ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಭೂತರಾಮನಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹೆಣ್ಣು ಸಿಂಹ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ನಿರುಪಮಾ ಎಂಬ 15 ವರ್ಷ ಈ ಹೆಣ್ಣು ಸಿಂಹವು ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು. ಆದರೆ, ಇಂದು ಮಧ್ಯಾಹ್ನ 12.55ಕ್ಕೆ ಚಿಕಿತ್ಸೆ ಫಲಕಾರಿ ಆಗದೇ ಮೃಗಾಲಯದಲ್ಲಿ ಸಾವನ್ನಪ್ಪಿದೆ. ವನ್ಯಜೀವಿ ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ಮಾಡಿ ಮೃಗಾಲಯ ಆವರಣದಲ್ಲೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ವೇಳೆ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೆಶಕ ಮಾರಿಯಾ ಕ್ರಿಸ್ಟೋ ರಾಜಾ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ, ಹಿರಿಯ ವೈದ್ಯಾಧಿಕಾರಿ ಡಾ.ಹನುಮಂತ ಸಣ್ಣಕ್ಕಿ, ತಜ್ಞ ವೈದ್ಯ ಡಾ.ಶ್ರೀಕಾಂತ ಕೋಹಳ್ಳಿ, ಮೃಗಾಲಯದ ವೈದ್ಯ ಡಾ.ನಾಗೇಶ ಹುಯಿಲಗೋಳ ಸೇರಿ ಸಿಬ್ಬಂದಿಗಳು ಇದ್ದರು.