Breaking News
Home / Breaking News / ತಂದೆ ಇಲ್ಲ,ತಾಯಿಗೆ ಅನಾರೋಗ್ಯ,ಇರೋದು ಬಾಡಿಗೆ ಮನೆಯಲ್ಲಿ….!!

ತಂದೆ ಇಲ್ಲ,ತಾಯಿಗೆ ಅನಾರೋಗ್ಯ,ಇರೋದು ಬಾಡಿಗೆ ಮನೆಯಲ್ಲಿ….!!

ಬೈಲವಾಡ ಗ್ರಾಮದಲ್ಲಿ  ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಧ್ವನಿಯಾದರು,ಈ ಗ್ರಾಮದ ಯುವಕ ಡಿಸಿ ಹಿರೇಮಠ ಅವರನ್ನು ಭೇಟಿಯಾಗಿ,ತಂದೆ ಇಲ್ಲ ತಾಯಿಗೆ ಅನಾರೋಗ್ಯ,ನಾನು ಇರೋದು ಬಾಡಿಗೆ ಮನೆಯಲ್ಲಿ ನನಗೊಂದು ಆಶ್ರಯ ಮನೆ ಕೊಡಿ ಎಂದು ಗ್ರಾಮದ ಬಾಲಕನೊಬ್ಬ ಡಿಸಿಗೆ ಮನವಿ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಲಿರುವ ಜಿಲ್ಲಾಧಿಕಾರಿಗಳು ಈ ಬಾಲಕನ ಸಮಸ್ಯೆಗೆ ಸ್ಪಂದನೆ ಮಾಡುತ್ತಾರೆಯೋ ಇಲ್ಲವೋ ಕಾದು ನೋಡೋಣ

ಬೆಳಗಾವಿ,-ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಆರಂಭಿಸಿದರು.

ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು ಸರ್ಕಾರದ ಮಾರ್ಗಸೂಚಿಯಂತೆ ಶನಿವಾರ (ಫೆ.20) ಮೊದಲ ಗ್ರಾಮ‌ವಾಸ್ತವ್ಯ ಕಾರ್ಯಕ್ರಮ ಆರಂಭಗೊಂಡಿತು.

ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ ಜಿಲ್ಲಾಧಿಕಾರಿಗಳು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರ ಪದವಿ ಪೂರ್ವ ಮಹಾವಿದ್ಯಾಲಯದ ನೂತನ‌ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದಾದ ಬಳಿಕ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.
ವಸತಿನಿಲಯದ ಊಟದ ಕೋಣೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಉಪಾಹಾರ ಸೇವಿಸಿದರು.

ಗುಂಡೇಟಿಗೆ ಬಲಿಯಾದ ಸಿ.ಆರ್.ಪಿ.ಎಫ್. ಹುತಾತ್ಮ ಯೋಧ ಮಂಜುನಾಥ ಮುದುಕನಗೌಡರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು.

ಅಲ್ಲಿಂದ ಗ್ರಾಮ ಪ್ರದಕ್ಷಿಣೆ ಆರಂಭಿಸಿದ ಅವರು ಮೊದಲಿಗೆ ಹರಿಜನಕೇರಿಯ ಮನೆಗಳಿಗೆ ಭೇಟಿ ನೀಡಿದರು.
ಇದೇ ವೇಳೆ ಕರಿಯಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿ ಹಿರೇಮಠ ಅವರು ಭೂಮಿಪೂಜೆ ನೆರವೇರಿಸಿದರು.

ಕೈಬರಹದ ಮನವಿ ನೀಡಿದ ಬಾಲಕ!:

ಶೈಕ್ಷಣಿಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಂದೆ ಕಳೆದುಕೊಂಡಿರುವ ಮೂರನೇ ತರಗತಿಯ ಬಾಲಕ ಕಿರಣ ಬಸವರಾಜ ಕೋಣಿಣ್ಣವರ ಕೈಬರಹದ ಮನವಿಪತ್ರ ನೀಡಿದನು.
ತಂದೆ ಇಲ್ಲ; ಅನಾರೋಗ್ಯ ಪೀಡಿತ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅಕ್ಕ ಕೀರ್ತಿ ಸಂಪಗಾಂವ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದಾಳೆ.
ಸಮೀಪದ ಕಾನ್ವೆಂಟಿನಲ್ಲಿ ಓದುತ್ತಿದ್ದೇನೆ. ಆದ್ದರಿಂದ ಶೈಕ್ಷಣಿಕ ವೆಚ್ಚ ಭರಿಸುವುದು ಕಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ.

ಬಾಡಿಗೆ ಮನೆಯಲ್ಲಿ ಇದ್ದಾರೆ. ಮನೆ ಖರ್ಚು ನಿಭಾಯಿಸಲು ಕಷ್ಟ ಎಂದು ಅಜ್ಜ ಸೋಮನಗೌಡ ದೊಡ್ಡವೀರಪ್ಪನವರ ಅಲವತ್ತುಕೊಂಡರು.

ಬಾಲಕನ ಮನವಿ ಸ್ವೀಕರಿಸಿದ ಬಳಿಕ ತಲೆ ಸವರಿ ಮಾತನಾಡಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಭರವಸೆ ನೀಡಿದರು.

ಗೌಡರ ಓಣಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು. ಸ್ವಾತಂತ್ರ್ಯ ಯೋಧರ ಪಿಂಚಣಿ; ವಿದ್ಯುತ್ ಕಂಬ ತೆರವು; ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರು ಮನವಿ ಮಾಡಿಕೊಂಡರು.

ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕಲ್ಪಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಶಾಸಕ ಮಹಾಂತೇಶ ಕೌಜಲಗಿ ಅವರು ಜನರಿಗೆ ತಿಳಿಸಿದರು

ತದನಂತರ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ಜನರ ಅಹವಾಲು ಆಲಿಸಿದರು.
ಗ್ರಾಮದ ವಿವಿಧ ಕಡೆಗಳಲ್ಲಿ ಮತ್ತು ಹೊಲಗಳಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದಿರುವ ವಿದ್ಯುತ್ ತಂತಿಗಳಿಂದ ಅಪಾಯ ಎದುರಾಗಿದೆ. ಆದ್ದರಿಂದ ತಕ್ಷಣವೇ ಇದನ್ನು ಸರಿಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.

ಈ ಸಮಸ್ಯೆಯನ್ನು ಒಂದು ವಾರದೊಳಗೆ ಸರಿಪಡಿಸಿ ವರದಿ‌ ಸಲ್ಲಿಸಬೇಕು ಎಂದು ಹೆಸ್ಕಾಂ ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚನೆ ನೀಡಿದರು. ನಂತರ ಗಾಡದಾರ ಓಣಿಯಲ್ಲಿ ಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು.

ನಾಯಕರ‌ ಓಣಿಯ ಜನರು ಮಳೆಗಾಲದಲ್ಲಿ ನೀರು ಹರಿಯಲು ಜಾಗೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಸೆಳೆದರು.

ಸ್ವತಃ ಸಮಸ್ಯೆಗಳ‌ ಪಟ್ಟಿ‌ ಮಾಡಿದ ಡಿಸಿ!:

ಬೈಲವಾಡ ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಸುಮಾರು ಎರಡು ತಾಸುಗಳ‌ ಕಾಲ ಸುತ್ತಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜನರು ಹೇಳುವ ಸಮಸ್ಯೆಗಳನ್ನು ಹಾಗೂ ಅವರ ಹೆಸರುಗಳನ್ನು ಸ್ವತಃ ತಮ್ಮ ಡೈರಿಯಲ್ಲಿ ಬರೆದುಕೊಂಡರು.

ಮಾಸಾಶನ, ರೇಷನ್, ಕುಡಿಯುವ ನೀರು, ವಸತಿ, ಸ್ವಚ್ಛತೆ, ಗಟಾರು, ಶೌಚಾಲಯ ಮತ್ತಿತರ ಸಮಸ್ಯೆಗಳನ್ನು ಜನರು‌ ಹೇಳಿಕೊಂಡಾಗ ಸಂಪೂರ್ಣ ವಿವರಗಳನ್ನು ಬರೆದುಕೊಂಡ ಜಿಲ್ಲಾಧಿಕಾರಿಗಳು, ಆದಷ್ಟು ಬೇಗನೆ ಬಗೆಹರಿಸುವುದಾಗಿ ತಿಳಿಸಿದರು.

ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ದನಿಗೂಡಿಸಿದ ಶಾಸಕ‌ ಮಹಾಂತೇಶ ಕೌಜಲಗಿ ಅವರು ಕೂಡ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದರ ಜತೆಗೆ ಕೂಡಲೇ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ಚನ್ನನಸಪ್ಪ ಕೊಡ್ಲಿ, ಕೃಷಿ ಇಲಾಖೆಯ ಜಂಟಿ‌ ನಿರ್ದೇಶಕರಾದ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ರವೀಂದ್ರ ಹಕಾಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***

Check Also

ಬೆಳಗಾವಿಯ ನಕಲಿ ಐಡಿ ಪ್ರೀಂಟೀಂಗ್ ಪ್ರೆಸ್, ಮೇಲೆ ಪೋಲೀಸರ ದಾಳಿ….

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಖಡಕ್ ಲಾಕ್ ಡೌನ್ ಇದೆ,ಅಲ್ಲಲ್ಲಿ ಖಾಕಿ ಪಡೆ ಗಂಭೀರವಾಗಿ ವಾಹನ ಸವಾರರನ್ನು ತಪಾಸಣೆ ಮಾಡುತ್ತಿದೆ.ಹೀಗಾಗಿ ಕೆಲವರು ನಕಲಿ …

Leave a Reply

Your email address will not be published. Required fields are marked *