ಮಹಾರಾಷ್ಟ್ರದ ಶಾಲೆಯ ದಾಖಲೆ
ಮರಾಠಿಯಲ್ಲಿದ್ದರೂ ಕನ್ನಡದಲ್ಲಿಯೇ
ವಿವರಗಳನ್ನು ತುಂಬಿದ್ದಲ್ಲದೇ
” ಕರ್ನಾಟಕ ರಾಜ್ಯ”ಎಂದೂ ಬರೆದ
ಮನದಾಳದ ಇಚ್ಛೆಯನ್ನು ಪ್ರಕಟಿಸಿದ
ಗುಗವಾಡ ಶಾಲಾ ಮುಖ್ಯಾಧ್ಯಾಪಕರು!
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ
ಜತ್ತ ತಾಲೂಕಿನ ಗುಗವಾಡ ಗ್ರಾಮದ
ಈ ಶಾಲೆಯ ಮುಖ್ಯಾಧ್ಯಾಪಕರು ನೀಡಿದ
ಟಿಸಿ( ವರ್ಗಾವಣೆ ಪ್ರಮಾಣಪತ್ರ)ಈಗ
ವೈರಲ್ ಆಗಿದೆ.
ಅಚ್ಚ ಕನ್ನಡ ಪ್ರದೇಶಗಳಾದ ಜತ್ತ
ತಾಲೂಕಿನ 44 ಹಳ್ಳಿಗಳ ಪೈಕಿ ಗುಗವಾಡ
ಗ್ರಾಮವೂ ಒಂದಾಗಿದೆ.ಇಲ್ಲಿಯ ಶಾಲೆಯ
ಮುಖ್ಯಾಧ್ಯಾಪಕರು ರಾಹುಲ್ ಚೌಗುಲೆ
ಎಂಬವರಿಗೆ ನೀಡಿದ ಟಿಸಿ ಯ ಫಾರ್ಮು
ಸಂಪೂರ್ಣ ಮರಾಠಿಯಲ್ಲಿಯೇ ಇದೆ.
ಆದರೆ ವಿದ್ಯಾರ್ಥಿಯ ವಿವರಗಳನ್ನೆಲ್ಲ
ಅಚ್ಚ ಕನ್ನಡದಲ್ಲಿಯೇ ತುಂಬಲಾಗಿದೆ.
ಅಲ್ಲದೇ “ರಾಜ್ಯ ಕರ್ನಾಟಕ”ಎಂದೂ
ನಮೂದಿಸಲಾಗಿದೆ!
1966 ರ ಅಕ್ಟೋಬರ್ 25 ರಂದು
ನೇಮಕವಾಗಿ 1967 ರ ಅಗಷ್ಟ 25 ರಂದು
ವರದಿ ನೀಡಿದ ಮೆಹರ್ ಚಂದ ಮಹಾಜನ
ಆಯೋಗದ ಶಿಫಾರಸಿನ ಪ್ರಕಾರ ಜತ್ತ
ಹಾಗೂ ಅಕ್ಕಲಕೋಟೆ ತಾಲೂಕಿನ ನೂರಾರು
ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತವೆ.
1970 ರಲ್ಲಿ ಲೋಕಸಭೆಯಲ್ಲಿ ಮಂಡಿಸಲ್ಪಟ್ಟ
ಮಹಾಜನ ವರದಿಯು ಜಾರಿಯಾಗದೇ
ಹಾಗೆಯೇ ಧೂಳು ತಿನ್ನುತ್ತಲೇ ಬಿದ್ದಿದೆ.
ಮಹಾರಾಷ್ಟ್ರದ ಕನ್ನಡಿಗರು
ಕರ್ನಾಟಕ ಮತ್ತು ಕನ್ನಡಿಗರ ಜೊತೆಗೆ
ಹೊಂದಿರುವ ಭಾವನಾತ್ಮಕ ಸಂಬಂಧ
ಶಬ್ದಗಳಲ್ಲಿ ವಿವರಿಸುವಂಥದ್ದಲ್ಲ.ಹೊರನಾಡ
ಕನ್ನಡಿಗರ ತುಡಿತವನ್ನು ಅರ್ಥ
ಮಾಡಿಕೊಳ್ಳಲು ಕರ್ನಾಟಕ ಸರಕಾರ
ಮತ್ತು ಇಲ್ಲಿಯ ನಾಯಕರಿಗೆ ಈಗಲೂ
ಸಾಧ್ಯವಾಗುತ್ತಿಲ್ಲ.ಅಲ್ಲಿಯ ಕನ್ನಡಿಗರಿಗೆ
ಸಿಗಬೇಕಾದ ಸಹಾಯ ಸವಲತ್ತುಗಳ
ಬಗೆಗೂ ಇವರು ತಲೆಕೆಡಿಸಿಕೊಂಡಿಲ್ಲ.
ಕರ್ನಾಟಕದ ಗಡಿ ಭಾಗದ ಮರಾಠಿಗರಿಗೆ
ನಮ್ಮ ಸರಕಾರ ನೀಡುತ್ತಿರುವ ಸಹಾಯ
ಸವಲತ್ತುಗಳ ಅರ್ಧದಷ್ಟೂ ನೆರವು
ಮಹಾರಾಷ್ಟ್ರ ಸರಕಾರ ನೀಡಿಲ್ಲ.
ಗುಗವಾಡ ಗ್ರಾಮದ ಒಂದು
ಶಾಲೆಯ ಟಿಸಿ ಯಲ್ಲಿ ಕನ್ನದ ಆನ್ನೆ
ತುಂಬಿ ಕರ್ನಾಟಕ ರಾಜ್ಯ ಎಂದು
ಬರೆದಿರಬೇಕಾದರೆ ಅಲ್ಲಿಯ ಕನ್ನಡಿಗರ
ಮನದಾಳದಲ್ಲಿ ಏನಿದೆ ಎಂಬುದನ್ನು
ಅರ್ಥ ಮಾಡಿಕೊಳ್ಳಬಹುದು.ಮಹಾರಾಷ್ಟ್ರ
ಗೋವೆ,ಕೇರಳ,ತಮಿಳುನಾಡು,ಆಂಧ್ರ
ಮತ್ತು ತೆಲಂಗಾಣ ರಾಜ್ಯಗಳಲ್ಲಿಯ
ಕನ್ನಡಿಗರ ಸಮಸ್ಯೆಗಳನ್ನು ಅರ್ಥ
ಮಾಡಿಕೊಂಡು ಪರಿಹರಿಸಲು ಪ್ರಸಕ್ತ
ಸಿದ್ದರಾಮಯ್ಯ ಸರಕಾರ ಗಂಭೀರವಾದ
ಪ್ರಯತ್ನ ಮಾಡಬಹುದೆ?
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ
9620114466