ಬೆಳಗಾವಿ :ಒಂದು ಕಾಲದಲ್ಲಿ ತಮ್ಮ ಪರಮಶಿಷ್ಯರಾಗಿದ್ದ ರಮೇಶ ಜಾರಕಿಹೊಳಿ ಅವರು ಪ್ರತಿನಿಧಿಸುವ ಗೋಕಾಕ ಮತಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬೆಳಗಾವಿ ಜಿಲ್ಲೆಯ ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ. ಏಪ್ರಿಲ್ 24 ಹಾಗೂ 25 ರಂದು ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಿದ್ದರಾಮಯ್ಯ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಏಪ್ರಿಲ್ 24 ರಂದು ಬೆಳಗ್ಗೆ 11ಕ್ಕೆ ಗೋಕಾಕನಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಈ ಬಾರಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ನಂತರ ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಬಾಲಚಂದ್ರ ಜಾರಕಿಹೊಳಿಯವರ ಪ್ರತಿನಿಧಿಸುವ ಅರಭಾವಿ ಮತಕ್ಷೇತ್ರದಲ್ಲಿ ಇನ್ನೊಂದು ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ ಹಾಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಬೈಲಹೊಂಗಲದಲ್ಲಿ ಮಹಾಂತೇಶ್ ಕೌಜಲಗಿ ಅವರ ಪರವಾಗಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 5:30 ಕ್ಕೆ ಸವದತ್ತಿ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದು ವಿಶ್ವಾಸ ವೈದ್ಯ ಅವರ ಪರವಾಗಿ ಮತಯಾಚಿಸಲಿದ್ದಾರೆ.
ಏಪ್ರಿಲ್ 25 ರಂದು ಬೆಳಗ್ಗೆ 10:30 ಕ್ಕೆ ಸವದತ್ತಿಯಿಂದ ಹೊರಟು ಅಥಣಿ ತಾಲೂಕಿನ ಮದಬಾವಿಗೆ ಆಗಮಿಸಿ ಅಲ್ಲಿ
ಬೆಳಗ್ಗೆ 11 ಕ್ಕೆ ಪ್ರಚಾರ ಮಾಡಲಿದ್ದಾರೆ.
ಮಧ್ಯಾಹ್ನ 1:00 ಗೆ ಬಿಜೆಪಿ ಶಾಸಕ ಪಿ. ರಾಜು ಪ್ರತಿನಿಧಿಸುತ್ತಿರುವ ಕುಡಚಿ ಮತಕ್ಷೇತ್ರದ ಹಾರೂಗೇರಿಯಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದು ರಾಜು ಅವರ ವಿರುದ್ಧ ಈ ಬಾರಿ ಸಿದ್ದರಾಮಯ್ಯ ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಬಹುತೇಕ ಖಚಿತವಾಗಿದೆ.
3:15 ಕ್ಕೆ
ಕಂಕಣವಾಡಿಯಲ್ಲಿ ಸಾರ್ವಜನಿಕ ಸಭೆ, ಸಂಜೆ 5:30 ಕ್ಕೆ ಬಿಜೆಪಿಯ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ನಿಪ್ಪಾಣಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದು ಅಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕಾಕಸಾಹೇಬ್ ಪಾಟೀಲ ಪರವಾಗಿ ಪ್ರಚಾರ ಮಾಡಲಿದ್ದಾರೆ. ರಾತ್ರಿ 9:00ಗೆ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಮಾಡುವವರು. ಏಪ್ರಿಲ್ 26ರಂದು ಬೆಳಗಾವಿಯಿಂದ ಹೂವಿನ ಹಡಗಲಿಗೆ ತೆರಳಿ ಆ ಭಾಗದಲ್ಲಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.