ಬೆಳಗಾವಿ ): ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಶುಕ್ರವಾರ(ಮಾ.12) ನಡೆಯಲಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ವೇದಿಕೆ ಸಜ್ಜಾಗಿದೆ.
ದೇಶದ ಆಯ್ದ 75 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಅಮೃತ ಮಹೋತ್ಸವವನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಲಿದ್ದಾರೆ.
ಕಾರ್ಯಮದ ಹಿನ್ನೆಲೆಯಲ್ಲಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಗುರುವಾರ ಸಂಜೆ ಕಿತ್ತೂರಿಗೆ ಭೇಟಿ ನೀಡಿ ವೇದಿಕೆ ಮತ್ತಿತರ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡ್ರ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಇತಿಹಾಸ ನೆನಪಿಸುವ ಕೆಲಸವನ್ನು ಪ್ರಧಾನಮಂತ್ರಿಗಳು ಮಾಡುತ್ತಿದ್ದಾರೆ. ಇಂದಿನ ಯುವಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಕುರಿತು ತಿಳಿಸಿಕೊಡಲು ಇದೊಂದು ಅವಕಾಶವಾಗಿದೆ ಎಂದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು 50 ಕೋಟಿ ರೂಪಾಯಿ ಅನುದಾನ ನೀಡಿರುವುದಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡ್ರ ಸಂತಸ ವ್ಯಕ್ತಪಡಿಸಿದರು.
ಚನ್ನಮ್ಮನ ನಾಡಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಿತ್ತೂರಿನಲ್ಲಿ ಸಮಾರಂಭ ಏರ್ಪಡಿಸಲಾಗಿದೆ.
ಮುಂದಿನ 75 ವಾರಗಳ ಕಾಲ ಜಿಲ್ಲೆಯಾದ್ಯಂತ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಉದ್ಘಾಟನೆ ಅಂಗವಾಗಿ ಮಾ.12 ರಂದು 75 ಸೈಕ್ಲಿಸ್ಟ್ ಗಳಿಂದ 75 ಕಿ.ಮೀ. ಸೈಕಲ್ ರ್ಯಾಲಿ ನಡೆಯಲಿದೆ.
ಗಾಂಧೀಜಿ, ಪಟೇಲ್ ಹಾಗೂ ಬೋಸ್ ಛಾಯಾಚಿತ್ರ ಪ್ರದರ್ಶನ:
ಇದಲ್ಲದೇ ಮಾ.12 ರಂದು ಕಿತ್ತೂರಿನಲ್ಲಿ ನಡೆಯಲಿರುವ ಮುಖ್ಯ ಸಮಾರಂಭದ ಜತೆಗೆ ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಬಾವಿ(ವೀರಸೌಧ) ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಛಾಯಾಚಿತ್ರ ಪ್ರದರ್ಶನ ಹಾಗೂ ನಗರದ ಸರದಾರ ಪ್ರೌಢಶಾಲೆಯಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ಅದೇ ರೀತಿ ನಿಪ್ಪಾಣಿಯಲ್ಲಿ ಸುಭಾಷ್ ಚಂದ್ರ ಬೋಸ್ ಕುರಿತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಸ್ವಾತಂತ್ರ್ಯ ಯೋಧರ ಪಟ್ಟಿ ಲಭ್ಯವಿದ್ದು, ಅವರ ಮನೆ ಮನೆಗಳಿಗೆ ತೆರಳಿ ಗೌರವಿಸಲಾಗುವುದು. ಸ್ಥಳೀಯ ಸ್ವಾತಂತ್ರ್ಯ ಯೋಧರ ಕುರಿತು ಕೂಡ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.
ನಿಗದಿತ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಧ್ಯವಾದರೆ ದೇಶಭಕ್ತಿ ನಾಟಕಗಳನ್ನು ಪ್ರದರ್ಶಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ವೇದಿಕೆ ಸೇರಿದಂತೆ ಸಿದ್ಧತೆಗಳ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ದಂಡಿಯಾತ್ರೆ ನಡೆಸಿದ ಸ್ಮರಣಾರ್ಥ ಮಾ.12 ರಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.
ಕಿತ್ತೂರಿನಲ್ಲಿ ಸುಮಾರು ಎರಡು ಸಾವಿರ ಜನರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸೈಕಲ್ ರ್ಯಾಲಿ, ವೇದಿಕೆ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಎಚ್.ಡಿ.ಕೋಳೆಕರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಎನ್.ಐ.ಸಿ. ಅಧಿಕಾರಿಗಳಾದ ಸಂಜೀವ್ ಕ್ಷೀರಸಾಗರ, ಶಿರೀಷ್ ಖಡಗದಕೈ ಮತ್ತಿತರರು ಉಪಸ್ಥಿತರಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಎಲ್ಲೆಡೆ ತ್ರಿವರ್ಣ ರಾರಾಜಿಸುತ್ತಿದೆ.
ಕಾರ್ಯಕ್ರಮ ನಡೆಯಲಿರುವ ಕಿತ್ತೂರು ಚನ್ನಮ್ಮ ಕೋಟೆ ಆವರಣದಲ್ಲಿ ತ್ರಿವರ್ಣದಿಂದ ಅಲಂಕೃತ ಭವ್ಯವಾದ ವೇದಿಕೆ ಸಿದ್ಧಗೊಂಡಿರುತ್ತದೆ.
*****