ಬೆಳಗಾವಿ:
19ನೇ ಶತಮಾನದಲ್ಲಿಯೇ ಶಿಕ್ಷಣ ಕ್ರಾಂತಿ ಆರಂಭಿಸಿ ಈಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಕೆಎಲ್‍ಇ ಸಂಸ್ಥೆ ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಗೌರವನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತ ಸಮಾಜದ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ತಂತ್ರಜ್ಞಾನ, ಸಂಶೋಧನೆ ಹಾಗೂ ವೈದ್ಯಕೀಯ ಸೇವೆ ನೀಡುತ್ತ ಸಶಕ್ತ ಸಮಾಜದಲ್ಲಿ ನಿರ್ಮಾಣವಾಗಿರುವದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ ಗಡಕರಿ ಅವರಿಂದಿಲ್ಲಿ ಶ್ಲಾಘಿಸಿದರು.
ಕೆಎಲ್‍ಇ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಸಮಾರಂಭದಲ್ಲಿ ದಿ. 17 ನವೆಂಬರ 2016ರಂದು ಕೆಎಲ್‍ಇ ಅಂತರಾಷ್ಟ್ರೀಯ ಶಾಲೆಯನ್ನು ಉದ್ಘಾಟನೆ ನೆರವೇರಿಸಿದರು. ನಂತರ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಮೊದಲು ಶಿಕ್ಷಕರಿದ್ದರೆ ಕಟ್ಟಡಗಳಿರುತ್ತಿರಲಿಲ್ಲ. ಕಟ್ಟಡಗಳಿದ್ದರೆ ವಿದ್ಯಾರ್ಥಿಗಳಿರುತ್ತಿರಲಿಲ್ಲ. ಈ ಮೂರು ಇದ್ದರೂ ತರಗತಿಗಳು ನಡೆಯುತ್ತಿರಲಿಲ್ಲ. ಆದರೆ ಈ ಕೊರತೆಯನ್ನು ಕೆಎಲ್‍ಇ ಸಂಸ್ಥೆಯು ತೊಡೆದು ಹಾಕಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಮಹಾರಾಷ್ಟ್ರದಲ್ಲಿ ಅನೇಕ ಸಂಸ್ಥೆಗಳಿದ್ದರೂ ಕೆಲ ವಿಷಯಗಳಲ್ಲಿ ವಿಫಲವಾಗಿವೆ. ಅದನ್ನು ಸರಿಪಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸಂಶೋಧನೆಗಳು ಭಾರತದಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ ಅವುಗಳ ಪ್ರತಿಫಲ ಜನರಿಗೆ ಮುಟ್ಟುತ್ತಿಲ್ಲ. ಸಂಶೋಧನೆಯ ಹಕ್ಕಿಗಾಗಿ ಅಮೇರಿಕದಲ್ಲಿ ಪ್ರತಿವರ್ಷ 2 ಲಕ್ಷ, ಚೀನಾದಲ್ಲಿ 40 ಸಾವಿರ ನೊಂದಾಯಿಸಿದರೆ, ಭಾರತದಲ್ಲಿ ಕೇವಲ 2 ಸಾವಿರ ಮಾತ್ರ. ಸಂಶೋಧನೆ ಮತ್ತು ತಂತ್ರಜ್ಞಾನ ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸುವ ಸಾಧನಗಳು. ದೃಷ್ಟಿಯನ್ನು ದಾನ ಮಾಡಬಹುದು ಆದರೆ ದೂರದೃಷ್ಟಿಯನ್ನಲ್ಲ. ಆದ್ದರಿಂದಲೇ ಕೆಎಲ್‍ಇ ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗಳ ದೂರದೃಷ್ಟಿಯ ಫಲ ಇಂದು ಸಮಾಜದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದೆ. ಅದನ್ನು ಮುನ್ನಡೆಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ತಂಡದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಭವಿಷ್ಯದಲ್ಲಿ ಭಾರತ ವಿಶ್ವದ ನಂ 1 ಸ್ಥಾನದಲ್ಲಿರಬೇಕಾದರೆ ಯುವಜನರ ಪಾತ್ರ ಅತ್ಯಂತ ಮುಖ್ಯ. ಯಾವ ಕಾರ್ಯದಲ್ಲಿ ನಿಷ್ಠೆ ಇದೆಯೋ ಅದೇ ಕಾರ್ಯದಲ್ಲಿ ಮುಂದೆವರೆಯಿರಿ. ಮೂಲಭೂತ ಸೌಲಭ್ಯಗಳಿಲ್ಲದೇ ಅಭಿವೃದ್ದಿ ಅಸಾಧ್ಯ. ಮುಖ್ಯವಾಗಿ ಔದ್ಯೋಗೀಕರಣ ಮತ್ತು ಕೃಷಿಗೆ ಅಗತ್ಯವಿರುವ ನೀರಿನ ಸೌಲಭ್ಯ ನೀಡಬೇಕಾಗಿದೆ. ದೇಶದ 11 ರಾಜ್ಯಗಳಲ್ಲಿ ಮಾತ್ರ ನೀರಿನ ಸಮಸ್ಯೆಯಿದ್ದು, ಪಂಜಾಬ ಮತ್ತು ಹರ್ಯಾಣದಲ್ಲಿ ಶೇ. 92ರಷ್ಟು, ಮಹಾರಾಷ್ಟ್ರದಲ್ಲಿ ಶೇ. 18.8 ನೀರಾವರಿ ಇದ್ದರೆ ಕರ್ನಾಟಕದಲ್ಲಿ ಶೆ. 24 ರಷ್ಟು ಮಾತ್ರ ಇದೆ. ನದಿ ನೀರಿನಲ್ಲಿ ಉಳಿಯುವ ಶೇ. 30ಕ್ಕೆ ನಾವು ಜಗಳ ಮಾಡುತ್ತಿದ್ದೇವೆ. ಇದಕ್ಕೆಲ್ಲ ನದಿಗಳ ಜೋಡಣೆ ಮೂಲಕ ಪರಿಹಾರ ಕಲ್ಪಿಸಬೇಕಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಜಲಶಿವಾರ ಎಂಬ ಆಂದೋಲನ ಮೂಲಕ ನೀರಿನ ಸಂಗ್ರಹ ಮಾಡಲಾಗುತ್ತಿದೆ. ಅಭಿವೃದ್ದಿ ಸಾಧಿಸಬೇಕಾದರೆ ತಂತ್ರಜ್ಞಾನ ವಿದ್ಯುತ್, ಸಂವಹನ ಅತ್ಯವಶ್ಯ ಎಂದು ವಿವರಿಸಿದರು.
