ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನದ ಪ್ರಗತಿ ಪರೀಶಿಲನಾ ಸಭೆ
—————————————–
ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ವಿಶೇಷ ಗಮನ
: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ಬೆಳಗಾವಿ,-: ಕೇಂದ್ರ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಸರಕಾರದ ಇತರ ಯೋಜನೆಗಳ ಜೊತೆ 15 ಅಂಶಗಳ ಕಲ್ಯಾಣ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಬೇಕು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಅ.01) ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಉಸ್ತುವಾರಿಗಾಗಿ ಸರಕಾರದಿಂದ ಚುನಾಯಿತ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಗಳ ಗುರಿ ಸಾಧನೆಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಬೇಕು ಎಂದು ಅವರು ತಿಳಿಸಿದರು.
ಅನುದಾನ ಬಿಡುಗಡೆಯಾದ ತಕ್ಷಣ ಕಾರ್ಯ ಕೈಗೊಳ್ಳಿ:
ಎಲ್ಲ ಇಲಾಖೆಗಳಲ್ಲಿ ಅನುಷ್ಠಾನದಲ್ಲಿರುವ ಯೋಜನೆಗಳನ್ನು ಅನುದಾನ ಬಿಡುಗಡೆಯಾದ ತಕ್ಷಣ ಕ್ರಮ ಕೈಗೊಳ್ಳಬೇಕು. ಗುರಿ ಸಾಧನೆಗಾಗಿ ಸೂಕ್ತವಾದ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಪಸಂಖ್ಯಾತರ ವಸತಿ ಯೋಜನೆ ಹಾಗೂ ರೇಷ್ಮೆ ಇಲಾಖೆಯ ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ, ತ್ರೈಮಾಸಿಕ ಗುರಿ ಸಾಧಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಕಾರ್ಯಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಎಲ್ಲ ಇಲಾಖೆಗಳು ನಿಗದಿತ ಗುರಿ ಸಾಧಿಸಲು ಕಾರ್ಯ ನಿರ್ವಹಿಸಬೇಕು. ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಕೋವಿಡ್ ಕಾರಣದಿಂದ ಪ್ರಗತಿ ಸಾಧಿಸಲು ಸಾಧ್ಯವಾಗದ ಯೋಜನೆಗಳ ಬಗ್ಗೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲಸಿಕಾಕರಣದಲ್ಲಿ ಶೇ.97% ರಷ್ಟು ಸಾಧನೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, ಇದುವರೆಗೆ ಶೇ.97 ರಷ್ಟು ಮೊದಲ ಡೋಸ್ ಹಾಗೂ ಶೇ.46 ರಷ್ಟು ಎರಡನೆಯ ಡೋಸ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಡಾ.ಅಬ್ದುಲ್ ರಶೀದ್ ಮಿರ್ಜನ್ನವರ ಮಾತನಾಡಿ,
ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರಿಗೆ ಆಯ್.ಎ.ಎಸ್., ಕೆ.ಎ.ಎಸ್.,ಬ್ಯಾಂಕಿಂಗ್ ಪರೀಕ್ಷೆ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಧಾರವಾಡ, ಬೆಂಗಳೂರು ಮತ್ತು ಹಲವು ಜಿಲ್ಲೆಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಭೆಯಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಲ್ಯಾಣ ಕಾರ್ಯಕ್ರಮದ ಜಿಲ್ಲಾ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
****