಲಾಗಿದೆ ಎಂದು ಹೇಳಿದರು.

ಪಿಎಂ-ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರ ಖಾತೆಗೆ 1130 ಕೋಟಿ ಹಣವನ್ನು ಜಮೆ ಮಾಡಲಾಗಿದೆ. ಸ್ವತಃ ಮಾನ್ಯ ಪ್ರಧಾನಮಂತ್ರಿಗಳು ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಿದ್ದಾರೆ.
ಜಲಜೀವನ ಮಿಷನ್ ಯೋಜನೆಯಡಿ ದೇಶದ 12 ಕೋಟಿ ಮನೆಗಳಿಗೆ ಹಾಗೂ ರಾಜ್ಯದಲ್ಲಿ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಇನ್ನೂ 25 ಲಕ್ಷ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ.
ಗ್ಯಾಸ್ ಸಂಪರ್ಕ, ವಿದ್ಯುತ್ ಸೇರಿದಂತೆ ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿವೆ ಎಂದು ಹೇಳಿದರು.
13 ಲಕ್ಷ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯ ಲಾಭ ದೊರೆತಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಒಂದು ಲಕ್ಷಕ್ಕೂ ಅಧಿಕ ರೈತರ ಮಕ್ಕಳಿಗೆ ಈ ಯೋಜನೆಯ ಲಾಭ ಲಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸ್ತ್ರೀಶಕ್ತಿ ಸಂಘಗಳಿಗೆ ಐದು ಲಕ್ಷ ರೂಪಾಯಿವರೆಗೆ ನೆರವು ನೀಡಲಾಗುವುದು. ಸ್ವಾಮಿ ವಿವೇಕಾನಂದ ಯೋಜನೆಯಡಿ ಪ್ರತಿ ಗ್ರಾಮದ ಎರಡು ಯುವಕ ಸಂಘಗಳಿಗೆ ತಲಾ ಐದು ಲಕ್ಷ ನೆರವು ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು.

ದುಡಿಮೆ ಇದ್ದರೆ ಬಡತನ ಇರುವುದಿಲ್ಲ. ಆದ್ದರಿಂದ ಕಾಯಕ ಅವಲಂಬಿಸಿದ ಸಮುದಾಯಗಳಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ.

ಪರಿಶಿಷ್ಟ ಜಾತಿ/ಪಂಗಡಗಳ ಜನರ ಬಹುದಿನಗಳ ಬೇಡಿಕೆಯಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕಾನೂನು ಮಾಡಲಾಗಿದೆ. ಸಂವಿಧಾನದ ಷೆಡ್ಯೂಲ್ 9 ರಲ್ಲಿ ಸೇರ್ಪಡೆಗೊಳಿಸಲಾಗುವುದು.
ಮೀಸಲಾತಿ ಹೆಚ್ಚಿಸುವ ನಿರ್ಧಾರ ಜೇನುಗೂಡಿಗೆ ಕೈಹಾಕಿದಂತೆ ಅನೇಕ ಜನರು ಎಚ್ಚರಿಸಿದರು. ಆದರೆ ಇದನ್ನು ಲೆಕ್ಕಿಸದೇ ಜೇನುಗೂಡಿಗೆ ಕೈಹಾಕಿ ಅದರಲ್ಲಿನ ಜೇನು ತೆಗೆದು ಜನರಿಗೆ ಕೊಡುವ ಧೈರ್ಯ ನಮ್ಮ ಸರಕಾರ ಮಾಡಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಶಾಲಾ ಮಕ್ಕಳಿಗಾಗಿಯೇ ವಿಶೇಷವಾಗಿ ಎರಡು ಸಾವಿರ ಬಸ್ ಗಳನ್ನು ನೀಡಲು ಸರಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಒಟ್ಟು 11,600 ಜನರ ಪೈಕಿ ವೇದಿಕೆಯ ಮೇಲೆ ಕೆಲವು ಜನರಿಗೆ ಸಾಂಕೇತಿಕವಾಗಿ ಹಕ್ಕುಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿತರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುತುವರ್ಜಿಯಿಂದ ಹತ್ತಾರು ಕಾನೂನು ತೊಡಕುಗಳನ್ನು ಬಗೆಹರಿಸಿದ ಪರಿಣಾಮ ಇಂದು ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರ ದೊರೆತಿದೆ. ಇದರಲ್ಲಿ ಕಂದಾಯ ಸಚಿವರಾದ ಆರ್.ಅಶೋಕ ಅವರ ಶ್ರಮ ಕೂಡ ಬಹಳಷ್ಟಿದೆ ಎಂದು ಸ್ಮರಿಸಿದರು.

ಹಕ್ಕುಪತ್ರ ನೀಡುವ ದಿಟ್ಟ ಕ್ರಮ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಋಣವನ್ನು ಈ ಸಮುದಾಯಗಳು ಮರೆಯುವುದಿಲ್ಲ ಎಂದು ಹೇಳಿದರು.
ತಾವು ವಾಸಿಸುವ ಜಾಗದ ಹಕ್ಕುಪತ್ರಗಳಿಲ್ಲದೇ ಅನೇಕ ದಶಕಗಳಿಂದ ಸಂಕಟ ಅನುಭವಿಸಿದ ಸಾವಿರಾರು ಜನರಿಗೆ ಇಂದು ಸಂತಸದ ದಿನವಾಗಿದೆ. ಹಕ್ಕುಪತ್ರಗಳನ್ನು ಪಡೆದುಕೊಂಡು ನಿರಾಳರಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಮದುರ್ಗ ತಾಲ್ಲೂಕಿಗೆ ಒಟ್ಟಾರೆ 3100 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ಉಳಿದ ತಾಂಡ ಹಾಗೂ ಕೆಲ ಗ್ರಾಮಗಳನ್ನು ಕಂದಾಯ ಗ್ರಾಮವೆಂದು ಘೋಷಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಮದುರ್ಗ ತಾಲ್ಲೂಕಿನ ಐದು ಗ್ರಾಮಗಳು ಸೇರಿದಂತೆ ಜಿಲ್ಲೆಯ 75 ಗ್ರಾಮಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಿರುವುದಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಅವರು ಸಂತಸ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ಹಸಿರುನಿಶಾನೆ ಪಡೆಯಲು ಮುಖ್ಯಮಂತ್ರಿಗಳ ವಿಶೇಷ ಪ್ರಯತ್ನವೇ ಕಾರಣವಾಗಿದೆ. ಡಿಪಿಆರ್ ಗೆ ಅನುಮೋದನೆ ಪಡೆಯುವುದರ ಜತೆಗೆ ಯೋಜನೆ ಅನುಷ್ಠಾನಕ್ಕೆ ಒಂದು ಸಾವಿರ ಕೋಟಿ ರೂಪಾಯಿ ತೆಗೆದಿರಿಸುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ ಎಂದು ಹೇಳಿದರು.

ರೈಲು ಯೋಜನೆ, ನೀರಾವರಿ ಯೋಜನೆಗಳಿಗೆ ಸಾಕಷ್ಟು ಆದ್ಯತೆ ನೀಡಿದ್ದಾರೆ. ಸಂಗೊಳ್ಳಿಯ ಸೈನಿಕ ಶಾಲೆ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ, ಕಿತ್ತೂರು-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಬೆಳಗಾವಿ ಜಿಲ್ಲೆಗೆ ನೀಡಿದ್ದಾರೆ ಎಂದು ಕಡಾಡಿ ಹೇಳಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ವಾಗತಿಸಿದರು. ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಾವಿರಾರು ಫಲಾನುಭವಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
****

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *