Breaking News

ವಿಠೋಬಾ…….ಜಲ್ದೀ ಬಾ……!!! ಗುಡ್ಬಾಯ್ ವಿಠ್ಠಲಾ….!!

 

ಬೆಳಗಾವಿ ಜಿಲ್ಹೆಯ ಹಿಡಕಲ್ ಡ್ಯಾಂ ಭರ್ತಿ ಆಗ್ತಾ ಇದೆ. ಡ್ಯಾಂ ಪಾತ್ರದಲ್ಲಿರುವ ವಿಠ್ಠಲನ ಮಂದಿರ ಮುಳುಗುತ್ತಿದೆ. ಗೋಪುರ ಮಾತ್ರ ಕಾಣಿಸುತ್ತಿದೆ. ಡ್ಯಾಂ ದಂಡೆಯ ಮೇಲೆ ನಿಂತು ವಿಠ್ಠಲನ ಭಕ್ತರು ವಿಠೋಬಾ….ಲೌಕರ್ ಬಾ     ಗುಡ್ಬಾಯ್ ವಿಠ್ಠಲಾ ಎಂದು ಭಕ್ತರು ನಮಸ್ಕರಿಸುವ ದೃಶ್ಯ ಅಲ್ಲಿ ಸಮಾನ್ಯವಾಗಿದೆ.

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸಪ್ತನದಿಗಳು, ಜಲಾಶಯಗಳು, ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ವರುಣರಾಯ ಕೃಪೆ ತೋರಿದ್ದಾನೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಆಗುತ್ತಿದ್ದು, ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ‌‌‌.

ಮಳೆ…ಜೀವಕಳೆ…..

ಜೂನ್ 1ರಿಂದ ಈವರೆಗೆ 201 ಮಿ.ಮಿ. ವಾಡಿಕೆಗೆ 266 ಮಿ.ಮಿ. ಮಳೆ ದಾಖಲಾಗಿದ್ದು, ಶೇ.33ರಷ್ಟು ಅಧಿಕ ಮಳೆಯಾಗಿದೆ. ಜು.1ರಿಂದ ಜುಲೈ 9ರವರಗೆ 55 ಮಿ.ಮಿ. ಮಳೆಯಾಗಬೇಕಿತ್ತು. 78 ಮಿ.ಮಿ. ಮಳೆಯಾಗಿದ್ದು, ಶೇ.43ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಈ ಬಾರಿ ಮುಂಗಾರು ಮಳೆ ಕೈಹಿಡಿದಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ.

ಅರ್ಧ ಭರ್ತಿಯತ್ತ ಹಿಡಕಲ್ ಡ್ಯಾಂ:
51 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಹಿಡಕಲ್‌ ಜಲಾಶಯದಲ್ಲಿ ಜುಲೈ 9ರಂದು 21.105 ಟಿಎಂಸಿ ನೀರು ಸಂಗ್ರಹವಿದ್ದರೆ, 25,677 ಕ್ಯೂಸೆಕ್ ಒಳಹರಿವು, 3007 ಕ್ಯೂಸೆಕ್ ಹೊರ ಹರಿವು ಇದೆ. ಹಿಂದಿನ ವರ್ಷ ಈ ದಿನಕ್ಕೆ 4.479 ಟಿಎಂಸಿ ನೀರು ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 16.626 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗಿದೆ. ಒಂದೇ ವಾರದಲ್ಲಿ 10 ಟಿಎಂಸಿ ನೀರು ಏರಿಕೆಯಾಗಿದೆ.

ಖಾನಾಪುರ ತಾಲ್ಲೂಕಿನಾಧ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಇದರ ಗರಿಷ್ಠ ಸಾಮರ್ಥ್ಯ-37.731 ಟಿಎಂಸಿ, ಇಂದಿನ ಸಂಗ್ರಹ-10.936 ಟಿಎಂಸಿ, ಗರಿಷ್ಠ ಮಟ್ಟ-2079.50, ಇಂದಿನ ಮಟ್ಟ-2052.00, ಒಳ ಹರಿವು- 8504 ಕ್ಯೂಸೆಕ್, ಹೊರ ಹರಿವು 194 ಕ್ಯೂಸೆಕ್ ಇದೆ. ಕಳೆದ ವರ್ಷ ಈ ದಿವಸ 6.838 ಟಿಎಂಸಿ ನೀರು ಸಂಗ್ರಹವಾಗಿತ್ತು. ಹಾಗಾಗಿ, ಈ ವರ್ಷ 4 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗಿದೆ.

ಮತ್ತೆ ಮುಳುಗಿದ ವಿಠಲ‌ ಮಂದಿರ:
ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹುಕ್ಕೇರಿ ತಾಲ್ಲೂಕಿನ ಹುಣ್ಣೂರು ಗ್ರಾಮದಲ್ಲಿರುವ ವಿಠ್ಠಲ ಮಂದಿರ ಮುಳುಗಡೆಯಾಗಿದೆ. ಸಂಪೂರ್ಣ ದೇವಸ್ಥಾನ ನೀರಲ್ಲಿ ಮುಳುಗಿದ್ದು ಗೋಪುರ ಮಾತ್ರ ಕಾಣುತ್ತಿದೆ. ಇನ್ನು ನಾಲ್ಕು ಅಡಿ ನೀರು ಜಾಸ್ತಿಯಾದರೆ ಮಂದಿರ ಸಂಪೂರ್ಣ ಮುಳುಗಡೆಯಾಗಲಿದೆ. ಕಳೆದ ವರ್ಷ ಭೀಕರ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ವಿಠಲ ಮಂದಿರ ಸುದ್ದಿಯಾಗಿತ್ತು. ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದರು.

Check Also

ರಜೆ ಇದ್ರೂ ಸಹ, ನದಿ ಪಾತ್ರಗಳ ಪರಿಸ್ಥಿತಿ ಪರಶೀಲಿಸಿದ ಜಿಲ್ಲಾಧಿಕಾರಿ…

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ,-  ಪಕ್ಕದ  ಮಹಾ ನಿನ್ನೆಯ ದಿನ ಮೊಹರಂ …

Leave a Reply

Your email address will not be published. Required fields are marked *