Breaking News

ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ,

ಬೆಳಗಾವಿ, ನವೆಂಬರ್ 18 (ಕರ್ನಾಟಕ ವಾರ್ತೆ) ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10 ರಿಂದ 20 ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದ್ದು, ಅಧಿವೇಶನ ಸುಗಮವಾಗಿ ನಡೆಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ (ನ.19) ನಡೆದ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಒಂದು ದಿನ ವಿಸ್ತರಣೆ-ಪ್ರಸ್ತಾವ
ಡಿಸೆಂಬರ್ 10 ರಿಂದ 20 ವರೆಗೆ ಅಧಿವೇಶನ ನಡೆಯಲಿದೆ. ಕಲಾಪಸ ಅವಧಿಯನ್ನು ಇನ್ನೊಂದು ದಿನ ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಅಧಿವೇಶನದ ಅವಧಿಯನ್ನು ಸರ್ಕಾರ ಮತ್ತೊಂದು ದಿನ ವಿಸ್ತರಿಸುವ ವಿಶ್ವಾಸವಿದೆ.
ಒಂದು ವೇಳೆ ವಿಸ್ತರಣೆಗೆ ಒಪ್ಪಿಗೆ ಸಿಕ್ಕರೆ ಡಿಸೆಂಬರ್ 21 ರವರೆಗೆ ವಿಧಾನ ಮಂಡಳದ ಕಲಾಪಗಳು ನಡೆಯಲಿವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜನಪರ ಕಲಾಪ- ನಮ್ಮ ನಿಲುವು
ಡಿಸೆಂಬರ್ 10 ರಿಂದ ನಡೆಯಲಿರುವ ನಡೆಯುವ ಚಳಗಾಲ ಅಧಿವೇಶನದ ಕಲಾಪಗಳು ಜನಪರವಾಗಿ, ಗೌರವಯುತವಾಗಿ ನಡೆಯಬೇಕು ಮತ್ತು ಗುಣಮಟ್ಟದ ಚರ್ಚೆ ನಡೆಯಬೇಕು ಎಂಬುದು ನಮ್ಮ ನಿಲುವು ಇದರಲ್ಲಿ ಯಾವುದೇ ರಾಜೀ ಇಲ್ಲ ಸಭಾಧ್ಯಕ್ಷರಾದ ರಮೇಶ್ ಕುಮಾರ್ ತಿಳಿಸಿದರು.
ಹಾಜರಾತಿ, ಚರ್ಚೆ, ಸದನದಲ್ಲಿ ನಡತೆ ಸೇರಿದಂತೆ ಪ್ರತಿಯೊಂದರಲ್ಲೂ ಗುಣಾತ್ಮಕ ಬದಲಾವಣೆಗೆ ಪ್ರಯತ್ನಿಸಲಾಗುವುದು ಎಂದರು.

ಉ.ಕ.ಚರ್ಚೆಗೆ ಆದ್ಯತೆ:
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಒಂದು ದಿನ ನಿಗದಿಪಡಿಸುವ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸದನ ಕಲಾಪ ಸಲಹಾ ಸಮಿತಿ ಜತೆ ಚರ್ಚಿಸಿ ಉ.ಕ. ವಿಷಯಗಳಿಗೆ ಸೂಕ್ತ ಆದ್ಯತೆ ನೀಡಲಾಗುವುದು ಎಂದರು.
ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆ ಮತ್ತು ಶೂನ್ಯ ಅವಧಿಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಶಾಸಕರು ಪ್ರಸ್ತಾಪಿಸಿದರೆ ಹೆಚ್ಚಿನ ಸಮಯ ನೀಡುವ ಮೂಲಕ ಉ.ಕ. ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು ಎಂದರು.

ಈ ಬಾರಿಯ ಅಧಿವೇಶನದ ಸಂದರ್ಭದಲ್ಲಿ ಊಟ-ವಸತಿ, ಶಿಷ್ಟಾಚಾರ ಪಾಲನೆ, ಭದ್ರತೆ ಸೇರಿದಂತೆ ಯಾವುದೇ ರೀತಿಯ ಅನಾನುಕೂಲ ಉಂಟಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ರಾಜ್ಯದ ಬೇರೆ ಬೇರೆ ಭಾಗದ ಶಾಸಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸುವುದರಿಂದ ವಿಭಿನ್ನ ಶೈಲಿಯ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಇದಕ್ಕೂ ಮುಂಚೆ ಅಧಿಕಾರಿಗಳ ಸಭೆ ನಡೆಸಿದ ಸಭಾಧ್ಯಕ್ಷರು, ಪ್ರತಿವರ್ಷದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪೂರ್ವಸಿದ್ಧತೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಊಟ, ವಸತಿ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು, ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಭದ್ರತೆ, ಶಿಷ್ಟಾಚಾರ ಪಾಲನೆ, ಪೊಲೀಸ್ ಸಿಬ್ಬಂದಿ ವಸತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ತಿಳಿಸಿದರು.
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ವಿಧಾನ ಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ಅವರು ಶುರು ಮಾಡಿದ್ದಾರೆ.ನೀವೂ ಅದನ್ನೇ ಮಾಡೋದು ಒಳ್ಳೆಯದು…!!!

ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.