ಬೆಳಗಾವಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ಪ್ಯಾರಾ ಈಜುಪಟು ಉಮೇಶ ಖಾಡೆ ಅವರಿಗೆ ೨೦೧೫-೧೬ನೇ ಸಾಲಿನ ಏಕಲವ್ಯ ಪ್ರಶಸ್ತಿ ಲಭಿಸಿದೆ.
ಮೈಸೂರಿನ ಜಿ.ಕೆ.ಗ್ರೌಂಡ್ಸ್ ಅಮೃತ ಮಹೋತ್ಸವ ಭವನದಲ್ಲಿ ಅ.೭ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಏಕಲವ್ಯ ಪ್ರಶಸ್ತಿಯು ₹ ೨ ಲಕ್ಷ ನಗದು, ಸ್ಕ್ರೋಲ್, ಏಕಲವ್ಯನ ಕಂಚಿನ ವಿಗ್ರಹವನ್ನು ಒಳಗೊಂಡಿರುತ್ತದೆ.
ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಉಮೇಶ ಖಾಡೆ ಉತ್ತಮ ನಿರ್ದರ್ಶನ. ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದವರಾದ ಖಾಡೆ ಮೂಗ, ಕಿವುಡರಾಗಿದ್ದು, ಕಡು ಬಡತನ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ೨೦೦೪ರಲ್ಲಿ ಬೆಳಗಾವಿಯ ಸ್ವಿಮರ್ಸ ಕ್ಲಬ್ ಬೆಳಗಾವಿ ಆ್ಯಂಡ್ ಅಕ್ವೇರಿಸ್ ಸ್ವಿಮ್ ಕ್ಲಬ್‌ಗೆ ಸೇರಿ, ಈಜು ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದರು. ರಾಷ್ಟ್ರೀಯ ಮಟ್ಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಉಮೇಶ ಈವರೆಗೆ ಒಟ್ಟು ೧೮ ಚಿನ್ನದ ಪದಕ, ೮ ಬೆಳ್ಳಿ ಪದಕ, ೧೬ ಕಂಚಿನ ಪದಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ, ಉಮೇಶ ಅವರು ಎರಡು ಸಲ ಓಲಂಪಿಕ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಪ್ಯಾರಾ ಈಜುಪಟುವಾಗಿ ಹೊರಹೊಮ್ಮಿದ್ದಾರೆ.
ಪ್ಯಾರಾ ಈಜುಪಟು ಉಮೇಶ ಖಾಡೆ ಅವರ ಸಾಧನೆ ಪರಿಗಣಿಸಿ ಅವರಿಗೆ ಏಕಲವ್ಯ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಖಾಡೆ ಅವರಿಗೆ ಮಾರ್ಗದರ್ಶನ ನೀಡಿದ ತರಬೇತಿದಾರ ಉಮೇಶ ಕಲಘಟಗಿ ಹೇಳಿದ್ದಾರೆ. ರೋಟರಿ ಕಾರ್ಪೋರೇಶನ್ ಸ್ಪೋರ್ಟ್ಸ ಅಕಾಡೆಮಿಯ ಈಜುಕೊಳದಲ್ಲಿ ಉಮೇಶ ಅವರಿಗೆ ತರಬೇತಿನೀಡಲಾಗಿದೆ. ಈಜುಕೊಳದ ತರಬೇತುದಾರರಾದ ರಾಜೇಶ ಶಿಂಧೆ, ಅಕ್ಷಯ ಶೇರೇಗಾರ, ಪ್ರಸಾದ ತಂಗಣಕರ ಮತ್ತು ಅಜಿಂಕ್ಯಾ ಮೆಂಕಡೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸೇರಿದಂತೆ ಹಲವರು ಈ ಸಾಧನೆ ಮಾಡಿದ ಯುವನಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.