ಇನ್ಫೊಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಸಾಮಾಜಿಕ ಸಬಲೀಕರಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಕಾಲಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಿರುವ ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ಎಲ್ಲ ಸ್ತರದಲ್ಲೂ ಅವುಗಳನ್ನು ತಡೆದುಕೊಂಡು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರವ ಕೆಎಲ್‍ಇ ಸಂಸ್ಥೆಯು ಸಮಾಜದ ಸಬಲೀಕರಣಕ್ಕೆ ತನ್ನದೇ ಆದ ಲೊಡುಗೆಯನ್ನು ನೀಡಿದೆ. ಮದ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮಹೋನ್ನತ ಕಾರ್ಯದಲ್ಲಿ ತೊಡಗಿಕೊಂಡಿದೆ. ಉತ್ತಮವಾದ ವಿದ್ಯಾಭ್ಯಾಸದ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ದೇಶದ ಆರ್ಥಿಕಾಭಿವೃದ್ದಿಗೆ ಮುನ್ನುಡಿಯನ್ನು ಬರೆದಿದೆ. ಕೆಎಲ್‍ಇ ಸಂಸ್ಥೆ ನಿಜವಾಗಿಯೂ ಕಾಮಧೇನು ಕಲ್ಪವೃಕ್ಷ ಎಂದ ಅವರು, ಈ ಸಂಸ್ಥೆ ಇರದಿದ್ದರೆ ಇನ್ಫೊಸಿಸ್ ಹುಟ್ಟುತ್ತಿರಲಿಲ್ಲ. ಅದಕ್ಕಾಗಿ ಸಪ್ತರ್ಷಿಗಳಿಗೆ, ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ. ಪ್ರಭಾಕರ ಕೋರೆ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಶಿಕ್ಷಣ, ವೈದ್ಯಕೀಯ ಸೇವೆ ನೀಡುತ್ತಿರುವ ಸಂಸ್ಥೆ ಕಳೆದ 15 ವರ್ಷಗಳಲ್ಲಿ 16 ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಂಶೋದನೆ ನಡೆಸುತ್ತಿದೆ. ಖಾಸಗಿ ವಿಶ್ವಿದ್ಯಾಲಯಗಳಲ್ಲಿಯೇ ಅತ್ಯಧಿಕ ವೆಚ್ಚವನ್ನು ಕೇವಲ ಸಂಶೋಧನೆಗಾಗಿ ವಿನಿಯೋಗಿಸುತ್ತಿದೆ ಎಂದ ಅವರು, ಮುಂಬರುವ 2020ರ ಒಲಂಪಿಕ್‍ನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸುವರ್ಣ ಪದಕ ಪಡೆದುಕೊಳ್ಳಲು ತಯಾರಿ ಈಗಾಗಲೇ ನಡೆಸಲಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಅಮೇರಿಕದ ಡಾ. ರಿಚರ್ಡ ಡರ್ಮನ್ ಹಾಗೂ ಬ್ಯಾಡ್ಮಿಂಟನ್ ಪಟು ಪ್ರಾರ್ಥನಾ ತೊಂಬರೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಿ ಎಂ ಉದಾಸಿ ಅವರನ್ನು ಸತ್ಕರಿಸಲಾಯಿತು. ವೇದಿಕೆಯ ಮೇಲೆ ಅಶೋಕಣ್ಣ ಬಾಗೇವಾಡಿ,ಶಿವಾನಂದ ಕೌಜಲಗಿ, ಮಹಾಂತೇಶ ಕವಟಗಿಮಠ ಅವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಸಿ ಮೆಟಗುಡ ಅವರು ವಹಿಸಿದ್ದರು.
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …