Breaking News
Home / Breaking News / ಖಾಸಗಿ ಆಸ್ಪತ್ರೆಗಳು ತೆರೆಯಲಿ,ಅವರಿಗೂ ಪಾಸ್ ಕೊಡಿ- ಜಗದೀಶ್ ಶೆಟ್ಟರ್

ಖಾಸಗಿ ಆಸ್ಪತ್ರೆಗಳು ತೆರೆಯಲಿ,ಅವರಿಗೂ ಪಾಸ್ ಕೊಡಿ- ಜಗದೀಶ್ ಶೆಟ್ಟರ್

ಬೆಳಗಾವಿ, ಏ.೪(ಕರ್ನಾಟಕ ವಾರ್ತೆ): ಲಾಕ್ ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಬಂದೋಸ್ತ್ ಮತ್ತಿತರ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಯಂತ್ರಿಸಬೇಕು. ಜನರಿಗೆ ದಿನಬಳಕೆ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅನಾನುಕೂಲ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶೆಟ್ಟರ್ ನಿರ್ದೇಶನ ನೀಡಿದರು.

ಕೋವಿಡ್ ೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.೪) ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ಕಂಡುಬಂದಿರುವುದರಿಂದ ಸೋಂಕು ಹರಡದಂತೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಮಿಕರು, ಅಲೆಮಾರಿಗಳು ಮತ್ತು ನಿರ್ಗತಿಕರಿಗೆ ವಸತಿ ಮತ್ತು ಊಟೋಪಹಾರದ ವ್ಯವಸ್ಥೆ ಬಗ್ಗೆ ಸಚಿವ ಶೆಟ್ಟರ್ ಮಾಹಿತಿಯನ್ನು ಪಡೆದುಕೊಂಡರು.

ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಎಲ್ಲ ಬಗೆಯ ನೆರವನ್ನು ಸರ್ಕಾರ ನೀಡಲಿದೆ.
ದಿನಸಿ, ತರಕಾರಿ ಮತ್ತಿತರ ಅಗತ್ಯವಿರುವ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸಲು ಈಗಿರುವ ವ್ಯವಸ್ಥೆ ಮುಂದುವರಿಸುವಂತೆ ಸಚಿವರು ತಿಳಿಸಿದರು.

ಖಾಸಗಿ ವೈದ್ಯಕೀಯ ಸೇವೆ; ಪಾಸ್ ನೀಡಲು ನಿರ್ದೇಶನ:

ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗೆ ಮುಂದಾಗುವ ಖಾಸಗಿ ವೈದ್ಯರು ಮತ್ತು ಕ್ಲಿನಿಕ್ ಗಳಿಗೆ ಪಾಸ್ ಸೇರಿಂದತೆ ಅಗತ್ಯ ನೆರವು ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರಾದ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.
ಸರ್ಕಾರದ ಮಾರ್ಗಸೂಚಿಯ ಪ್ರಕಾರ ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಉಚಿತ ಹಾಲು ವಿತರಣೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಉಚಿತ ಹಾಲು ವಿತರಣೆ ಹೊಸದಾಗಿ ಆರಂಭಿಸಿರುವುದರಿಂದ ಮೊದಲ ಒಂದೆರಡು ದಿನಗಳಲ್ಲಿ ತೊಂದರೆ ಕಂಡುಬರುವುದು ಸಹಜ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹಾಲು ವಿತರಣೆಗೆ ಸಂಬಂಧಿಸಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಕೊಳಗೇರಿಗಳಲ್ಲಿನ ಕುಟುಂಬಗಳ ಮಾಹಿತಿಯನ್ನು ನೀಡಿದರೆ ಕೆ.ಎಂ.ಎಫ್ ಜತೆ ಮಾತನಾಡಿ ಅಗತ್ಯ ಇಂಡೆಂಟ್ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಪಡಿತರ ವಿತರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರಲ್ಲದೇ ನೋಂದಣಿ ಮಾಡಿಕೊಂಡಿರದ ಕಾರ್ಮಿಕರಿಗೂ ಸರ್ಕಾರದ ಸಹಾಯಧನ ನೀಡುವ ಬಗ್ಗೆ ಪರಿಶೀಲಿಸಲು ಸಲಹೆ ನೀಡಿದರು.

ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಸುರೇಶ್ ಅಂಗಡಿ ಅವರು ಮಾತನಾಡಿ, ಐಸೋಲೇಷನ್ ವಾರ್ಡನಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಿರುವ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಗರದ ಪ್ರದೇಶದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜನಸಂಚಾರ ನಿಯಂತ್ರಿಸಲು ಇನ್ನಷ್ಟು ಬಿಗಿ ಕ್ರಮದ ಅಗತ್ಯವಿದೆ ಎಂದು ಶಾಸಕ ಅಭಯ್ ಪಾಟೀಲ್ ಪ್ರತಿಪಾದಿಸಿದರು.
ದಿನಸಿ ಅಂಗಡಿ ಮತ್ತು ತರಕಾರಿ ಖರೀದಿ ನೆಪದಲ್ಲಿ ಜನರು ಸಾಮಾಜಿಕ ಅಂತರ ಪಾಲಿಸದಿರುವುದು ಕಂಡುಬಂದಿದೆ ಎಂದು ಸಭೆಯ ಗಮನಕ್ಕೆ ತಂದರು.
ಶಾಸಕ ಅನಿಲ್ ಬೆನಕೆ ಅವರು, ಸಂಸ್ಥೆಯ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ನಿಗಾ ವಹಿಸಬೇಕಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರುವಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿಯನ್ನು ಒದಗಿಸಿದರು.

ದೆಹಲಿಗೆ ಹೋಗಿ ಬಂದವರು ೯೬ ಅದರಲ್ಲಿ ೮೦ ಜನರ ಪತ್ತೆ ಮಾಡಲಾಗಿದೆ. ಉಳಿದ ಹದಿನಾರು ಜನರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ. ಅವರ ಬಗ್ಗೆ ಆಯಾ ರಾಜ್ಯಕ್ಕೆ ಮಾಹಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ದೆಹಲಿಯಿಂದ ಬಂದ ೮೦ ಜನರ ಪೈಕಿ ೩೩ ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ೩ ಜನರ ವರದಿ ಪಾಸಿಟಿವ್ ಬಂದಿದ್ದು, ೩೦ ನೆಗೆಟಿವ್ ವರದಿ ಬಂದಿರುತ್ತದೆ.
ಎಲ್ಲ ೮೦ ಜನರ‌ ಆರೋಗ್ಯ ತಪಾಸಣೆ ಮಾಡಿ ವಯಸ್ಸು, ಮತ್ತಿತರ ಕಾರಣಕ್ಕೆ ೩೩ ಜನರ ಮಾದರಿ ಕಳಿಸಲಾಗಿತ್ತು ಎಂದು ವಿವರಿಸಿದರು.
೩ ಜನ ಪಾಸಿಟಿವ್ ಇರುವವರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡ ಗುರುತಿಸಿ, ಅರೋಗ್ಯ ತಪಾಸಣೆ ಮಾಡಿ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು.

ಮೂರು ಪ್ರದೇಶ ಕಂಟೈನ್ಮೆಂಟ್ ಝೋನ್:

ಪಾಸಿಟಿವ್ ಪ್ರಕರಣ ವರದಿಯಾಗಿರುವ ಹಿರೇಬಾಗೇವಾಡಿ, ಬೆಳಗುಂದಿ ಮತ್ತು ನಗರದ ಕ್ಯಾಂಪ್ ಪ್ರದೇಶದ ಕಸಾಯಿಗಲ್ಲಿಯನ್ನು ನಿಷೇಧಿತ ಪ್ರದೇಶ ( ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ, ಜನಸಂಚಾರ ಮತ್ತು ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವ ವೈದ್ಯರಿಗೆ ಈಗಾಗಲೇ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.
ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ,
ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
***

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *