Breaking News

ಯಾರಿವಳು…. ಅವಳಲ್ಲ ಅವನು…..!!

ಬೆಳಗಾವಿ,ಅ-ಚನ್ನಮ್ಮನ ವೇಷಧರಿಸಿ ನೃತ್ಯರೂಪಕ ಪ್ರದರ್ಶನ ನೀಡಿದ ಕಲಾವಿದರೊಬ್ಬರು ಕಿತ್ತೂರು ಉತ್ಸವದಲ್ಲಿ ಎಲ್ಲರ ಗಮನ ಸೆಳೆದರು.

ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ವ್ಯಕ್ತಿಗಳ ಈ ರೂಪಕ ವೇಷಧಾರಿ ಬಸವರಾಜ ಬಲಕುಂದಿ ಅವರು ರಾಜ್ಯ, ದೇಶ ಸುತ್ತಿ ಕಿರಿವಯಸ್ಸಿನಲ್ಲಿಯೇ ನಾಡಿನ ಹಿರಿಮೆಗೆ ಗರಿ ಮುಡಿಸುತ್ತಿದ್ದಾರೆ. ಮನೋಜ್ಞ ಹಾವಭಾವ, ಆಕರ್ಷಕ ದಿರಿಸು, ಬಗೆ ಬಗೆ ಆಭರಣ ಧರಿಸಿ ವೇದಿಕೆ ಏರುವ ಇವರು ಯಾವತ್ತೂ ತಾವು ತೊಟ್ಟ ವೇಷಕ್ಕೆ ಜೀವ ತುಂಬದೇ ವೇದಿಕೆ ಕೆಳಗಿಳಿದಿಲ್ಲ!

ಮೂಲತ: ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದ ಇವರು ತಮ್ಮ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕಲೆಯನ್ನು ಆರಾಧಿಸುವುದಕ್ಕೆ ಆರಂಭಿಸಿದ್ದಾರೆ. ಪರಿಣಾಮ ಕಲಾ ದೇವಿಯ ಆಜ್ಞೆಗೆ ಹಣಿಮಣಿದು ಇಲ್ಲಿವರೆಗೆ ರಾಜ್ಯದ 30 ಜಿಲ್ಲೆ, ರಾಷ್ಟೃದ 15 ರಾಜ್ಯ ಹಾಗೂ ವಿಶ್ವದ 10 ರಾಷ್ಟçಗಳಲ್ಲಿ ಬರೋಬ್ಬರಿ 1800ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಕುಚುಪುಡಿಯಲ್ಲಿ ರಾಜ್ಯದ ಮೊದಲ ಸ್ತೀ ವೇಷಧಾರಿ ಪುರುಷ ಅನ್ನವ ಹೆಗ್ಗಳಿಕೆ ಪಡೆದುಕೊಂಡಿರುವ ಬಸವರಾಜ ಅವರು ಇಲ್ಲಿವರೆಗೆ ಕಿತ್ತೂರು ಚನ್ನಮ್ಮ, ಸೀತೆ, ಪಾರ್ವತಿ, ಕಾಳಿ, ದುರ್ಗೆ, ಸತ್ಯಭಾಮೆ ಸೇರಿದಂತೆ ಹತ್ತಾರು ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಸ್ತ್ರೀ ರೂಪಕದಲ್ಲಿ ಜನರನ್ನು ರಂಜಿಸಿದ್ದಾರೆ.

ಕುಚುಪುಡಿ ಮೂಲಕ ರಂಜಿಸುವುದಕ್ಕಾಗಿ ಯಾವುದೇ ಸ್ತ್ರೀ ವೇಷಧರಿಸಿ ನಿಂತರೂ ಬಸವರಾಜ ಅವರು ಆ ಪಾತ್ರವೇ ಜೀವ ತಳೆದು ಬಂದಿದೆಯೇನೋ ಅನ್ನುವಷ್ಟರ ಮಟ್ಟಿಗೆ ಮನೋಜ್ಞ ಅಭಿಯಯದ ಮೂಲಕ ಜನರ ಮನಸೂರೆಗೊಂಡು ಬಿಡುತ್ತಾರೆ. ಯಾವುದಾದರೂ ಒಂದು ರೂಪಕ ಪಾತ್ರ ಪ್ರದರ್ಶನಕ್ಕಾಗಿ ಬಳಸಿದ ಬಟ್ಟೆ, ಒಡವೆಗಳನ್ನು ಮತ್ತೊಂದು ವೇದಿಕೆಯಲ್ಲಿ ಬಳಸದೇ ಜನರಿಗೆ ವಿಭಿನ್ನ ರೂಪದೊಂದಿಗೆ ಮನೋರಂಜನೆ ನೀಡುವ ಉತ್ಸಾಹ ತೋರುತ್ತಾರೆ.

‘ಚಿತ್ರದುರ್ಗದ ಮಠದ ಕಾರ್ಯಕ್ರಮವೊಂದರಲ್ಲಿ ಅಪ್ಪು ಅವರು ನನ್ನ ಸ್ತ್ರೀವೇಷ, ಅಭಿನಯ ನೋಡಿ ಮುಗುಳ್ನಕ್ಕು ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಸಂತೋಷ ವ್ಯಕ್ತಪಡಿಸುವ ಕಲಾವಿದ ಬಲಕುಂದಿ ಅವರು, ‘ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂಬಿಗರ ಚೌಡಯ್ಯ ಜಯಂತಿಗೆ ಕಾರ್ಯಕ್ರಮ ನೀಡುವುದಕ್ಕೆ ಹೋಗಿದ್ದಾಗ ಹಿರಿಯ ನಟಿ ಉಮಾಶ್ರೀ ಅವರಿಗೆ ನಮಸ್ಕಾರ ಮೇಡಂ ಅಂದಾಗ ನಮಸ್ಕಾರ ಅಮ್ಮ ಅಂತ ಮುಗುಳ್ನಕಿದ್ದರು’ ಎಂದು ತಮ್ಮ ಸ್ತ್ರೀ ವೇಷದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.

ಮನಸೂರೆಗೊಳ್ಳುವ ಕುಚುಪುಡಿ ನೃತ್ಯದ ಮೂಲಕ ಬಲಕುಂದಿ ಅವರು ಇಲ್ಲಿವರೆಗೆ ಅನೇಕ ಸಂಘ ಸಂಸ್ಥೆಗಳಿಂದ ನಾಟ್ಯ ಕೌಮುದಿ, ಕಲಾರತ್ನ, ನಾಟ್ಯ ಮಯೂರಿ, ಸೇರಿದಂತೆ ಹಲವು ಬಿರುದು, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ನಾಡು, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆ ಸಂಚಾರಕ್ಕಾಗಿ ಪರ್ಯಟಿಸುತ್ತಿರುವ ಇವರು, ತಮ್ಮದೇ ಎರಡು ನೃತ್ಯ ಶಾಲೆಗಳನ್ನು ನಡೆಸುವುದರೊಂದಿಗೆ ನೃತ್ಯ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಗ್ರಾಮೀಣ ಭಾಗದಲ್ಲಿ ಅನೇಕ ಕಲಾವಿದರಿದ್ದಾರೆ. ಸರ್ಕಾರ ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಹೇಳುವ ಬಲಕುಂದಿ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ದೇಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರ ದೇಶಿ ಕಲಾವಿದರನ್ನು ಹುರುದುಂಬಿಸುವಲ್ಲಿ ಇನ್ನಷ್ಟೂ ಅಧಿಕ ಒತ್ತು ನೀಡಬೇಕಾಗಿದೆ ಅನ್ನುವುದು ಸಾರ್ವಜನಿಕ ವಲಯದ ಸಹಜ ಅಭಿಪ್ರಾಯವೂ ಆಗಿದೆ.

*ಲೇಖನ: ರವಿ ತಳವಾರ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಪ್ರಶಿಕ್ಷಣಾರ್ಥಿ*

**********

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.