Breaking News
Home / Breaking News / ಬೆಳಗಾವಿಯಲ್ಲಿ ಅದ್ದೂರಿ ಕನಕದಾಸರ ಜಯಂತಿ

ಬೆಳಗಾವಿಯಲ್ಲಿ ಅದ್ದೂರಿ ಕನಕದಾಸರ ಜಯಂತಿ

ಬೆಳಗಾವಿ,
“ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯಾವುದು ಬಲ್ಲಿರಾ…?” ಎಂದು ಪ್ರಶ್ನಿಸಿರುವ ದಾಸಶ್ರೇಷ್ಠ ಕನಕದಾಸರಿಗೆ ನಾವು ಗೌರವ ಸಲ್ಲಿಸಬೇಕಾದರೆ ಮೊದಲು ನಾವು ಜಾತ್ಯಾತೀತ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಜಾತ್ಯತೀತರಾದರೆ ಅದು ಕನಕನಿಗೆ ಸಲ್ಲುವ ನಿಜವಾದ ಗೌರವ” ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
“ದಾಸ ಸಾಹಿತ್ಯ ಪರಂಪರೆಯ ಮೇರುಶಿಖರವಾಗಿರುವ ಕನಕದಾಸರು ಕ್ಲಿಷ್ಟ ವಿಷಯಗಳು ಹಾಗೂ ವೈಚಾರಿಕ ಚಿಂತನೆಗಳನ್ನು ಆಡುಭಾಷೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಸಾಹಿತ್ಯಲೋಕದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ವೈಚಾರಿಕತೆಯ ಕೀರ್ತನೆಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ” ಎಂದು ಜಯರಾಮ್ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು, ಅನೇಕ ಕೀರ್ತನಕಾರರು ಧರ್ಮ, ಆಚರಣೆಗೆ ಆದ್ಯತೆ ನೀಡಿದರೆ ದಾಸಶ್ರೇಷ್ಠ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜ್ಞಾನಕ್ಕೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.
“ಜ್ಞಾನ ಮತ್ತು ಶಿಕ್ಷಣದ ಹಸಿವು ತುಂಬಿರುವ ಕನಕದಾಸರ ಕೀರ್ತನೆಗಳಲ್ಲಿ ಮಾತ್ರ ಲೋಕಪ್ರೀತಿಯನ್ನು ಕಾಣಿಸುತ್ತದೆ. ಪಾಳೆಗಾರಿಕೆ ಹಾಗೂ ವೈಭೋಗದ ಜೀವನ ಬಿಟ್ಟು ತಂಬೂರಿ ಹಿಡಿದ ಕನಕ ವೈಚಾರಿಕತೆಯ ಬೀಜ ಬಿತ್ತಿದರು. ಬುದ್ಧ-ಬಸವಣ್ಣ ಕೂಡ ಇದೇ ಕೆಲಸವನ್ನು ಮಾಡಿದ್ದರು” ಎಂದು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಕನಕದಾಸರ ಬದುಕು ಸರ್ವಕಾಲಕ್ಕೂ ಆದರ್ಶಪ್ರಾಯ ಎಂದರು.
ಕನಕದಾಸರು ಕೃತಿ ಬಿಡುಗಡೆ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನಕ ಜಯಂತ್ಯುತ್ಸವದ ಅಂಗವಾಗಿ ಹೊರತಂದಿರುವ “ಸಂತಕವಿ ಕನಕದಾಸರು” ಕೃತಿಯನ್ನು ಜಿಲ್ಲಾಧಿಕಾರಿ ಎನ್.ಜಯರಾಮ್ ಬಿಡುಗಡೆಗೊಳಿಸಿದರು.
ಕನಕದಾಸರ ಸಾಹಿತ್ಯ ಕುರಿತ ಜಿಲ್ಲಾಮಟ್ಟದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶಶಿಧರ ಕುರೇರ, ತಹಶೀಲ್ದಾರ ಗಿರೀಶ್ ಸ್ವಾದಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಯಲ್ಲಪ್ಪ ಕುರಬರ ಸೇರಿದಂತೆ ಸಮಾಜದ ಅನೇಕ ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು, ಮಹಾನ್‍ದಾರ್ಶನಿಕ ಕನಕದಾಸರ ಜಯಂತಿ ಆಚರಿಸುವ ಮೂಲಕ ಅವರ ವೈಚಾರಿಕ ಚಿಂತನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದರು.
ನೆಹರೂ ಯುವಕೇಂದ್ರದ ಜಿಲ್ಲಾ ಸಂಯೋಜಕ ಎಸ್.ಯು.ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಉಮಾಮಹೇಶ್ವರಿ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಿಎಡ್ ಕಾಲೇಜಿನ ವಿದ್ಯಾರ್ಥಿನಿಯರು ಕೀರ್ತನೆಗಳನ್ನು ಪ್ರಸ್ತುಪಡಿಸಿದರು. ಗುರುನಾಥ ಶಾಸ್ತ್ರಿ ಕರಿಕಟ್ಟಿ ಅವರು ಕಥಾ ಕೀರ್ತನ ನಡೆಸಿಕೊಟ್ಟರು.
ಇದಕ್ಕೂ ಮುನ್ನ ಬೆಳಗಾವಿ ನಗರದ ಕನಕದಾಸ ವೃತ್ತದಿಂದ ಕುಮಾರಗಂಧರ್ವ ರಂಗಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು.  ಜಿಲ್ಲಾಧಿಕಾರಿ ಎನ್.ಜಯರಾಮ್ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಮೇಯರ್ ಸರಿತಾ ಪಾಟೀಲ, ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *