Breaking News
Home / Breaking News / ದೆಹಲಿಯ ನಿಜಾಮುದ್ದೀನ್ ನಂಟು: ಬೆಳಗಾವಿಯ ಒಟ್ಟು 32 ಜನರ ಸ್ಯಾಂಪಲ್ ಕಲೆಕ್ಟ್

ದೆಹಲಿಯ ನಿಜಾಮುದ್ದೀನ್ ನಂಟು: ಬೆಳಗಾವಿಯ ಒಟ್ಟು 32 ಜನರ ಸ್ಯಾಂಪಲ್ ಕಲೆಕ್ಟ್

ಸಾರಿಗೆ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸುದ್ದಿಗಾರರ ಜತೆ ಮಾತನಾಡಿದ ಪ್ರಮುಖಾಂಶಗಳು..

* ದೆಹಲಿಯ ಮರ್ಕಜ್ ಧಾರ್ಮಿಕ ಸಭೆ ಮತ್ತು ಆ ಸಂದರ್ಭದಲ್ಲಿ ಅಲ್ಲಿದ್ದ ಬೆಳಗಾವಿ ಜಿಲ್ಲೆಯ ೬೨ ಜನರು ಮಾಹಿತಿ ಲಭ್ಯ.

* ೩೨ ಜನರ ಮಾದರಿಯನ್ನು ನಾಳೆ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ.

* ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸಾರ್ವಜನಿಕರಿಗೆ ಅಗತ್ಯ ದಿನಸಿ, ತರಕಾರಿಗಳನ್ನು ಪೂರೈಸಲು ಆದ್ಯತೆ.

ಸಾರಿಗೆ ಇಲಾಖೆ

* ಮಾ.೩೧ ರೊಳಗೆ ಬಿ.ಎಸ್.೪ ನೋಂದಣಿಗೆ ಸುಪ್ರೀಂಕೋರ್ಟ್ ಗಡುವು ನೀಡಿತ್ತು.

* ಕರೊನಾ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿತ್ತು.

* ನೋಂದಣಿಗೆ ಏ.೩೦ ರವರೆಗೆ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ.

* ವಾಹನವನ್ನು ಖರೀದಿಸಿರುವವರು ಆನ್ ಲೈನ್ ಮೂಲಕ ಅಫಿಡವಿಟ್ ಸಲ್ಲಿಸಿದರೆ ಏ.೩೦ ರೊಳಗೆ ನೋಂದಣಿಗೆ ಅವಕಾಶವಿರುತ್ತದೆ.

ಕೋವಿಡ್-೧೯ ತಡೆಗಟ್ಟುವಿಕೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆ

“ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ವಹಿಸಲು ಸೂಚನೆ”

ಬೆಳಗಾವಿ, ಏ.೧(ಕರ್ನಾಟಕ ವಾರ್ತೆ): ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ದಿನಸಿ, ತರಕಾರಿ ಮತ್ತಿತರ ಅಗತ್ಯ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು. ನಗರ ಪ್ರದೇಶಗಳಲ್ಲಿ ಮನೆ ಮನೆಗೆ ಪಡಿತರ ಧಾನ್ಯ ಪೂರೈಸುವ ಬಗ್ಗೆ ಪರಿಶೀಲಿಸಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸೂಚನೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ (ಏ.೧) ಸಂಜೆ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸುದೈವದಿಂದ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಆದರೆ ಪಾಸಿಟಿವ್ ಬಂದಿಲ್ಲ ಎಂದು ಉದಾಸೀನತೆ ತೋರದೇ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ನಗರ ಪ್ರದೇಶಗಳಲ್ಲಿ ಪಡಿತರ ಧಾನ್ಯವನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ನೆರವಿನಿಂದ ಪಡಿತರವನ್ನು ಮನೆ ಬಾಗಿಲಿಗೆ ಕಳಿಸುವ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಈ ರೀತಿ ಕಳುಹಿಸುವ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು.

ವೆಂಟಿಲೇಟರ್ಸ್, ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಮತ್ತಿತರ ವೈದ್ಯಕೀಯ ಸಾಮಗ್ರಿಗಳ ಲಭ್ಯತೆ ಹಾಗೂ ಸರ್ಕಾರಕ್ಕೆ ಕಳಿಸಲಾಗಿರುವ ಪ್ರಸ್ತಾವನೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ವೈದ್ಯಕೀಯ ಸಿಬ್ಬಂದಿ ಹಾಗೂ ಅವಶ್ಯಕ ಸೇವೆಯಲ್ಲಿ ತೊಡಗಿಕೊಂಡಿರುವ ಆಧಿಕಾರಿ ಹಾಗೂ ಸಿಬ್ಬಂದಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊರತೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಅದೇ ರೀತಿ ಮರ್ಕಜ್ ಧಾರ್ಮಿಕ ಸಭೆಯಿಂದ ಜಿಲ್ಲೆಗೆ ಹಿಂದಿರುಗಿದ ಜನರನ್ನು ಗುರುತಿಸಿ ವೈದ್ಯಕೀಯ ತಪಾಸಣೆ ನಡೆಸಬೇಕು. ಹೀಗೆ ಆಗಮಿಸಿರುವ ಜನರ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಸೋಂಕು ಹರಡದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ ನೀಡಿದರು.

ಕೋವಿಡ್-೧೯ ಹರಡುವಿಕೆ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಯಾವುದಾದರೂ ನಿರ್ಧಾರ ಕೈಗೊಳ್ಳಬೇಕಿದ್ದರೆ ತಮ್ಮ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈಗಾಗಲೇ ಜಿಲ್ಲೆಗೆ ಪ್ರವೇಶಿಸಿರುವ ವಲಸೆ ಕಾರ್ಮಿಕರಿಗೆ ವಸತಿ ಮತ್ತು ಊಟೋಪಹಾರದ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

೨೦೦ ಹಾಸಿಗೆಗಳ ಕೋವಿಡ್ ಆಸ್ಪತ್ರೆ:

ಪ್ರತ್ಯೇಕ ೨೦೦ ಹಾಸಿಗೆಗಳ ಬಿಮ್ಸ್ ಅಸ್ಪತ್ರೆಯನ್ನು ಕೋವಿಡ್-೧೯ ಆಸ್ಪತ್ರೆ ಎಂದು ಅಧಿಸೂಚಿಸಲಾಗಿದೆ. ಸಾಮಾನ್ಯ ಜನರು ಅಥವಾ ರೋಗಿಗಳಿಗೆ ತೊಂದರೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಹಾಪಕಾಮ್ಸ್ ಮತ್ತು ‌ಕೆಲ ಖಾಸಗಿ ವಾಹನಗಳ ಮೂಲಕ ಬಡಾವಣೆಗಳಿಗೆ ತರಕಾರಿ ಕಳಿಸಲಾಗುತ್ತಿದೆ ಎಂದರು.
ಇದೇ ರೀತಿ ನಗರಪ್ರದೇಶಗಳಲ್ಲಿ ಮನೆ ಮನೆಗೆ ಪಡಿತರ ಧಾನ್ಯ ವಿತರಣೆಗೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
****

***

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *