Breaking News

ನೌಕರಿ ಬೇಕಾ.‌..ನೌಕರಿ ….ಹಾಗಾದ್ರೆ ಹೊಡಿ ಒಂಬತ್ತ್ ಸರ್ಟಿಪಿಕೇಟ್ ತಗೊಂಡ ಬೆಳಗಾವಿ ಗಾಡಿ ಹತ್ತ್….!!!!!!

ಪ್ರಾದೇಶಿಕ ಉದ್ಯೋಗ ಮೇಳ: ಸಿದ್ಧತೆ ಪೂರ್ಣ
—————————————————————
ಹನ್ನೆರಡು ಸಾವಿರ ಅಭ್ಯರ್ಥಿಗಳ ನೋಂದಣಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ,
ನಿರುದ್ಯೋಗಿ ಯುವಕ-ಯುವತಿಯರಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪ್ರಾದೇಶಿಕ ಉದ್ಯೋಗ ಮೇಳ ೨೦೨೦ ಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮೇಳದ ಯಶಸ್ವಿಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ನಿರುದ್ಯೋಗಿಗಳಿಗಾಗಿ ಬೆಳಗಾವಿಯ ಶಿವಬಸವ ನಗರದ ಎಸ್. ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬೃಹತ್ ಪ್ರಾದೇಶಿಕ ಉದ್ಯೋಗ ಮೇಳವನ್ನು ಫೆ.೨೮ ಹಾಗೂ ೨೯ ರಂದು ಹಮ್ಮಿಕೊಳ್ಳಲಾಗಿದೆ.

ಬೆಳಗಾವಿ, ಜಿಲ್ಲಾಡಳಿತ ಬೆಳಗಾವಿ, ಧಾರವಾಡ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಈ ಮೇಳವನ್ನು ಆಯೋಜಿಸಲಾಗಿರುತ್ತದೆ.

ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಅಚ್ಚುಕಟ್ಟಾಗಿ ಮೇಳವನ್ನು ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾಲೇಜಿನ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ಉದ್ಯೋಗದಾತ ಕಂಪೆನಿಗಳು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಸಂದರ್ಶನ ನಡೆಸಲು ಅನುಕೂಲವಾಗುವಂತೆ ವಿವಿಧ ಅಳತೆಯ ೭೫ ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇದರ ಜತೆಗೆ ಹೆಚ್ಚುವರಿಯಾಗಿ ಕಾಲೇಜಿನ ಸುಮಾರು ೨೦ ಕೊಠಡಿಗಳನ್ನು ಕೂಡ ಪಡೆಯಲಾಗಿದೆ.

ಸಂದರ್ಶನಕ್ಕೆ ಪ್ರವೇಶಪತ್ರ ಕಡ್ಡಾಯ:

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ನಿರುದ್ಯೋಗಿಗಳು ಈಗಾಗಲೇ ಪ್ರಾದೇಶಿಕ ಉದ್ಯೋಗ ಮೇಳದ ಅಂಗವಾಗಿ ಅಭಿವೃದ್ಧಿಪಡಿಸಲಾಗಿರುವ ವಿಶೇಷ ಅಂತರ್ಜಾಲ ತಾಣ (www.belagaviudyogamela.in) ದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರುತ್ತಾರೆ.

ಹೀಗೆ ಹೆಸರು ನೋಂದಾಯಿಸಿಕೊಂಡಿರುವವರು ಮೇಳ ನಡೆಯುವ ದಿನಗಳಂದು ಬೆಳಿಗ್ಗೆ ಎಂಟು ಗಂಟೆಗೆ ಆಗಮಿಸಿ ವಿದ್ಯಾರ್ಹತೆವಾರು ಅಥವಾ ಕಂಪನಿವಾರು ನಿಗದಿಪಡಿಸಿದ ಕೌಂಟರ್ ಗಳಲ್ಲಿ ಪ್ರವೇಶಪತ್ರಗಳನ್ನು ಪಡೆದುಕೊಂಡು ಆಯಾ ಕಂಪನಿಗಳ ಮಳಿಗೆಗಳಿಗೆ ತೆರಳಿ ಸಂದರ್ಶನವನ್ನು ನೀಡಬೇಕಾಗುತ್ತದೆ.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಬಿ.ಇ., ಐಟಿಐ/ಡಿಪ್ಲೋಮಾ ಹೀಗೆ ಒಂದೊಂದು ವಿದ್ಯಾರ್ಹತೆಗೆ ಬೇರೆ ಬೇರೆ ಬಣ್ಣದ ಪ್ರವೇಶಪತ್ರಗಳನ್ನು ಮುದ್ರಿಸಲಾಗಿದೆ.

