ಬೆಳಗಾವಿ-ರಾಜಗಂಸಗಡ ಕೋಟೆ ಅಭಿವೃದ್ಧಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ ಆಗಲೇಬೇಕು ಎಂದು ಜಿದ್ದಿಗೆ ಬಿದ್ದಿರುವ ಸಾಹುಕಾರ್ ರಮೇಶ್ ಜಾರಕಿಹೊಳಿ,ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶಾಕ್ ಕೊಟ್ಟಿದ್ದಾರೆ.
ಮಾರ್ಚ್ 2ರಂದು ರಾಜಹಂಸಗಡ ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಅಹ್ವಾನಿಸಿದ್ದು, ಬೊಮ್ಮಾಯಿರಿಂದ ರಾಜಹಂಸಗಡ ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ನಿರ್ಧಾರ ಮಾಡಿದ್ದಾರೆ
ಸಿಎಂ ಕೈಯಿಂದಲೇ ಶಿವಾಜಿ ಪ್ರತಿಮೆ ಲೋಕಾರ್ಪಣೆ ಹಠಕ್ಕೆ ಬಿದ್ದಿದ್ದ ಸಾಹುಕಾರ್,ಮಾರ್ಚ್ 2ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಗೆ ದಿನಾಂಕ ನಿಗದಿ ಮಾಡುವಲ್ಲಿ ಯಶಸ್ವಿಯಾಗಿದ್ದು,ಈ ಕಾರ್ಯಕ್ರಮಕ್ಕೆ ಬರಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ.ಮಾರ್ಚ್ 2ರಂದು ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಹಲವರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗ್ತಾರೆ.
ನಾಳೆ ಬಿಜೆಪಿ ನಾಯಕರಿಂದ ಪೂರ್ವಭಾವಿ ಸಭೆ
ನಾಳೆ ಶನಿವಾರ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಕಚೇರಿಯಲ್ಲಿ ರಾಜಹಂಸಗಡ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ನಡೆಯಲಿದೆ.ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ,ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಸೇರಿ ಹಲವರು ಭಾಗಿ ಆಗಲಿದ್ದಾರೆ.ಈ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಬರ್ತಾರೆ.
ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ತಾರಾ??
ರಾಜಹಂಸಗಡದ ಶಿವಾಜಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದದಿನದಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ? ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ಛತ್ರಪತಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಕ್ರೆಡಿಟ್ ವಾರ್ ಏರ್ಪಟ್ಟಿತ್ತು,ಮಾರ್ಚ್ 5ರಂದು ಶಿವಾಜಿ ಪ್ರತಿಮೆ ಲೋಕಾರ್ಪಣೆಗೆ ನಿರ್ಧರಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನಿಸಲು ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಧರಿಸಿದ್ದರು.ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.ಮಾಧ್ಯಮ ಪ್ರಕಟಣೆ ನೋಡಿ ಸಿಡಿದೆದ್ದಿದ್ದ ರಮೇಶ್ ಜಾರಕಿಹೊಳಿ, ಇತರ ಬಿಜೆಪಿನಾಯಕರು,ಶಿಷ್ಟಾಚಾರ ಪ್ರಕಾರ ಸರ್ಕಾರದ ವತಿಯಿಂದ ಪ್ರತಿಮೆ ಲೋಕಾರ್ಪಣೆಗೆ ಪಟ್ಟು ಹಿಡಿದಿದ್ದರು.
ಹೆಬ್ಬಾಳಕರ ಅವರಿಂದಲೂ ಕಾರ್ಯಕ್ರಮ?
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ಅನುದಾನದಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಶಿವಾಜಿ ಪ್ರತಿಮೆ,ನಿಗದಿಯಂತೆ ಮಾರ್ಚ್ 4 & 5ರಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವತಿಯಿಂದಲೂ ಕಾರ್ಯಕ್ರಮ ಆಯೋಜನೆಗೆ ಸಿದ್ದತೆ ನಡೆದಿದೆ.ಎರಡೆರಡು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆಯಾ ಐತಿಹಾಸಿಕ ರಾಜಹಂಸಗಡ ಕೋಟೆ? ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾರ್ಚ 2 ರಂದು ನಡೆಯುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರಾ ಅಥವಾ ಅವರು ಮಾರ್ಚ್ 5 ರಂದು ಪ್ರತ್ಯೇಕವಾಗಿ ಕಾರ್ಯಕ್ರಮ ಮಾಡ್ತಾರಾ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.