Breaking News

ಪತ್ರಿಕಾಧರ್ಮ, ವೃತ್ತಿಮೌಲ್ಯ ಕಾಪಾಡಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಿವಿಮಾತು.

ಬೆಳಗಾವಿ, -: “ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಹಾಗೂ ಹೊಣೆಗಾರಿಕೆಯಿದೆ. ಪತ್ರಕರ್ತರು ಪತ್ರಿಕಾ ನೀತಿ, ಧರ್ಮದನುಸಾರ ಕಾರ್ಯ ನಿರ್ವಹಿಸಿ, ಯುವ ಪತ್ರಕರ್ತರಿಗೆ ಮಾದರಿಯಾಗಬೇಕು. ಪಾರದರ್ಶಕ ವರದಿಯ ಮೂಲಕ ಸಮಾಜದ ಪ್ರಗತಿಗೆ ಸಹಕರಿಸಬೇಕು” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೊಂ) ಜಿಲ್ಲಾ ಘಟಕ ಬೆಳಗಾವಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರವಿವಾರ (ಜು.02) ಕೆ.ಎಲ್. ಇ. ಜಿರಗೆ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಅಂಕು-ಡೊಂಕು ತಿದ್ದಿವ ಮೂಲಕ ಸಮಾಜ ಪ್ರಗತಿಪರ ಹೆಜ್ಜೆ ಇಡುವಲ್ಲಿ ಮಾಧ್ಯಮದ ಪಾತ್ರ ಮಹತ್ವದಾಗಿದೆ. ಎಲ್ಲ ವಲಯಗಳಲ್ಲೂ ಸುಧಾರಣೆ ತರುವ ನಿಟ್ಟಿನಲ್ಲಿ ಸಮಾಜದ ಕನ್ನಡಿಯಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದೆ. ಸಮಾಜದ ತಪ್ಪುಗಳನ್ನು ತಿದ್ದುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೀಘ್ರದಲ್ಲಿ ಪತ್ರಿಕಾ ಭವನ ನಿರ್ಮಾಣ:

ಜಿಲ್ಲೆಯಲ್ಲಿ ಪತ್ರಿಕಾ ಭವನ ಇಲ್ಲ, ಪತ್ರಕರ್ತರಿಂದ ಬಹಳ ದಿನಗಳಿಂದ ಪತ್ರಿಕಾಭವನ ನಿರ್ಮಾಣಕ್ಕೆ ಬೇಡಿಕೆ ಇದೆ. ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಬುಡಾ ವ್ಯಾಪ್ತಿಯಲ್ಲಿ 12 ಗುಂಟೆ ಜಾಗೆಯಲ್ಲಿ ನಿವೇಶನ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅದೇ ರೀತಿಯಲ್ಲಿ ಪತ್ರಕರ್ತರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವ ಮೂಲಕ ಪತ್ರಕರ್ತರ ಬಡಾವಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ರಾಜ್ಯದಲ್ಲಿ ಬೆಳಗಾವಿ 18 ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡ ದೊಡ್ಡ ಜಿಲ್ಲೆಯಾಗಿದೆ. ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದ ದಿಕ್ಸೂಚಿಯಾಗಿದೆ. ಸಮಾಜ ಒಳ್ಳೆಯ ಬದಲಾವಣೆ ಕಾಣುವುದರಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಬಡವರ ಕಷ್ಟಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಫಲಶ್ರುತಿ ವರದಿಗಳತ್ತ ಗಮನಹರಿಸಿ:

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, “ಪತ್ರಿಕಾ ಮಾಧ್ಯಮ ಆಡಳಿತ ಸುಧಾರಣೆಯ ಕನ್ನಡಿಯಾಗಿದೆ. ಶುದ್ಧ ವಿಚಾರಗಳ ಸುದ್ದಿ ಮಾಡುವುದು ಅದೇ ರೀತಿಯಲ್ಲಿ ಅಶುದ್ಧವಾದದ್ದನ್ನು ಕೂಡ ಶುದ್ಧ ಮಾಡಿ ಸುದ್ದಿ ಮಾಡುವ ದೊಡ್ಡ ಜವಾಬ್ದಾರಿ ಪತ್ರಿಕಾ ರಂಗದ ಮೇಲಿದೆ. ಪತ್ರಕರ್ತರು ವರದಿ ಮಾಡುವ ಮುನ್ನ ಮುಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಬದಲಾವಣೆಗಳನ್ನು ಆಲೋಚಿಸಿ ವರದಿ ಮಾಡಬೇಕು ಇದರಿಂದ ವರದಿಗೆ ಫಲಶ್ರುತಿ ಖಂಡಿತಾ ಸಿಗುತ್ತದೆ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, “ಸಮಾಜದ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ವರದಿಗಾರರು ಸದಾ ಕ್ರಿಯಾಶೀಲರಾಗಿದ್ದು, ಯಾವುದೇ ವಿಷಯವಾಗಲಿ ಅದನ್ನು ಪರಿಶೀಲಿಸಿ, ದೂರದೃಷ್ಟಿಯಿಂದ ಸುದ್ದಿ, ಲೇಖನಗಳನ್ನು ನೀಡುತ್ತಾರೆ. ಜಿಲ್ಲೆಯಲ್ಲಿ ಬರೆದ ಅನೇಕ ಸುದ್ದಿಗಳು ರಾಜ್ಯಮಟ್ಟದ ಸುದ್ದಿಗಳಾಗುತ್ತವೆ. ಜಿಲ್ಲೆಯಲ್ಲಿ ಅಧಿಕಾರಿ ವರ್ಗ ಹಾಗೂ ಪತ್ರಕರ್ತರ ಮದ್ಯ ಒಳ್ಳೆಯ ಬಾಂಧವ್ಯವಿದೆ” ಎಂದು ಹೇಳಿದರು.