ಆದ್ದರಿಂದ ಈಗಾಗಲೇ ಹೆಸರು ನೋಂದಣಿ ಮಾಡಿದವರು ಅಥವಾ ನೇರವಾಗಿ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೌಂಟರ್ ಗಳಲ್ಲಿ ಪ್ರವೇಶಪತ್ರಗಳನ್ನು ಪಡೆದುಕೊಂಡರೆ ಮಾತ್ರ ಸಂದರ್ಶನಕ್ಕೆ ಅವಕಾಶ ಲಭಿಸಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊಡ್ಡಬಸವರಾಜ್ ತಿಳಿಸಿದ್ದಾರೆ.

ಉದ್ಯೋಗ ಮೇಳದ ಹಿಂದಿನ ದಿನವಾದ ಗುರುವಾರ(ಫೆ.೨೭) ಸಂಜೆಯವರೆಗೆ 12 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುತ್ತಾರೆ.

ಅದೇ ರೀತಿ ಐಟಿ-ಬಿಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಮಾರ್ಕೆಟಿಂಗ್, ಸೇಲ್ಸ್ ಆ್ಯಂಡ್ ರಿಟೇಲ್, ಟೆಲಿಕಾಂ, ಬಿಪಿಓ, ಟೆಕ್ಸಟೈಲ್, ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್, ಹಾಸ್ಪಿಟಲ್, ಫಾರ್ಮಾಸಿಟಿಕಲ್, ಹೆಲ್ತ್ ಕೇರ್, ಮ್ಯಾನುಫ್ಯಾಕ್ಟರಿಂಗ್, ಟ್ರಾನ್ಸಪೋರ್ಟ್, ಹಾಸಿಟ್ಯಾಲಿಟಿ, ಹೋಂ ನರ್ಸಿಂಗ್, ಆಹಾರ ಸಂಸ್ಕರಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ವಿವಿಧ ಬಗೆಯ ಒಟ್ಟು ೧೬೨ ಕಂಪನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿರುತ್ತವೆ.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಘಟಕಗಳ ನಾಲ್ಕು ನೂರು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದು, ಅಭ್ಯರ್ಥಿಗಳಿಗೆ ನೆರವು ನೀಡಲಿದ್ದಾರೆ.

ಅಗತ್ಯ ದಾಖಲಾತಿಗಳು:
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಗಮಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳು ಮತ್ತು ಬಯೋಡಾಟಾ ದ ಮೂರು ಪ್ರತಿಗಳನ್ನು ತರಬೇಕು.
ಇದರೊಂದಿಗೆ ಮೂರು ಭಾವಚಿತ್ರಗಳು ಮತ್ತು ಆಧಾರ ಮತ್ತಿತರ ಅಗತ್ಯ ದಾಖಲಾತಿಗಳನ್ನು ಕಡ್ಡಾಯವಾಗಿ ತರಬೇಕು. ಮೇಳದಲ್ಲಿ ಭಾಗವಹಿಸಿರುವ ಕಂಪನಿಗಳ ಮಾಹಿತಿಯನ್ನು ಬೃಹತ್ ಫಲಕಗಳ ಮೇಲೆ ಪ್ರದರ್ಶಿಸಲಾಗುತ್ತಿದ್ದು, ಒಬ್ಬ ಅಭ್ಯರ್ಥಿಯು ಗರಿಷ್ಠ ಮೂರು ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಬಹುದು ಎಂದು ದೊಡ್ಡಬಸವರಾಜ್ ತಿಳಿಸಿದ್ದಾರೆ.

ರಸ್ತೆ ನಿರ್ಮಾಣ ಕಾರ್ಯ ನಡೆದಿರುವುದರಿಂದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸ್ವಲ್ಪ ದೂರದಲ್ಲಿ ಕಲ್ಪಿಸಲಾಗಿರುತ್ತದೆ.
ವೇದಿಕೆ, ಮಳಿಗೆ ಸೇರಿದಂತೆ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಬೃಹತ್ ಉದ್ಯೋಗ ಮೇಳಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ.
ಎರಡೂ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಫೆ.೨೭ ರ ಸಂಜೆಯವರೆಗೆ ೧೨ ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿರುತ್ತಾರೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕೋರಿದ್ದಾರೆ.
****

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *