ಮನೆಹಾನಿ ಕುರಿತು ತಪ್ಪು ಮಾಹಿತಿ ನೀಡಿದ ನಾಲ್ಕು ಜನರ ಅಮಾನತು: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಬೆಳಗಾವಿ,
ಅತಿವೃಷ್ಟಿಯಿಂದ ಹಾನಿಗೊಳಗಾದ ವಾಣಿಜ್ಯ ಕಟ್ಟಡಕ್ಕೆ ಮನೆಹಾನಿ ಎಂದು ತಪ್ಪು ವರದಿ ನೀಡಿದ ಆರೋಪದ ಮೇಲೆ ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆಯ ನಾಲ್ಕು ಜನರನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅನಗೋಳದ ಗ್ರಾಮ ಲೆಕ್ಕಿಗ ಎಸ್.ಜಿ.ಜೋಗಳೇಕರ, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕ ಸಿ.ಐ.ಬಿ.ಪಾಟೀಲ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಸಿ.ಮಠಪತಿ ಇವರನ್ನು ಅಮಾನತುಗೊಳಿಸಲಾಗಿದೆ.
ಸದರಿ ಅಧಿಕಾರಿ ಮತ್ತು ಸಿಬ್ಬಂದಿ ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಅನಗೋಳದ ಅರುಣ ಎನ್. ಗಾವಡೆ ಎಂಬುವರ ಗ್ಯಾರೇಜ್ ಕಟ್ಟಡವನ್ನು ವಾಸದ ಮನೆ ಎಂದು ವರದಿ ನೀಡಿದ್ದರಿಂದ ಸರ್ಕಾರದಿಂದ ಅವರ ಖಾತೆಗೆ ಒಂದು ಲಕ್ಷ ರೂಪಾಯಿ ಮೊದಲ ಕಂತಿನ ಪರಿಹಾರದ ಹಣವನ್ನು ಜಮೆ ಮಾಡಲಾಗಿತ್ತು.
ತಪ್ಪು ವರದಿಯಿಂದ ನೀಡಿದ್ದರಿಂದ ಅನರ್ಹರಿಗೆ ಪರಿಹಾರದ ಮೊತ್ತ ಜಮೆಯಾಗಿರುತ್ತದೆ. ಆದಕಾರಣ ನಾಲ್ಕು ಜನರನ್ನು ಅಮಾನತುತೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
***