ಪೈಪೋಟಿಯಲ್ಲಿ ನೈತಿಕತೆ ಮರೆಯದಿರಲಿ:

ಇದೇ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರು, “1843, ಜುಲೈ 1 ರಂದು ಮಂಗಳೂರು ಸಮಾಚಾರ ಪತ್ರಿಕೆಯ ಪ್ರಾರಂಭದ ಮೂಲಕ ರಾಜ್ಯದಲ್ಲಿ ಪತ್ರಿಕೋದ್ಯಮ ಆರಂಭವಾಯಿತು. ಪ್ರಸ್ತುತ ದಿನಮಾನಗಳಲ್ಲಿ ಪತ್ರಿಕೆ, ಎಲೆಕ್ಟ್ರಾನಿಕ್ ಮೀಡಿಯಾ, ಟ್ವಿಟರ್ ಫೇಸ್ಬುಕ್ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮ ಎಲ್ಲ ಹಂತ ತಲುಪಿದೆ. ಇವತ್ತಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಮಾಧ್ಯಮ ಕೆಲಸ ಮಾಡುತ್ತಿದೆ. ಇದರ ಬಳಕೆ ಮತ್ತು ದುರ್ಬಳಕೆ ಎರಡು ಸಮ ಪ್ರಮಾಣದಲ್ಲಿ ನಡಯುತ್ತಿವೆ, ಸ್ಪರ್ಧಾತ್ಮಕ ನೆಪದಲ್ಲಿ ನೈತಿಕತೆಯನ್ನು ಮರೆಯಬಾರದು ಪತ್ರಿಕಾ ನೀತಿಯ ಅನುಸಾರ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.

ಈಗಾಗಲೇ ಮಾಧ್ಯಮ ಸಮಾಜದ ಕನ್ನಡಿಯಾಗಿದೆ. ಸರ್ಕಾರ ಮತ್ತು ಆಡಳಿತ ವರ್ಗವನ್ನು ಎಚ್ಚರಿಸಿ, ಒಳ್ಳೆಯ ಆಲೋಚನೆಗಳನ್ನು ಬಿತ್ತುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುಲು ಪತ್ರಕರ್ತರು ಸದಾ ಕ್ರಿಯಾಶೀಲರಾಗಿರಬೇಕು ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಗುರುನಾಥ ಕಡಬೂರ ಅವರು ಹೇಳಿದರು.

ಇದಕ್ಕೂ ಮುಂಚೆ ಮಾತನಾಡಿದ ಪತ್ರಕರ್ತ ಮೆಹಬೂಬ್ ಮಕಾನದಾರ ಅವರು, “ಪ್ರತಿದಿನ ಜನಪರ ಕೆಲಸ ಮಾಡುವ ಪತ್ರಕರ್ತರು ಕೆಲವೊಮ್ಮೆ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಆದ್ದರಿಂದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸರಕಾರದಿಂದ ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್ ಮತ್ತಿತರ ಸೌಲಭ್ಯ ಕಲ್ಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಪತ್ರಿಕಾ ಭವನ ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.

ನಿರಂತರ ಕಲಿಕೆ ಮೂಲಕ ಕೌಶಲ್ಯ ಹೆಚ್ಚಿಸಿ:

ವೃತ್ತಿ ಧರ್ಮದಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ನಮ್ಮ ದಿನಚರಿಯಲ್ಲಿ ಪ್ರತಿ ಕೆಲಸಗಳಿಗೆ ಸಮಯವನ್ನು ಮೀಸಲಿಡಬೇಕು. ಇಂದಿನ ದಿನಮಾನಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಕುರಂದವಾಡೆ ಅವರು ತಿಳಿಸಿದರು.

ಪ್ರತಿಭಾ ಪುರಸ್ಕಾರ:

ಎಸ್.ಎಸ್.ಎಲ್.ಸಿ ಪಿಯುಸಿ ಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಸಂಘದ ಪದಾಧಿಕಾರಿಗಳಾದ ರಾಜಶೇಖರ ಪಾಟೀಲ, ಶ್ರೀಶೈಲ ಮಠದ, ಅರುಣ ಪಾಟೀಲ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮತ್ತು ಎಲ್ಲ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಮತ್ತು ಪತ್ರಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *