ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ 2,500 ಕೋಟಿ ರೂ. ಕೇಳಿದವರಾರು ? ಕಳುಹಿಸಿದವರಾರು ಎನ್ನುವುದನ್ನು ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಅಥವಾ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದರು.
ಯತ್ನಾಳ್ ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಂಥವರೇ 2,500 ಕೋಟಿ ರೂ. ಕೇಳಿದ್ದರು ಎಂದು ಹೇಳಿದ್ದಾರೆ. ಯಾರು ಕೇಳಿದರು, ಕಳುಹಿಸಿದವರು ಯಾರು? ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಷ್ಟು ಕೊಟ್ಟಿದ್ದರು ಎನ್ನುವುದು ತನಿಖೆ ಆಗಬೇಕು ಎಂದರು.
‘ಹಾಲಿ ಮಂತ್ರಿಯಾಗಿರುವವರು ಆ ಸ್ಥಾನಕ್ಕಾಗಿ ಕೊಟ್ಟಿದ್ದೆಷ್ಟು? ಯತ್ನಾಳ್ ಬಳಿಗೆ ಕಳುಹಿಸಿದ್ದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಧ್ಯಕ್ಷರೋ? ಅಮಿತ್ ಶಾ ಕಳುಹಿಸಿದ್ದರೋ?’ ಎಂದು ಕೇಳಿದರು.
ಯತ್ನಾಳ್ ಹೇಳಿಕೆಯಲ್ಲಿ ಸತ್ಯವಿದೆ ಎಂದುಕೊಂಡಿದ್ದೇನೆ. ಬೊಮ್ಮಾಯಿ ಎಷ್ಟು ಹಣ ಕೊಟ್ಟು ಬಂದರು? ಆ ಹಣ ಹೇಗೆ ಬಂತು ಎನ್ನುವುದು ಜನರಿಗೆ ಗೊತ್ತಾಗಬೇಕಿದೆ’ ಎಂದರು.
ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರ. ಇಷ್ಟೊಂದು ಹಗರಣ ಯಾವ ಕಾಲದಲ್ಲೂ ಆಗಿರಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಭ್ರಷ್ಟಾಚಾರ ನೋಡಿರಲಿಲ್ಲ. ನೇಮಕಾತಿ ನಡೆಯುವ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಶೇ 40ರಷ್ಟು ಪರ್ಸೆಂಟೇಜ್ ಸರ್ಕಾರವಿದು ಎಂದು ಆರೋಪಿಸಿದರು.