ಐವರು ದರೋಡೆಕೋರರ ಬಂಧನ
ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿಯ ವಾಹನವನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ನಾಲ್ಕು ಲಕ್ಷ ರೂಪಾಯಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಹಿರೇಬಾಗೇವಾಡಿ ಪೊಲೀಸರು ಐವರು ದರೋಡೆಕೋರರನ್ನು ಬಂಧಿಸಿದ್ದಾರೆ.
ನಗರದ ಶಿವಾಜಿ ನಗರದ ಲಗಮಪ್ಪಾ ಮಲ್ಲಪ್ಪ ಕೊಳ್ಯಾನಾಯಿಕ (೩೦) ಮುತ್ಯಾನಟ್ಟಿ ಗ್ರಾಮದ ಪ್ರಕಾಶ ಅಲಿಯಾಸ್ ಪಿಕೆ ಗುಜ್ಜಪ್ಪಾ ಗೋರವ (೨೬), ಕಲ್ಲಪ್ಪ ಸಿದ್ರಾಯಿ ಹೊನ್ನಂಗಿ (೨೯), ವಿಶಾಲ ತಳವಾರ (೨೩) ಹಾಗೂ ಮಾಸ್ತಮರಡಿ ಗ್ರಾಮದ ಮಾರುತಿ ಹನುಮಂತ ನಾಗಪ್ಪ ಬುರ‌್ರಾಣಿ (೨೦) ಬಂಧಿತ ಆರೋಪಿಗಳು.
ಕಳೆದ ಜುಲೈ ೩೧ ರಂದು ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ತಮ್ಮ ಕಾರ ಮೂಲಕ ಬೆಳಗಾವಿಯಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದರು.
ಮುತ್ನಾಳ ಗ್ರಾಮದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ರ ಮೇಲೆ ಸಿನಿಮೀಯ ಮಾದರಿಯಲ್ಲಿ ಸ್ಕಾರ್ಪಿಯೋ ವಾಹನದಿಂದ ಬೆನ್ನಟ್ಟಿ ಅಡ್ಡಗಟ್ಟಿದ ದರೋಡೆಕೋರರು ಪ್ಲಾಸ್ಟಿಕ್ ಪಿಸ್ತೂಲ್ ಲೈಟರ್, ತಲವಾರ್, ಲಾಂಗ್‌ಗಳನ್ನು ತೋರಿಸಿ ಬೆದರಿಕೆ ಹಾಕಿದ್ದರು. ನಾಲ್ಕು ಲಕ್ಷ ರೂಪಾಯಿ ದೋಚಿಕೊಂಡಿದ್ದರು. ಅಷ್ಟೇ ಅಲ್ಲದೇ, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಯನ್ನು ಅಪಹರಿಸಿ ೨೦ ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ಸಪೆಕ್ಟರ್ ವಿಜಯಕುಮಾರ ಸಿನ್ನೂರ ನೇತೃತ್ವದ ತನಿಖಾ ತಂಡ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ₹ ೩.೮೦ ಲಕ್ಷ ನಗದು, ಕೃತ್ಯಕ್ಕೆ ಬಳಸಿದ ₹ ೪ ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ,ಪ್ಲಾಸ್ಟಿಕ್ ಡಮ್ಮಿ ಪಿಸ್ತೂಲ್ ಲೈಟರ್ ಮತ್ತಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.